ಬೆಂಗಳೂರು :ಜೆಡಿಎಸ್ ಪಕ್ಷದ ರೆಬೆಲ್ ಶಾಸಕರು ಇದುವರೆಗೂ ಹೊಂದಿದ್ದ ಕಾಂಗ್ರೆಸ್ ಮೇಲಿನ ಆಸಕ್ತಿಯನ್ನು ಕಳೆದುಕೊಂಡಿರುವುದು ರಾಜ್ಯಸಭೆಗೆ ನಡೆದ ಚುನಾವಣೆ ಮತದಾನದ ಮೂಲಕ ಬಹಿರಂಗವಾಗಿದೆ. ಕೋಲಾರ ಶಾಸಕ ಶ್ರೀನಿವಾಸಗೌಡ, ಗುಬ್ಬಿ ಶಾಸಕ ಶ್ರೀನಿವಾಸ್, ಚಾಮುಂಡೇಶ್ವರಿ ಶಾಸಕ ಜಿಟಿ ದೇವೇಗೌಡ, ಅರಸಿಕೆರೆ ಶಾಸಕ ಶಿವಲಿಂಗೇಗೌಡ, ಅರಕಲಗೂಡು ಶಾಸಕ ಎ ಟಿ ರಾಮಸ್ವಾಮಿ ಪಕ್ಷದ ರಾಜ್ಯ ನಾಯಕರ ವಿರುದ್ಧ ಬೇಸರಗೊಂಡಿದ್ದು ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಚಲಾಯಿಸಲಿದ್ದಾರೆ ಎಂದು ಹೇಳಲಾಗಿತ್ತು. ಈ ಎಲ್ಲಾ ಶಾಸಕರು ಅಂತಿಮವಾಗಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿ ಕೈ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲಿದ್ದಾರೆ ಎಂಬ ಮಾತುಗಳು ಸಹ ಕೇಳಿಬಂದಿದ್ದವು.
ಕಾಂಗ್ರೆಸ್ ಜೊತೆ ಮಾತುಕತೆ ನಡೆಸಿರುವ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ ಟಿ ದೇವೇಗೌಡ ತಾವು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದಲೂ ಹಾಗೂ ತಮ್ಮ ಪುತ್ರನಿಗೆ ಹುಣಸೂರು ಕ್ಷೇತ್ರದಿಂದ ಟಿಕೆಟ್ ನೀಡುವಂತೆ ಮನವಿ ಮಾಡಿ ಯಶಸ್ವಿಯಾಗಿದ್ದರು ಎಂಬ ಮಾತು ಸಹ ಕೇಳಿಬಂದಿತ್ತು. ಅದೇ ರೀತಿ ಕಾಂಗ್ರೆಸ್ ನಾಯಕರು ಕಡೆಯ ಕ್ಷಣದವರೆಗೂ ಗುಬ್ಬಿ ಶಾಸಕ ಶ್ರೀನಿವಾಸ್ ಸಂಪರ್ಕದಲ್ಲಿದ್ದರು. ಬಹುತೇಕ ಐದು ಮಂದಿ ಕಾಂಗ್ರೆಸ್ ಪರ ಅಡ್ಡಮತದಾನ ಮಾಡಲಿದ್ದಾರೆ ಎಂಬ ವಿಶ್ವಾಸ ಕಾಂಗ್ರೆಸ್ ನಾಯಕರದ್ದಾಗಿತ್ತು. ಈ ಮೂಲಕ ತಮ್ಮ ಎರಡನೇ ಅಭ್ಯರ್ಥಿ ಮನ್ಸೂರ್ ಅಲಿಖಾನ್ ರನ್ನು ಗೆಲ್ಲಿಸಿಕೊಳ್ಳುವ ತಂತ್ರಗಾರಿಕೆಯನ್ನು ಕಾಂಗ್ರೆಸ್ ರೂಪಿಸಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಜೆಡಿಎಸ್ ಶಾಸಕರು ಕಾಂಗ್ರೆಸ್ ನತ್ತ ಒಲವು ಕಡಿಮೆ ಮಾಡಿಕೊಂಡಿದ್ದಾರೆ ಎಂಬ ವಸ್ತುಸ್ಥಿತಿ ರಾಜ್ಯಸಭೆ ಚುನಾವಣೆ ಮತದಾನದ ಮೂಲಕ ಹೊರಬಿದ್ದಿದೆ.
