ಕರ್ನಾಟಕ

karnataka

ETV Bharat / state

ಅರಮನೆ ಮೈದಾನದಲ್ಲಿ ನಾಳೆ ಜೆಡಿಎಸ್ ಮಹತ್ವದ ಸಭೆ: ಲೋಕಸಭೆ ಚುನಾವಣೆ, ಮೈತ್ರಿ ಕುರಿತು ಚರ್ಚೆ - ಅರಮನೆ ಮೈದಾನದ ನಲಪಾಡ್ ಪೆವಿಲಿಯನ್

ಲೋಕಸಭೆ ಚುನಾವಣೆ ಹಿನ್ನೆಲೆ ನಾಳೆ ಜೆಡಿಎಸ್ ಪಕ್ಷವು​ ಅರಮನೆ ಮೈದಾನದಲ್ಲಿ ಕಾರ್ಯಕರ್ತರ ಮಹತ್ವದ ಸಭೆ ಹಮ್ಮಿಕೊಂಡಿದೆ.​

jds-meeting-tomorrow-at-bengaluru-palace-ground
ಅರಮನೆ ಮೈದಾನದಲ್ಲಿ ನಾಳೆ ಜೆಡಿಎಸ್ ಮಹತ್ವದ ಸಭೆ : ಲೋಕಸಭೆ ಚುನಾವಣೆ, ಮೈತ್ರಿ ಕುರಿತು ಚರ್ಚೆ

By ETV Bharat Karnataka Team

Published : Sep 9, 2023, 6:50 PM IST

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಜೆಡಿಎಸ್, ನಗರದ ಅರಮನೆ ಮೈದಾನದ ನಲಪಾಡ್ ಪೆವಿಲಿಯನ್​ನಲ್ಲಿ ನಾಳೆ ಬೆಳಗ್ಗೆ 11 ಗಂಟೆಗೆ ಕಾರ್ಯಕರ್ತರ ಮಹತ್ವದ ಸಭೆ ನಡೆಸಲಿದೆ. ಜೊತೆಗೆ ಬಿಜೆಪಿಯೊಂದಿಗೆ ಲೋಕಸಭಾ ಚುನಾವಣಾ ಪೂರ್ವ ಹೊಂದಾಣಿಕೆ ವಿಚಾರವನ್ನು ಪ್ರಕಟಿಸುವ ಸಾಧ್ಯತೆಗಳಿವೆ. ಲೋಕಸಭೆ ಚುನಾವಣೆಯಲ್ಲದೇ ಮುಂಬರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಮೈತ್ರಿ ವಿಚಾರದ ಬಗ್ಗೆ ಪ್ರಸ್ತಾಪವಾಗುವ ಸಂಭವವಿದೆ.

ನಾಳೆ ಸಭೆಗೆ 10,000 ಕಾರ್ಯಕರ್ತರು:ಈ ಎಲ್ಲ ಬೆಳವಣಿಗೆಗಳ ನಡುವೆ ಪಕ್ಷದ ಸಂಘಟನೆಗೆ ಹೆಚ್ಚು ಒತ್ತು ಕೊಟ್ಟಿದ್ದೇವೆ. ಈಗಾಗಲೇ ಮುಖಂಡರ ಸಭೆ ನಡೆಸಿದ್ದೇವೆ. ಭಾನುವಾರ ಕೂಡ ಮಹತ್ವದ ಸಭೆ ಕರೆಯಲಾಗಿದೆ. ಲೋಕಸಭೆ ಚುನಾವಣೆಗೆ ಮುನ್ನ ಇಂತಹ ಸಭೆ ನಡೆಯಬೇಕು ಎಂದು ದೇವೇಗೌಡರು ಬಯಸಿದ್ದರು. ಅದರಂತೆ ಸಭೆ ನಡೆಯುತ್ತಿದೆ. ಸಭೆಯಲ್ಲಿ 10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾಗುತ್ತಾರೆ. ಆ ಸಭೆಯಲ್ಲಿ ಮುಕ್ತವಾಗಿ ಚರ್ಚೆ ನಡೆಸುತ್ತೇವೆ. ಬಳಿಕ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ.

