ಕರ್ನಾಟಕ

karnataka

ETV Bharat / state

ಜೆಡಿಎಸ್​​ನಲ್ಲಿ ಹಲವರ ಅಸಮಾಧಾನ: ತೆನೆ ಇಳಿಸುತ್ತಾರೆ ಈ ನಾಯಕರು!? - ಗುಬ್ಬಿ ಶಾಸಕ ಶ್ರೀನಿವಾಸ್ ಜೆಡಿಎಸ್​ ವಿರುದ್ಧ ಅಸಮಾಧಾನ

ಕಾಂಗ್ರೆಸ್-ಜೆಡಿಎಸ್ ಸಮಬಲ ಸಾಮರ್ಥ್ಯ ಹೊಂದಿರುವ ಹಳೇ ಮೈಸೂರು ಹಾಗೂ ಬಯಲುಸೀಮೆ ಜಿಲ್ಲೆಗಳಲ್ಲಿ ಜೆಡಿಎಸ್ ನಾಯಕರು ನಿಧಾನವಾಗಿ ಕಾಂಗ್ರೆಸ್​​ನತ್ತ ಮುಖ ಮಾಡಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಇಂಬು ನೀಡುವಂತೆ ಗುಬ್ಬಿ ಶಾಸಕ ಶ್ರೀನಿವಾಸ್, ಚಾಮುಂಡೇಶ್ವರಿ ಕ್ಷೇತ್ರ ಶಾಸಕ ಜಿ.ಟಿ.ದೇವೇಗೌಡ, ಮಾಜಿ ಶಾಸಕರಾದ ವೈಎಸ್​​ವಿ ದತ್ತಾ, ಮಧು ಬಂಗಾರಪ್ಪ ಮತ್ತಿತರ ನಾಯಕರು ತಮ್ಮ ಬೇಸರ ಹೊರಹಾಕಿದ್ದಾರೆ.

jds mlas expressing dissatisfaction with party
ಜೆಡಿಎಸ್​​ನಲ್ಲಿ ಭುಗಿಲೆದ್ದ ಅಸಮಾಧಾನ

By

Published : Jan 2, 2021, 2:52 PM IST

ಬೆಂಗಳೂರು:ಜೆಡಿಎಸ್ ಪಕ್ಷ ಮುಳುಗುತ್ತಿರುವ ಹಡಗಾಗಿ ಹಲವು ನಾಯಕರಿಗೆ ಗೋಚರಿಸುತ್ತಿದ್ದು, ತಮ್ಮ ರಾಜಕೀಯ ಅಸ್ತಿತ್ವದ ಉಳಿವಿಗಾಗಿ 'ಕೈ-ಕಮಲ' ಹಿಡಿಯಲು ಮುಂದಾಗುತ್ತಿದ್ದಾರೆ ಎಂಬ ಮಾತು ಬಲವಾಗಿ ಕೇಳಿ ಬರುತ್ತಿದೆ.

ಇತ್ತೀಚಿನ ದಿನಗಳಲ್ಲಿ ಬಿಜೆಪಿ ಜತೆ ಜೆಡಿಎಸ್ ವಿಲೀನವಾಗಲಿದೆ ಎಂಬ ಮಾತು ಬಲವಾಗಿ ಕೇಳಿ ಬರುತ್ತಿದೆ. ಬಿಜೆಪಿ ಜತೆ ಜೆಡಿಎಸ್ ವಿಲೀನವಾಗುವುದಿಲ್ಲ ಎಂದು ಪಕ್ಷದ ವರಿಷ್ಠರು ಎಷ್ಟೇ ಸಮಜಾಯಿಷಿ ನೀಡುತ್ತಿದ್ದರೂ ಅದನ್ನು ಕೇಳಿಸಿಕೊಳ್ಳುವ ತಾಳ್ಮೆ ಹಲವು ನಾಯಕರಲ್ಲಿ ಕಾಣಿಸುತ್ತಿಲ್ಲ. ತಮ್ಮ ರಾಜಕೀಯ ಬದುಕಿನುದ್ದಕ್ಕೂ ಬಿಜೆಪಿಯಿಂದ ಅಂತರ ಕಾಪಾಡಿಕೊಂಡ ಕಾರಣಕ್ಕೇ ಗೆಲ್ಲುತ್ತಿರುವ ಹಾಗೂ ಕಾಂಗ್ರೆಸ್-ಜೆಡಿಎಸ್ ಸಮಬಲ ಸಾಮರ್ಥ್ಯ ಹೊಂದಿರುವ ಹಳೇ ಮೈಸೂರು ಹಾಗೂ ಬಯಲುಸೀಮೆ ಜಿಲ್ಲೆಗಳಲ್ಲಿ ಜೆಡಿಎಸ್ ನಾಯಕರು ನಿಧಾನವಾಗಿ ಕಾಂಗ್ರೆಸ್​​ನತ್ತ ಮುಖ ಮಾಡಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಪೂರಕವಾಗಿ ತಮ್ಮ ಅಸಮಾಧಾನ ಹಾಗೂ ಬೇಸರ ಹೊರ ಹಾಕಿದ್ದಾರೆ.

