ಬೆಂಗಳೂರು:ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಂಗಳೂರಿನಲ್ಲಿ ನಡೆಸುತ್ತಿರುವ ಬೃಹತ್ ರೋಡ್ ಶೋ ಬಗ್ಗೆ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಪ್ರತಿಕ್ರಿಯಿಸಿದ್ದು, ನಾನು ಕಮೆಂಟ್ ಮಾಡುವುದಿಲ್ಲ ಎಂದಿದ್ದಾರೆ. ಪದ್ಮನಾಭನಗರದ ತಮ್ಮ ನಿವಾಸದಲ್ಲಿ ಇಂದು ಬೆಂಗಳೂರು ಮಹಾನಗರ ಸಮಗ್ರ ಅಭಿವೃದ್ಧಿಗಾಗಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಲೋಕಸಭಾ ಚುನಾವಣೆ ಅಲ್ಲ. ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಈ ರೋಡ್ ಶೋ ಅಗತ್ಯ ಇದೆಯೇ? ಎಂಬುದನ್ನು ಅವರೇ ತೀರ್ಮಾನ ಮಾಡಬೇಕು. ತೀರ್ಮಾನ ಮಾಡುವುದು ನಾನಲ್ಲ ಎಂದರು.
ಮೋದಿ ಅವರ ಎರಡು ದಿನ ರೋಡ್ ಶೋ ಅಗತ್ಯ ವಿದೆಯೇ?, ಇದರಿಂದ ಜನರಿಗೆ ಎಷ್ಟು ತೊಂದರೆ ಆಗುತ್ತದೆ ಎಂಬುದನ್ನು ಬಿಜೆಪಿ ನಾಯಕರು ನಿರ್ಧಾರ ಮಾಡಬೇಕು. ಇದರ ಬಗ್ಗೆ ನಾನು ಕಾಮೆಂಟ್ ಮಾಡಲು ಹೋವುದಿಲ್ಲ. ಇದರ ಬಗ್ಗೆ ಕೇಳಬೇಡಿ ಎಂದು ಮಾರ್ಮಿಕವಾಗಿ ನುಡಿದರು.
ಬೆಂಗಳೂರು ಮಹಾನಗರದ ಜನತಾ ಪ್ರಣಾಳಿಕೆ ಬಿಡುಗಡೆ:ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಜೆಡಿಎಸ್ ' ಬೆಂಗಳೂರು ಮಹಾನಗರ ಸಮಗ್ರ ಅಭಿವೃದ್ಧಿಗಾಗಿ ' ಪ್ರಣಾಳಿಕೆ ಬಿಡುಗಡೆ ಮಾಡಿದೆ. ಪಂಚರತ್ನ ಯೋಜನೆಗಳ ಜೊತೆಗೆ ರಾಜ್ಯದಲ್ಲಿ ಹಳೆ ಪಿಂಚಣಿ ಯೋಜನೆ ಜಾರಿಗೆ ತರುವುದು, ಬಿಬಿಎಂಪಿ ಮೀಸಲಾತಿ ಗೊಂದಲ ನಿವಾರಣೆ, ಪ್ರತಿ ವ್ಯಕ್ತಿಗೆ ಮಾಸಿಕ 10 ಕೆ.ಜಿ. ಅಕ್ಕಿ, ಬಿ ಖಾತಾ ಸ್ವತ್ತುಗಳನ್ನು ಎ ಖಾತಾ ಸ್ವತ್ತುಗಳಾಗಿ ಪರಿವರ್ತಿಸುವುದು, ನಮ್ಮ ಮೆಟ್ರೋ ವಿಸ್ತರಣೆ ಸೇರಿದಂತೆ 16 ಪ್ರಮುಖ ಅಂಶಗಳನ್ನು ಒಳಗೊಂಡ ಬೆಂಗಳೂರಿನ ಪ್ರತ್ಯೇಕ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗಿದೆ.
ಜೆಡಿಎಸ್ ಬೆಂಗಳೂರಿಗೆ ನೀಡಿರುವ ಪ್ರಣಾಳಿಕೆಯಲ್ಲಿ ಏನಿದೆ? : ವಸತಿ ಆಸರೆ-ವಸತಿ ಆಸರೆಯಡಿ ನಗರದ ಬಡವರಿಗೆ ಕೈಗೆಟುಕುವ ದರದಲ್ಲಿ ವಸತಿ ಆಸರೆ ಕಲ್ಪಿಸುವ ಹಾಗೂ ಕಾರ್ಮಿಕರಿಗೆ ವಿಶೇಷ ಯೋಜನೆಯಡಿ ವಸತಿ ಸೌಲಭ್ಯ ಕಲ್ಪಿಸುವ ಭರವಸೆ ನೀಡಲಾಗಿದೆ.
