ಬೆಂಗಳೂರು: ಒಂದೆಡೆ ತಳಮಟ್ಟದಿಂದ ಪಕ್ಷ ಸಂಘಟನೆಗೆ ಜೆಡಿಎಸ್ ವರಿಷ್ಠರು ಸಿದ್ಧತೆ ಮಾಡಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ಶಾಸಕರು, ಕೆಲವು ಮುಖಂಡರು ಪಕ್ಷ ಬಿಡಲು ತಯಾರಿ ನಡೆಸುತ್ತಿದ್ದಾರೆ. ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಶಾಸಕರಾದ ಜಿ.ಟಿ. ದೇವೇಗೌಡ, ಕೋಲಾರದ ಶ್ರೀನಿವಾಸಗೌಡ, ವಿಧಾನಪರಿಷತ್ ಸದಸ್ಯ ಬೆಮೆಲ್ ಕಾಂತರಾಜ್ ಸೇರಿದಂತೆ ಹಲವು ಜೆಡಿಎಸ್ ಮುಖಂಡರು ಈಗಾಗಲೇ ಕಾಂಗ್ರೆಸ್ ಕದ ತಟ್ಟಿದ್ದಾರೆ. ಜೆಡಿಎಸ್‌ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ಇದೊಂದು ನಿದರ್ಶನ.
ಜೆಡಿಎಸ್ ನ ಮಾಜಿ ವಿಧಾನಪರಿಷತ್ ಸದಸ್ಯ ಇ. ಕೃಷ್ಣಪ್ಪ, ಕಳೆದ ಚುನಾವಣೆಯಲ್ಲಿ ಕನಕಪುರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಡಿ. ಕೆ. ಶಿವಕುಮಾರ್ ವಿರುದ್ಧ ಸ್ಪರ್ಧಿಸಿದ್ದ ವಿಶ್ವನಾಥ್ ಅವರು ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ, ಸಮಾಲೋಚನೆ ನಡೆಸಿರುವುದು ಕುತೂಹಲ ಮೂಡಿಸಿದೆ. "ನಾನು ಜೆಡಿಎಸ್‌ನಲ್ಲಿ ಇದ್ದಾಗಲೇ ಬೆಮಲ್ ಕಾಂತರಾಜ್ ಯಾರೆಂದು' ಹೆಚ್. ಡಿ. ಕುಮಾರಸ್ವಾಮಿ ಅವರು ಪ್ರಶ್ನೆ ಮಾಡಿದ ಮೇಲೆ ನಾನು ಅವರಿಗೆ ಗೊತ್ತಿಲ್ಲವೆಂದೇ ಅರ್ಥ ತಾನೇ. ಹಾಗಾಗಿ ನಾನು ಕಾಂಗ್ರೆಸ್ ಸೇರುತ್ತಿದ್ದೇನೆ " ಎಂದು ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜ್ ಬಹಿರಂಗವಾಗಿಯೇ ಹೇಳಿದ್ದಾರೆ. ಹತ್ತಾರು ವರ್ಷಗಳ ಕಾಲ ನಾನು ಜೆಡಿಎಸ್ ನಲ್ಲಿ ಇದ್ದು, ಪಕ್ಷ ಸಂಘಟನೆ ಮಾಡಿದೆ. ನಾನು ವಿಧಾನ ಪರಿಷತ್ ಸದಸ್ಯನಾಗಿ ಆಯ್ಕೆಯಾಗಿರುವುದು ಸಹ ಕುಮಾರಸ್ವಾಮಿಯವರಿಗೆ ಗೊತ್ತಿಲ್ಲವೆಂದ ಮೇಲೆ ನಾನ್ಯಾಕೆ ಜೆಡಿಎಸ್‌ನಲ್ಲಿರಬೇಕು ಎಂದು ಪ್ರಶ್ನಿಸಿದ್ದಾರೆ.
ಮಾಜಿ ಸಚಿವ ಜಿ.ಟಿ.ದೇವೇಗೌಡ ಅವರು ಕುಮಾರಸ್ವಾಮಿ ಅವರ ನಡೆಗೆ ಮುನಿಸಿಕೊಂಡು ತಟಸ್ಥರಾಗಿರುವುದು ಗೊತ್ತಿರುವ ಸಂಗತಿ. ಇದೀಗ ಕಾಂಗ್ರೆಸ್ಗೆ ಸೇರುವುದಾಗಿ ಘೋಷಣೆ ಮಾಡಿದ್ದಾರೆ. ಇದಕ್ಕೂ ಮುನ್ನ ಜೆಡಿಎಸ್ನ ರಾಜ್ಯ ಯುವ ಘಟಕದ ಅಧ್ಯಕ್ಷರಾಗಿದ್ದ ಮಧು ಬಂಗಾರಪ್ಪ ಸಹ ಜೆಡಿಎಸ್ ತೊರೆದು ಕಾಂಗ್ರೆಸ್ ಗೆ ಸೇರಿದ್ದಾರೆ. ಜಿ.ಟಿ. ದೇವೇಗೌಡ ಘೋಷಣೆ ಮಾಡಿದ ಬೆನ್ನಲ್ಲೇ ಮೈಸೂರು ಜಿಲ್ಲೆಯ ಮತ್ತಿಬ್ಬರು ಶಾಸಕರು ಕಾಂಗ್ರೆಸ್ ಸೇರಲು ತುದಿಗಾಲಮೇಲೆ ನಿಂತಿದ್ದಾರೆ.