ಬಿಜೆಪಿ , ಜೆಡಿಎಸ್​ ಮೈತ್ರಿ ಬಗ್ಗೆ ನಿರ್ಣಯ ಸಾಧ್ಯತೆ :ಈ ಸಭೆಯಲ್ಲಿ ಪಕ್ಷದ ಬಲವರ್ಧನೆ, ಮುಂಬರುವ ಚುನಾವಣೆಗಳ ಸಿದ್ಧತೆ, ರಾಜ್ಯ ಸರ್ಕಾರದ ರೈತ ಹಾಗೂ ಜನವಿರೋಧಿ ನಿಲುವುಗಳು ಹಾಗೂ ಸರ್ಕಾರದ ವೈಫಲ್ಯಗಳ ವಿರುದ್ಧ ಕೈಗೊಳ್ಳಲಿರುವ ಹೋರಾಟದ ರೂಪುರೇಷೆ ಬಗ್ಗೆಯೂ ಚರ್ಚಿಸಿ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ. ವಿಧಾನಸಭೆ ಚುನಾವಣೆ ಸೋಲಿನಿಂದ ಉತ್ಸಾಹ ಕಳೆದುಕೊಂಡಿರುವ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಹುರಿದುಂಬಿಸುವ ಉದ್ದೇಶದಿಂದ ಈ ಸಭೆ ಕರೆಯಲಾಗಿದೆ. ಶಾಸಕರು ಮತ್ತು ಸಂಸದರು, ಪಕ್ಷದ ಎಲ್ಲ ಹಂತದ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಸೇರಿದಂತೆ ಪಕ್ಷದ ಎಲ್ಲಾ ನಾಯಕರು ಸಭೆಯಲ್ಲಿ ಭಾಗಹಿಸಲಿದ್ದಾರೆ. ಲೋಕಸಭಾ ಚುನಾವಣೆಯಲ್ಲದೆ, ಮುಂಬರುವ ಬಿಬಿಎಂಪಿ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಈ ಸಭೆ ಹಮ್ಮಿಕೊಳ್ಳಲಾಗಿದ್ದು, ಪಕ್ಷದ ಸಂಘಟನೆ ಚುರುಕುಗೊಳಿಸಲು ಹಾಗೂ ಚುನಾವಣೆಗಳಿಗೆ ಸಿದ್ಧತೆ ಮಾಡಲು ವರಿಷ್ಠರು ಸಭೆಯಲ್ಲಿ ಮಾರ್ಗದರ್ಶನ ಮಾಡಲಿದ್ದಾರೆ.

ಪಕ್ಷದ ಘಟಾನುಘಟಿಗಳು ಸಭೆಯಲ್ಲಿ ಭಾಗಿ :ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆಯನ್ನು ಹಮ್ಮಿಕೊಳ್ಳುವುದಾಗಿ ಕುಮಾರಸ್ವಾಮಿ ಹಾಗೂ ಇಬ್ರಾಹಿಂ ಅವರು ಜಂಟಿಯಾಗಿ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. ರಾಜ್ಯ, ನಗರ, ಜಿಲ್ಲಾ, ತಾಲೂಕು, ಕ್ಷೇತ್ರಗಳ ಪಕ್ಷದ ಮುಖಂಡರು, ಹಾಲಿ ಮತ್ತು ಮಾಜಿ ಲೋಕಸಭಾ ಸದಸ್ಯರು, ಮಾಜಿ ಸಚಿವರು, ಶಾಸಕರು, ಮಾಜಿ ಶಾಸಕರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು, ಜಿಲ್ಲಾ ಮತ್ತು ತಾಲೂಕು ಅಧ್ಯಕ್ಷರು, ಕಾರ್ಯಾಧ್ಯಕ್ಷರು, ಪದಾಧಿಕಾರಿಗಳು, ವಿವಿಧ ವಿಭಾಗಗಳ ಅಧ್ಯಕ್ಷರು, ನಗರಸಭೆ, ನಗರ ಪಾಲಿಕೆ, ಪುರಸಭೆ, ಪಟ್ಟಣ ಪಂಚಾಯ್ತಿ, ಜಿಲ್ಲಾ, ತಾಲೂಕು, ಗ್ರಾಮ ಪಂಚಾಯ್ತಿ ಹಾಲಿ ಮತ್ತು ಮಾಜಿ ಸದಸ್ಯರು ಸಭೆಗೆ ಆಗಮಿಸಿ ಯಶಸ್ವಿಗೊಳಿಸುವಂತೆ ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ :ಜೆಡಿಎಸ್ ಬಿಜೆಪಿ ಮೈತ್ರಿ ಬಗ್ಗೆ ಹಿಂದೆಯೂ ತಲೆಕೆಡಿಸಿಕೊಂಡಿಲ್ಲ, ಮುಂದೆಯೂ ತಲೆಕೆಡಿಸಿಕೊಳ್ಳಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

ABOUT THE AUTHOR

...view details