ಕೆಲ ದಿನಗಳಿಂದ ಜೆಡಿಎಸ್ ಪಕ್ಷ ಬಿಜೆಪಿಯಲ್ಲಿ ವಿಲೀನವಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ. ಈ ಮಾತು ಬಂದ ಬೆನ್ನಲ್ಲೇ ಪಕ್ಷ ನಿಷ್ಠರು ಹಾಗೂ ಕೊಂಚ ಗೊಂದಲದಲ್ಲಿ ಪಕ್ಷದಲ್ಲಿ ಉಳಿದುಕೊಂಡವರು, ಈಗಾಗಲೇ ಪಕ್ಷಕ್ಕೆ ಬೆನ್ನು ಹಾಕಿರುವ ನಾಯಕರು ಬೇಸರದ ನುಡಿಯನ್ನಾಡುತ್ತಿದ್ದಾರೆ. ತಾವು ಪಕ್ಷ ನಿಷ್ಠರು, ಆದರೆ ಪಕ್ಷವೇ ನಿಷ್ಠೆ ಬದಲಿಸಿದೆ ಎಂಬ ಧಾಟಿಯಲ್ಲಿ ಮಾತುಗಳನ್ನಾಡಿ ತಮ್ಮನ್ನು ನಂಬಿರುವ ಕಾರ್ಯಕರ್ತರ ಮನವೊಲಿಸುವ ಯತ್ನ ಮಾಡುತ್ತಿದ್ದಾರೆ. ಇದರ ಜತೆ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಜಾರಿಗೆ ತರಲು ಬಿಜೆಪಿ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಕ್ಕೂ ಸಾಕಷ್ಟು ನಾಯಕರು ಬೇಸರ ವ್ಯಕ್ತಪಡಿಸಿದ್ದಾರೆ.

ಗುಬ್ಬಿ ಶಾಸಕ ಶ್ರೀನಿವಾಸ್, ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡ, ಮಾಜಿ ಶಾಸಕರಾದ ವೈಎಸ್​ವಿ ದತ್ತಾ, ಮಧು ಬಂಗಾರಪ್ಪ ಮತ್ತಿತರ ನಾಯಕರು ತಮ್ಮ ಬೇಸರ ಹೊರಹಾಕಿದ್ದಾರೆ. ಸಾಕಷ್ಟು ನಾಯಕರು ಮೌನವಾಗಿದ್ದು, ಜೆಡಿಎಸ್​ನಲ್ಲಿ ಉಳಿದರೆ ಅಸ್ತಿತ್ವ ಇಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ. ಇದರಿಂದ ಹಲವರು ಕಾಂಗ್ರೆಸ್ ಪಕ್ಷದತ್ತ, ಕೆಲವರು ಬಿಜೆಪಿಯತ್ತ ಮುಖ ಮಾಡಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆ ವೇಳೆಗೆ ತಾನು ಹೊಂದಿದ್ದ ಕ್ಷೇತ್ರದಲ್ಲೇ ಮತ್ತೆ ಗೆಲ್ಲುವ ಅಭ್ಯರ್ಥಿ ಹುಡುಕುವುದು ಜೆಡಿಎಸ್​ಗೆ ಕಷ್ಟಸಾಧ್ಯವಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ.