ಬೀದಿ ಬದಿ ವ್ಯಾಪಾರಿಗಳಿಗೆ ಭದ್ರತೆ :ಖಾಸಗಿ ಶಾಲೆಗಳಲ್ಲಿ ಹತ್ತು ಸಾವಿರ ರೂ.ಗಿಂತ ಕಡಿಮೆ ವೇತನ ಪಡೆಯುವ ಶಿಕ್ಷಕರಿಗೆ ಸಹಾಯಧನ, ನೋಂದಾಯಿತ ಆಟೋ ಚಾಲಕರಿಗೆ ಮತ್ತು ಭದ್ರತಾ ಸಿಬ್ಬಂದಿಗಳಿಗೆ ಮಾಸಿಕ ಎರಡು ಸಾವಿರ ರೂ. ಸಹಾಯಧನ ಹಾಗೂ ಬೀದಿ ಬದಿಯ ವ್ಯಾಪಾರಿಗಳಿಗೆ ದುಡಿಮೆ ರೂಪದಲ್ಲಿ ವೇತನ ನೀಡುವ ಘೋಷಣೆ ಮಾಡಿದೆ. ಜನಸಂದಣಿ ಮತ್ತು ಮಾರುಕಟ್ಟೆ ಪ್ರದೇಶಗಳಲ್ಲಿ 1100 ಮಕ್ಕಳ-ವಯಸ್ಕರ ಸ್ನೇಹಮಯ ಶೌಚಾಲಯ ನಿರ್ಮಾಣ ಮಾಡಲಾಗುವುದು.
ಹತ್ತು ಕೆ.ಜಿ ಅಕ್ಕಿ : ಪಡಿತರ ವ್ಯವಸ್ಥೆಯಡಿಯಲ್ಲಿ ಪ್ರತಿ ವ್ಯಕ್ತಿಗೆ 10 ಕೆ.ಜಿ. ಅಕ್ಕಿಯನ್ನು ಪ್ರತಿ ತಿಂಗಳು ನೀಡುವುದು, ಪಾಲಿಕೆಯ ಪ್ರತಿಯೊಂದು ವಲಯವನ್ನು ಶೈಕ್ಷಣಿಕ ಜಿಲ್ಲೆಯಾಗಿ ಘೋಷಿಸಿ, ಜಿಲ್ಲಾ ಶಾಲಾ ಶಿಕ್ಷಣ ಪರಿಷತ್ ಸ್ಥಾಪಿಸುವುದಾಗಿ ಹೇಳಿದೆ. ಬೆಂಗಳೂರಿಗೆ ಪ್ರಬಲ ಆಡಳಿತದಡಿಯಲ್ಲಿ ಪಾಲಿಕೆಯ ಆಡಳಿತ ಸುವ್ಯವಸ್ಥೆಗಾಗಿ ಕ್ಷೇತ್ರವಾರು ಮರು ವಿಂಗಡಣೆ ಮಾಡಿ ಮೀಸಲಾತಿ ಗೊಂದಲ ಬಗೆಹರಿಸಿ, ಶೀಘ್ರ ಚುನಾವಣೆ ನಡೆಸುವುದು ಮತ್ತು ಚುನಾಯಿತ ಪ್ರತಿನಿಧಿಗಳಿಗೆ ಪಾಲಿಕೆ ಆಡಳಿತ ವಹಿಸುವ ಭರವಸೆ ನೀಡಿದೆ.
ಪಾಲಿಕೆ ವ್ಯಾಪ್ತಿಯ 110 ಗ್ರಾಮಗಳಿಗೆ ಪೈಪ್ಲೈನ್ ಮೂಲಕ ಕುಡಿಯುವ ನೀರು ನೀಡುವುದು, ಬಿ ಖಾತೆಯಲ್ಲಿರುವ ಆರು ಲಕ್ಷ ಸ್ವತ್ತುಗಳನ್ನು ಎ ಖಾತಾ ಸ್ವತ್ತುಗಳಾಗಿ ಪರಿವರ್ತಿಸುವುದು, ವಸತಿ ಸಮುಚ್ಚಯ ಹಾಗೂ ವಾಣಿಜ್ಯ ಸಂಕೀರ್ಣಗಳಲ್ಲಿ ಬಯೋಗ್ಯಾಸ್ ಉತ್ಪಾದನೆಗೆ ಉತ್ತೇಜನ ನೀಡುವುದಾಗಿ ತಿಳಿಸಿದೆ.