ಬೆಂಗಳೂರು:ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಜೆಡಿಎಸ್ ಮುಖಂಡ ಹಾಗೂ ಶಾಸಕ ಜಿ.ಟಿ. ದೇವೇಗೌಡ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ನಂತರ ಸುದ್ದಿಗಾರರ ಜೊತೆ ಮಾತನಾಡಿದ ಜಿ.ಟಿ. ದೇವೇಗೌಡ, ತಮಿಳುನಾಡು ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್ ಪಕ್ಷದವರು ಅಭ್ಯರ್ಥಿ ಹಾಕಿದ್ರಾ? ಹಾಗೇಯೇ ಕರ್ನಾಟಕ ಉಪ ಚುನಾವಣೆಯಲ್ಲಿಯೂ ಜೆಡಿಎಸ್ನವ್ರು ಅಭ್ಯರ್ಥಿ ಹಾಕೋ ಅವಶ್ಯಕತೆ ಇರ್ಲಿಲ್ಲ. ಅಭಿವೃದ್ಧಿ ದೃಷ್ಟಿಯಿಂದ ಯಾವುದಾದರೂ ಪಕ್ಷವನ್ನ ಬೆಂಬಲಿಸಬೇಕಿತ್ತು ಎಂದು ಹೇಳುವ ಮೂಲಕ ಉಪಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಭ್ಯರ್ಥಿಯನ್ನು ಕಣಕ್ಕಿಳಿಸಬಾರದಿತ್ತು ಎಂದು ಅಭಿಪ್ರಾಯಪಟ್ಟರು.
ಪಕ್ಷದ ವಿರುದ್ಧವೇ ಬೇಸರ ವ್ಯಕ್ತಪಡಿಸಿದ ಜಿಟಿಡಿ ಅಭಿವೃದ್ಧಿ ದೃಷ್ಟಿಯಿಂದ ವಿಪಕ್ಷಗಳು ಬಿಜೆಪಿಯನ್ನ ಬೆಂಬಲಿಸಬೇಕು. ಯಡಿಯೂರಪ್ಪ ಅಭಿವೃದ್ಧಿ ಅಭಿವೃದ್ಧಿ ಅಂತಾರೆ. ಅವರನ್ನು ಬೆಂಬಲಿಸಬೇಕು. ಯಡಿಯೂರಪ್ಪ ಕೆಲಸ ಮಾಡ್ತಾರೆ. ಹೀಗಾಗಿ ಅವರೇ ಮುಂದಿನ ಮೂರುವರೆ ವರ್ಷ ಅಧಿಕಾರ ನಡೆಸಲಿ. ಉಪ ಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧೆ ಮಾಡೋ ಅವಶ್ಯಕತೆ ಇರ್ಲಿಲ್ಲ. ಸರ್ಕಾರ ಉಳಿಸುವ ಬಗ್ಗೆ ನಮ್ಮ ನಾಯಕರೇ ಹೇಳ್ತಿದ್ರು. ಜನರೂ ಅದರ ಪ್ರಕಾರ ಮತ ಹಾಕಿದ್ದಾರೆ ಎಂದು ಹೇಳಿದರು.
ಎಲ್ಲಾ ಒಂದೇ ಪಕ್ಷ ಮಾಡ್ಕೊಂಡ್ರೆ ಅಭಿವೃದ್ಧಿ ಆಗೋದಿಲ್ಲ. ಮೂರುವರೆ ವರ್ಷ ಆಡಳಿತ ಪಕ್ಷಕ್ಕೆ ಬೆಂಬಲ ಕೊಡ್ಬೇಕಿದೆ. ಹೋಗೋವ್ರು ಹೋಗ್ತಾರೆ. ಅರಾಮಾಗಿ ಇರ್ಬೇಕಿತ್ತು. ಏನಾಗ್ತಿರ್ಲಿಲ್ಲ. ಕರ್ನಾಟಕದಲ್ಲಿ ಜನ ಬುದ್ದಿವಂತರಿದ್ದಾರೆ. ಸುಭದ್ರ ಸರ್ಕಾರ ಬೇಕು ಅಂತಿದ್ದಾರೆ ಎಂದರು.
ಹುಣಸೂರು ಉಪ ಚುನಾವಣೆ ವಿಚಾರ ಪ್ರಸ್ತಾಪ ಮಾಡಿ, ನನ್ನ ಮಗ ಹರೀಶ್ ಯಾವ ಪಕ್ಷಕ್ಕೂ ಸೇರಿದವನಲ್ಲ. ಬಿಜೆಪಿ ಮುಖಂಡ ಸಿ.ಪಿ. ಯೋಗೇಶ್ ಅವರು, ಏಕವಚನದಲ್ಲಿ ಮಾತಾಡಿದ್ದಾರೆ. ಒಕ್ಕಲಿಗರು ಹೆಚ್ಚಾಗಿರುವ ಊರಿಗೆ ಹೋಗಿ ಯಾರವನು ಜಿಟಿಡಿ, ದೇವೇಗೌಡ ಯಾರು ಅಂತೆಲ್ಲಾ ಮಾತಾಡಿದ್ದಾರೆ. ಹೀಗಾಗಿ ಅಲ್ಲಿಯ ಜನ ಅವರು ಕೊಟ್ಟ ಸೀರೆ ಬೀದಿಗೆ ಎಸೆದು ಸಿಡಿದೆದ್ದಿದ್ದಾರೆ ಎಂದು ವಿವರಿಸಿದರು.
ಜಿ.ಟಿ. ದೇವೇಗೌಡ ಬಿಜೆಪಿಗೆ ಸೇರುವ ವಿಚಾರ ಕುರಿತು ಮಾತನಾಡಿ, ರಾಜ್ಯದಲ್ಲಿ ಮೂರು ವರ್ಷದ ನಂತರ ಮುಂದಿನ ಚುನಾವಣೆಯಲ್ಲಿ ರಾಜಕೀಯ ಧ್ರುವೀಕರಣ ಆಗಲಿದೆ. ಮುಂದಿನ ಮೂರು ವರ್ಷ ಯಾರು ಯಾವ ಪಕ್ಷದಲ್ಲಿ ಇರ್ತಾರೆ ಹೋಗ್ತಾರೆ ಅನ್ನೋದು ಗೊತ್ತಾಗುತ್ತೆ. ಈಗ ಜೆಡಿಎಸ್ ಪಕ್ಷದಲ್ಲಿ ಇದ್ದೀನಿ. ಮೂರು ವರ್ಷದ ನಂತರ ರಾಜಕೀಯ ಯಾವ ದಿಕ್ಕಿಗೆ ತಿರುಗುತ್ತೆ ಆಗ ನಿರ್ಧಾರ ಮಾಡೋಣ ಎಂದರು.