ಕರ್ನಾಟಕ

karnataka

By

Published : Dec 15, 2020, 2:36 PM IST

ETV Bharat / state

ಗೋ ಹತ್ಯೆ ನಿಷೇಧ ಕಾಯಿದೆ ಜಾರಿಗೆ ಜೆಡಿಎಸ್ ವಿರೋಧ: ದೇವೇಗೌಡ

ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ 2020 ಅನ್ನು ನಮ್ಮ ಪಕ್ಷ ಸಂಪೂರ್ಣವಾಗಿ ವಿರೋಧಿಸುತ್ತದೆ. ರಾಜ್ಯದಲ್ಲಿ ಉಂಟಾದ ಬದಲಾವಣೆಯಲ್ಲಿ ಈ ಮಸೂದೆಯನ್ನು ವಾಪಸ್ ಪಡೆದು ನಿಷ್ಕ್ರೀಯಗೊಳಿಸಲಾಗಿದೆ. ಆದರೂ ಬಿಜೆಪಿ ಸರ್ಕಾರ ಮತ್ತೊಮ್ಮೆ ಈ ವಿಧೇಯಕವನ್ನು ವಿಧಾನಮಂಡಲದಲ್ಲಿ ಮಂಡಿಸಿದೆ ಎಂದು ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

HD Deve Gowda
ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ

ಬೆಂಗಳೂರು:ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ 2020ನ್ನು ನಮ್ಮ ಪಕ್ಷ ಸಂಪೂರ್ಣವಾಗಿ ವಿರೋಧಿಸುತ್ತದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಹೇಳಿದ್ದಾರೆ.

ರಾಜ್ಯ ಸರ್ಕಾರ ಈ ಮಸೂದೆಯನ್ನು ವಿಧಾನಮಂಡಲದಲ್ಲಿ ಮಂಡಿಸಿ ಸಮಾಜದಲ್ಲಿ ಅಶಾಂತಿ ಮತ್ತು ಜನರ ಬಾಳನ್ನು ಅಲ್ಲೋಲ, ಕಲ್ಲೋಲ ಮಾಡಲು ಹೊರಟಿದೆ ಎಂದು ಮಾಧ್ಯಮ ಹೇಳಿಕೆಯಲ್ಲಿ ದೂರಿದ್ದಾರೆ.

ರಾಜ್ಯದಲ್ಲಿ 1964ರ ಗೋಹತ್ಯೆ ನಿಷೇಧ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ ಜಾರಿಯಲ್ಲಿದ್ದು, ಕಾಯ್ದೆಯಲ್ಲಿರುವ ನಿಬಂಧನೆಗಳನ್ನು ಉಲ್ಲಂಘಿಸಿದವರ ಮೇಲೆ ವಿಧಿಸಬಹುದಾದ ದಂಡ, ಜುಲ್ಮಾನೆ ಇತರ ದಂಡನೆಗಳ ಬಗ್ಗೆ ಸೆಕ್ಷನ್ 12, 13 ಮೊದಲಾದವುಗಳಲ್ಲಿ ಅವಕಾಶವಿದೆ. ಆದರೂ ಬಿಜೆಪಿ ಸರ್ಕಾರ 2010ರಲ್ಲಿ ಮಂಡನೆ ಮಾಡಿದ್ದ ವಿಧೇಯಕದಲ್ಲಿ ಈ ಕಾಯ್ದೆಯಲ್ಲಿನ ದಂಡನೆ, ಜುಲ್ಮಾನೆ ಇತರೆ ದಂಡನೆಗಳನ್ನು 1 ರಿಂದ 7 ಪಟ್ಟು ಹೆಚ್ಚಳ ಮಾಡಿತ್ತು.

ಓದಿ:ಪರಿಷತ್​ನಲ್ಲಿ ಎಡವಿದ ಗೋ ಹತ್ಯೆ ನಿಷೇಧ ವಿಧೇಯಕ: ಹಾದಿ ಸುಗಮಗೊಳಿಸಲು ಸರ್ಕಾರ ಮಾಸ್ಟರ್​ ಪ್ಲಾನ್​?

