ಬೆಂಗಳೂರು: ಎತ್ತಿನಹೊಳೆ ಯೋಜನೆಯಿಂದ ಚಿಕ್ಕಬಳ್ಳಾಪುರಕ್ಕೆ ನೀರು ಕೊಡಲು ಸಾಧ್ಯವೇ ಇಲ್ಲ. ಕೇವಲ ಚುನಾವಣಾ ಕಾರಣಕ್ಕಾಗಿ ಸುಳ್ಳು ಭರವಸೆ ನೀಡಲಾಗಿದೆ. ಒಂದು ವೇಳೆ ಚಿಕ್ಕಬಳ್ಳಾಪುರಕ್ಕೆ ಎತ್ತಿನ ಹೊಳೆಯಿಂದ ನೀರು ಬಂದಿದ್ದೇ ಆದಲ್ಲಿ ನೇಣಿಗೇರಲು ನಾನು ಸಿದ್ಧ ಎಂದು ಜೆಡಿಎಸ್ ಸದಸ್ಯ ಭೋಜೇಗೌಡ ಸರ್ಕಾರಕ್ಕೆ ಸವಾಲೆಸೆದಿದ್ದಾರೆ.
ವಿಧಾನಪರಿಷತ್ ಕಲಾಪದಲ್ಲಿ ನಿಯಮ 72 ರ ಅಡಿ ಎತ್ತಿನಹೊಳೆ ಯೋಜನೆ ಕುರಿತು ಕಾಂಗ್ರೆಸ್ ಸದಸ್ಯ ರಾಜೇಂದ್ರ ರಾಜಣ್ಣ ಪ್ರಸ್ತಾಪಿಸಿ, ಯೋಜನೆ ಜಾರಿ ಕುರಿತು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಭೂಸ್ವಾಧೀನ ಸಮಸ್ಯೆ ಇದೆ. ನಮ್ಮ ಸರ್ಕಾರಕ್ಕೆ ಬದ್ಧತೆ ಇಲ್ಲ ಎನ್ನುವುದು ಸುಳ್ಳು. ನಮ್ಮ ಸರ್ಕಾರ ಇದ್ದಾಗಲೇ ಯೋಜನೆ ಮಂಜೂರು ಮಾಡಿದ್ದು, ಹಿಂದೆ ಕಾಂಗ್ರೆಸ್ ಸರ್ಕಾರವೇ ಇತ್ತು. ಆಗ ಪರಮೇಶ್ವರ್ಗೆ ಅಧಿಕಾರವಿತ್ತು. ಅವರು ಡಿಸಿಎಂ ಆಗಿದ್ದರು, ಆಗ ಯಾಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.
2013ರಲ್ಲಿ ದೇಶಕ್ಕೆ ಅನ್ವಯ ಆಗುವ ಭೂ ಸ್ವಾಧೀನ ಕಾಯ್ದೆ ಬಂತು. ಗೈಡ್ ಲೈನ್ಸ್ ದರದ ನಾಲ್ಕು ಪಟ್ಟು ಪರಿಹಾರ ಕೊಡಲು ಅವಕಾಶ ಕಲ್ಪಿಸಲಾಗಿದೆ. ಊರಿಂದ ಊರಿಗೆ ಗೈಡ್ ಲೈನ್ಸ್ ದರ ಬದಲಾಗುತ್ತದೆ, ಹೆಚ್ಚು ಪ್ರಮಾಣದಲ್ಲಿ ಕೊಟ್ಟ ಪರಿಹಾರವನ್ನೇ ಉದಾಹರಿಸಿಕೊಂಡು ಎಲ್ಲಾ ಕಡೆ ಪರಿಹಾರ ಕೊಡಲು ಸಾಧ್ಯವಿಲ್ಲ?. ಹಾಗಾದಲ್ಲಿ ಯಾವುದೇ ಯೋಜನೆ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ರೈತರಿಂದ ನೇರ ಖರೀದಿಗೆ ಮುಂದಾಗಿದ್ದೇವೆ. 2 ಟಿಎಂಸಿ ಸಂಗ್ರಹ ಸಾಮರ್ಥ್ಯ ಇದ್ದರೂ 10 ಟಿಎಂಸಿ ನೀರು ಬಳಕೆಗೆ ಕ್ರಮ ವಹಿಸಲಾಗುತ್ತದೆ. ಹಾಸನ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ ಸೇರಿ ಏಳು ಜಿಲ್ಲೆಗೆ ಉಪಯೋಗವಾಗಲಿದೆ ಎಂದರು.
ಇದನ್ನೂ ಓದಿ:ನಾವು ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ: ಹೆಚ್ಡಿಕೆ
ಈ ವೇಳೆ ಮಧ್ಯಪ್ರವೇಶ ಮಾಡಿದ ಜೆಡಿಎಸ್ನ ಭೋಜೇಗೌಡ, ಇದು ಚುನಾವಣೆ ದೃಷ್ಟಿಯಿಂದ ಮಾಡುತ್ತಿರುವ ಯೋಜನೆ. ಎತ್ತಿನಹೊಳೆಯಿಂದ ಚಿಕ್ಕಬಳ್ಳಾಪುರಕ್ಕೆ ನೀರು ತಲುಪಲ್ಲ. ಇದೊಂದು ಕಾಮಧೇನು, ಯಾರ್ಯಾರಿಗೆ ಈ ಕಾಮಧೇನುವಿನಿಂದ ಅನುಕೂಲ ಆಗಲಿದೆ ಎಂದು ನಾನು ಹೇಳಲ್ಲ. ಕೆಲವರಿಗೆ ಮಾತ್ರ ಲಾಭದಾಯಕ ಯೋಜನೆ ಇದು. ಎತ್ತಿನಹೊಳೆ ಜಾರಿ ಆಗಿ ಚಿಕ್ಕಬಳ್ಳಾಪುರಕ್ಕೆ ನೀರು ಬಂದಲ್ಲಿ ನಾನು ನೇಣಿಗೇರಲು ಸಿದ್ಧ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.