ವೈಎಸ್​​ವಿ ದತ್ತಾ ಬಹಿರಂಗ ಕಾರ್ಯಕ್ರಮವೊಂದರಲ್ಲಿಯೇ ಬೇಸರ ಹೊರಹಾಕಿದ್ದು, ಯಾವುದೇ ಪಕ್ಷಕ್ಕಾದರೂ ಒಂದು ಸ್ಪಷ್ಟ ನಿಲುವಿರಬೇಕು. ಇಲ್ಲದೇ ಇದ್ದರೆ ನಾವು ಜನರ ಮಧ್ಯೆ ನಗೆಪಾಟಲಿಗೀಡಾಗಬೇಕಾಗುತ್ತದೆ. ಆಗ ತನ್ನಿಂದ ತಾನೇ ಪಕ್ಷ ದುರ್ಬಲವಾಗುತ್ತದೆ ಎಂದಿದ್ದಾರೆ. ಇನ್ನು ಈಗಾಗಲೇ ಕಾಂಗ್ರೆಸ್ ಸೇರುವ ಸೂಚನೆ ನೀಡಿರುವ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್, ಒಂದು ವೇಳೆ ಕುಮಾರಸ್ವಾಮಿಯವರು ಬಿಜೆಪಿ ಜೊತೆ ಮೈತ್ರಿಗೆ ಮುಂದಾದರೆ ಹಲವು ಶಾಸಕರು ಹಾಗೂ ಮುಖಂಡರು ಪಕ್ಷವನ್ನು ತೊರೆಯಲಿದ್ದಾರೆ ಎಂದು ಹೇಳಿದ್ದಾರೆ. ಜೆಡಿಎಸ್ ಪಕ್ಷ ಜಾತ್ಯಾತೀತ ಸಿದ್ಧಾಂತದ ಮೇಲೆ ರಚನೆಯಾಗಿದೆ. ಕುಮಾರಸ್ವಾಮಿಯವರು ಬಿಜೆಪಿ ಜೊತೆ ಹೊಂದಾಣಿಕೆಯ ಮೈತ್ರಿಗೆ ಮುಂದಾದರೆ ಪಕ್ಷವನ್ನು ಹಲವು ಮಂದಿ ತೊರೆದು ತಮ್ಮ ದಾರಿ ತಾವು ಕಂಡುಕೊಳ್ಳಲಿದ್ದಾರೆ ಎಂದಿದ್ದಾರೆ.

ಪ್ರಬಲ ಪ್ರಾದೇಶಿಕ ಪಕ್ಷವಾಗಿ ಜನತಾ ಪರಿವಾರದಿಂದ ಜೆಡಿಎಸ್​​ವರೆಗೆ ಹಲವು ಮುಖ್ಯಮಂತ್ರಿಗಳು, ಒಬ್ಬ ಪ್ರಧಾನಿ, ಹಲವು ಪಕ್ಷದಲ್ಲಿ ಇಂದು ಆಯಕಟ್ಟಿನ ಸ್ಥಾನದಲ್ಲಿರುವ ನಾಯಕರನ್ನು ಸೃಷ್ಟಿಸಿದ್ದ ಪ್ರಮುಖ ಪ್ರಾದೇಶಿಕ ಪಕ್ಷ ಇದೀಗ ಅವಸಾನದ ಅಂಚು ತಲುಪಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಪಕ್ಷ ನಿಷ್ಠೆ ನಾಯಕರಲ್ಲಿ ಇಲ್ಲವಾದ ಕಾರಣ ಇಂತದ್ದೊಂದು ದುಸ್ಥಿತಿ ಜೆಡಿಎಸ್​ಗೆ ಎದುರಾಗಿರುವುದು ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ:ಬೆಳಗಾವಿಯಲ್ಲಿ ಕನ್ನಡ ಧ್ವಜ ಸ್ಥಾಪಿಸಿದ ನಂತರದ ಘಟನೆಗಳನ್ನು ಕೂಡಲೇ ಪರಿಶೀಲಿಸಿ: ಹೆಚ್​ಡಿಕೆ ಒತ್ತಾಯ

ABOUT THE AUTHOR

...view details