ಕೆಲವೊಂದು ಸಮುದಾಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಗೋ ಹತ್ಯೆಗೆ ವಿಧಿಸಬಹುದಾದ ದಂಡದ ಪ್ರಮಾಣವನ್ನು ಹೆಚ್ಚಳ ಮಾಡಿತ್ತು. ಆಗ ವಿಧೇಯಕವನ್ನು ಪ್ರತಿಪಕ್ಷಗಳಾದ ಕಾಂಗ್ರೆಸ್-ಜೆಡಿಎಸ್ ವಿರೋಧಿಸಿ ಸದನದಲ್ಲಿ ಧರಣಿ ನಡೆಸಲಾಗಿತ್ತು. ಧರಣಿಯ ನಡುವೆ ಸದನದಲ್ಲಿ ಬಿಜೆಪಿ ಸರ್ಕಾರ ವಿಧೇಯಕವನ್ನು ಪಾಸ್ ಮಾಡಿಕೊಂಡು ರಾಜ್ಯಪಾಲರ ಅನುಮೋದನೆಗೆ ಕಳುಹಿಸಿ ಕೊಟ್ಟಿದ್ದರು. ಅಂದಿನ ರಾಜ್ಯಪಾಲರನ್ನು ನನ್ನ ಪಕ್ಷದ ಮುಖಂಡರೊಂದಿಗೆ ನಾವು ಭೇಟಿ ಮಾಡಿ ವಿಧೇಯಕಕ್ಕೆ ಅಂಗೀಕಾರ ನೀಡಬಾರದೆಂದು ಮನವಿ ಮಾಡಿಲಾಗಿತ್ತು.

ವಿಧೇಯಕದಲ್ಲಿ ಅಡಕವಾಗಿರುವ ಕೆಲವೊಂದು ನಿಬಂಧನೆಗಳೊಂದಿಗೆ ಕೇಂದ್ರ ಸರ್ಕಾರಕ್ಕೆ ರಾಷ್ಟ್ರಪತಿಗಳ ಅಂಗೀಕಾರ ಬೇಕೆಂದು ರಾಜ್ಯಪಾಲರು ಕಳುಹಿಸಿಕೊಟ್ಟಿದ್ದರು. ಕೇಂದ್ರ ಸರ್ಕಾರ ಈ ವಿಧೇಯಕವನ್ನು ರಾಷ್ಟ್ರಪತಿಗಳ ಅಂಗೀಕಾರಕ್ಕೆ ಕಳುಹಿಸಿದಾಗ ಮತ್ತೆ ನಮ್ಮ ಪಕ್ಷದ ಮುಖಂಡರೊಂದಿಗೆ ನಾನು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ಅವರನ್ನು ಭೇಟಿ ಮಾಡಿ ಮಸೂದೆಯಲ್ಲಿರುವ ಹಲವು ನಿಬಂಧನೆಗಳು, ಸಮಾಜದಲ್ಲಿರುವ ಸಮುದಾಯಗಳಿಗೆ ಮತ್ತು ರೈತ ಸಮುದಾಯಕ್ಕೆ ಮಾರಕ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದೆವು. ನಂತರ ರಾಜ್ಯದಲ್ಲಿ ಉಂಟಾದ ಬದಲಾವಣೆಯಲ್ಲಿ ಈ ಮಸೂದೆಯನ್ನು ವಾಪಸ್ ಪಡೆದು ನಿಷ್ಕ್ರೀಯಗೊಳಿಸಲಾಗಿದೆ. ಆದರೂ ಬಿಜೆಪಿ ಸರ್ಕಾರ ಮತ್ತೊಮ್ಮೆ ಈ ವಿಧೇಯಕವನ್ನು ವಿಧಾನಮಂಡಲದಲ್ಲಿ ಮಂಡಿಸಿದೆ ಎಂದು ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details