ಜೆಡಿಎಸ್ ನಾಯಕರಿಗೆ ಕಾಂಗ್ರೆಸ್ ಬಗ್ಗೆ ಅಸಮಾಧಾನ :ಕಡೆಯ ಕ್ಷಣದವರೆಗೂ ಕಾಂಗ್ರೆಸ್ ಪರ ಮತ ಚಲಾಯಿಸುವ ಭರವಸೆ ನೀಡಿದ್ದ ಗುಬ್ಬಿ ಶಾಸಕ ಶ್ರೀನಿವಾಸ್ ಉಲ್ಟಾ ಹೊಡೆದು ಬಿಜೆಪಿಗೆ ಮತ ನೀಡಿದ್ದರು. ಈ ಮೂಲಕ ತುಮಕೂರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ಗೆ ಪರ್ಯಾಯವಾಗಿ ಬಿಜೆಪಿ ಜನಪ್ರಿಯತೆ ಸಾಧಿಸುತ್ತಿದ್ದು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತಾವು ಯಾವ ಪಕ್ಷದಿಂದ ಸ್ಪರ್ಧಿಸಬೇಕು ಎಂಬುದನ್ನು ಈಗಲೇ ನಿರ್ಧರಿಸಬಾರದು ಎಂದು ತೀರ್ಮಾನಿಸಿದ್ದಾರೆ.
ತುಮಕೂರು ಹಾಗೂ ಹಾಸನ ಜಿಲ್ಲೆಯಲ್ಲಿ ಬಿಜೆಪಿ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅವಕಾಶ ಸಿಕ್ಕರೆ ಬಿಜೆಪಿಯಿಂದಲೇ ಸ್ಪರ್ಧಿಸುವೆ, ಇಲ್ಲವೇ ಜೆಡಿಎಸ್ ನಲ್ಲಿ ಮುಂದುವರಿಯುವ ಅನುಮಾನವನ್ನು ಶಿವಲಿಂಗೇಗೌಡ ಹಾಗೂ ಶ್ರೀನಿವಾಸ್ ಮಾಡಿದ್ದಾರೆ ಎಂಬ ಮಾಹಿತಿ ಇದೆ. ಜಿ ಟಿ ದೇವೇಗೌಡ ಬಿಜೆಪಿ ಹಾಗೂ ಕಾಂಗ್ರೆಸ್ ಜೊತೆ ಸಮಾನ ಸಂಪರ್ಕ ಹೊಂದಿದ್ದು, ಮುಂಬರುವ ದಿನಗಳಲ್ಲಿ ತಮ್ಮ ನಿರ್ಧಾರ ಕೈಗೊಳ್ಳಲಿದ್ದಾರೆ. ಒಂದೊಮ್ಮೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದರೆ ಸರ್ಕಾರ ರಚನೆಗೆ ಜೆಡಿಎಸ್ ಪಕ್ಷ ನಿರ್ಣಾಯಕ ಸ್ಥಾನ ವಹಿಸಲಿದೆ. ಈ ಹಿನ್ನೆಲೆ ಜೆಡಿಎಸ್ ನಲ್ಲೇ ಇದ್ದು ಶಾಸಕರಾದರೆ ಜನರ ವಿಶ್ವಾಸದ ಜೊತೆ ಮುಂದೆ ಸಚಿವರಾಗುವ ಅವಕಾಶವೂ ಒದಗಿ ಬರಬಹುದು ಎಂಬ ನಿರೀಕ್ಷೆ ಜಿ ಟಿ ದೇವೇಗೌಡ ಹಾಗೂ ಎ ಟಿ ರಾಮಸ್ವಾಮಿ ಅವರಿಗೆ ಇದೆ ಎನ್ನಲಾಗುತ್ತಿದೆ.