ಬೆಂಗಳೂರು: ಪ್ರತಿಷ್ಠಿತ ಬಿಎಂಎಸ್ ಸಾರ್ವಜನಿಕ ಶಿಕ್ಷಣ ಟ್ರಸ್ಟ್ನಲ್ಲಿನ ಅಕ್ರಮಗಳ ತನಿಖೆಗೆ ಒತ್ತಾಯಿಸಿ ವಿಧಾನಸಭೆಯಲ್ಲಿ ಜೆಡಿಎಸ್ ಶಾಸಕರು ಇಂದು ಧರಣಿ ನಡೆಸಿದರು. ಈ ಧರಣಿಯನ್ನು ಆಹೋರಾತ್ರಿ ನಡೆಸಲು ಮುಂದಾಗಿದ್ದರು. ಆದರೆ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೂಕ್ತ ಉತ್ತರ ನೀಡುವ ಭರವಸೆಯ ಜೊತೆಗೆ ತನಿಖೆಗೂ ನಿರ್ಧಾರ ಹೇಳಿದ ಹಿನ್ನೆಲೆ ಜೆಡಿಎಸ್ ನಾಯಕರು ಧರಣಿ ಕೈಬಿಟ್ಟಿದ್ದಾರೆ.
ಬಿಎಂಎಸ್ ಶಿಕ್ಷಣ ಟ್ರಸ್ಟ್ನಲ್ಲಿನ ಅಕ್ರಮಗಳ ಬಗ್ಗೆ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಸಮರ್ಪಕ ಉತ್ತರ ನೀಡಿಲ್ಲ. ತನಿಖೆ ನಡೆಸುವ ಬೇಡಿಕೆಗೆ ಸ್ಪಂದಿಸಿಲ್ಲವೆಂದು ಆಕ್ಷೇಪಿಸಿ ಸದನದಲ್ಲಿ ಜೆಡಿಎಸ್ ಸದಸ್ಯರು ಧರಣಿಗೆ ಮುಂದಾದರು. ಈ ವೇಳೆ, ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸದನವನ್ನು ನಾಳೆಗೆ ಮುಂದೂಡಿದ್ದರಿಂದ ಆಹೋರಾತ್ರಿ ಧರಣಿ ನಡೆಸತೊಡಗಿದರು.
ಬಸವರಾಜ ಬೊಮ್ಮಾಯಿ ಭರವಸೆ: ಮೊದಲು ಸಚಿವರಾದ ಮಾಧುಸ್ವಾಮಿ, ಆನಂದ್ ಸಿಂಗ್ ಹಾಗೂ ಶ್ರೀರಾಮುಲು ಹಾಗೂ ಸ್ಪೀಕರ್ ಕಾಗೇರಿ ಅವರು ಜೆಡಿಎಸ್ ನಾಯಕರ ಮನವೊಲಿಸಲು ಪ್ರಯತ್ನಿಸಿದರು. ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರನ್ನು ಧರಣಿ ಕೈಬಿಡುವಂತೆ ಕೋರಿಕೊಂಡರು. ಆದರೆ, ಇವರ ಮಾತಿಗೆ ಬೆಂಬಲ ಸಿಗದಿದ್ದಾಗ ಮನವರಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದಾದರು. ನಾಳೆ ಬೆಳಗ್ಗೆ ಸದನದಲ್ಲಿ ಉತ್ತರ ಕೊಡಲಾಗುತ್ತದೆ ಹಾಗೂ ಈ ಉತ್ತರದಲ್ಲಿ ತನಿಖೆ ಸೂಕ್ತ ನಿರ್ಧಾರ ಮಾಡುವ ಭರವಸೆ ನೀಡಿದರು. ಹೀಗಾಗಿ ಜೆಡಿಎಸ್ ನಾಯಕರು ಧರಣಿ ಕೈಬಿಟ್ಟರು.