ಬೆಂಗಳೂರು:ನಿನ್ನೆಯಷ್ಟೇ ವಿಧಾನಮಂಡಲದ ಬಜೆಟ್ ಅಧಿವೇಶನ ಮುಗಿದಿದ್ದು, ಎಲ್ಲ ಪಕ್ಷಗಳ ಶಾಸಕರು ತಮ್ಮ ತಮ್ಮ ಕ್ಷೇತ್ರಗಳತ್ತ ಮುಖ ಮಾಡಿದ್ದಾರೆ. ಇನ್ನು ಕೆಲವೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಈಗಾಗಲೇ ಚುನಾವಣಾ ಪ್ರಚಾರದ ತಾಲೀಮು ನಡೆಸುತ್ತಿವೆ. ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆಯಲು ಮುಂದಾಗಿರುವ ಜೆಡಿಎಸ್ ನಾಯಕರು ಪಂಚರತ್ನ ರಥಯಾತ್ರೆ ಮೂಲಕ ಈಗಾಗಲೇ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.
ಇನ್ನು, ಜೆಡಿಎಸ್ ಗೆಲ್ಲಲು ಅವಕಾಶವಿರುವ ಐವತ್ತು ಕ್ಷೇತ್ರಗಳಲ್ಲಿ ಕಾರ್ಯತಂತ್ರ ರೂಪಿಸಲು ಮುಂದಾಗಿದ್ದು, ಚಿಕ್ಕಬಳ್ಳಾಪುರ, ಕೋಲಾರ, ಚಿಕ್ಕನಾಯಕನಹಳ್ಳಿ, ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರಿನ ಯಶವಂತಪುರ, ಹಾಸನ, ಮೈಸೂರು, ದಾವಣಗೆರೆ, ಚಿತ್ರದುರ್ಗ, ಕೊಡಗು, ಬೆಳಗಾವಿ, ಬೀದರ್, ಯಾದಗಿರಿ, ರಾಯಚೂರು, ವಿಜಯಪುರ, ಕೊಪ್ಪಳ, ಬಾಗಲಕೋಟೆ, ಕಲಬುರಗಿ, ಬಳ್ಳಾರಿ, ಮಂಡ್ಯ ಸೇರಿದಂತೆ 50 ಕ್ಷೇತ್ರಗಳನ್ನು ಗುರುತಿಸಿರುವ ಜೆಡಿಎಸ್, ಆ ಕ್ಷೇತ್ರಗಳ ಮೇಲೆ ಹೆಚ್ಚು ಶ್ರಮ ಹಾಕಲು ದಳಪತಿಗಳು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಐವತ್ತು ಕ್ಷೇತ್ರಗಳ ಪೈಕಿ ಹಲವು ಕ್ಷೇತ್ರಗಳಲ್ಲಿ ಈಗಾಗಲೇ ಅಭ್ಯರ್ಥಿಗಳನ್ನು ಘೋಷಿಸಿದ್ದರೂ, ಅಗತ್ಯವಿದ್ದರೆ ಬದಲಾವಣೆ ಮಾಡುವ ಸಾಧ್ಯತೆಯೂ ಇದೆ ಎಂದು ಈಗಾಗಲೇ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ತುಂಬಾ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿರುವ ವರಿಷ್ಠರು, ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ಟಿಕೆಟ್ ಆಕಾಂಕ್ಷಿಗಳಾಗಿರುವವರು ಸಹ ಕುಮಾರಸ್ವಾಮಿ ಅವರ ಸಂಪರ್ಕದಲ್ಲಿದ್ದಾರೆ. ಈ ಪೈಕಿ ಸ್ಥಳೀಯವಾಗಿ ಪ್ರಭಾವ ಹೊಂದಿರುವ ಹಾಗೂ ಗೆಲ್ಲುವ ಸಾಮರ್ಥ್ಯ ಇರುವ ನಾಯಕರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಇದರ ಜೊತೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸ್ಪರ್ಧೆ ಮಾಡಿದರೆ ಅವರನ್ನು ಬೇರೆ ಕ್ಷೇತ್ರಗಳ ಕಡೆ ಮುಖ ಮಾಡದಂತೆ ಕಟ್ಟಿಹಾಕಲು ಕಾರ್ಯತಂತ್ರ ಹೆಣೆಯಲು ಚಿಂತನೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಪಂಚರತ್ನ ರಥಯಾತ್ರೆ ನಡೆದ ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆಸಿರುವ ಜೆಡಿಎಸ್, ಅದರಲ್ಲೂ ಗೆಲ್ಲುವ ಅವಕಾಶ ಇರುವವರ ಬಗ್ಗೆ ವರದಿ ನೀಡಲಾಗಿದೆ. ಆ ವರದಿಯನ್ನು ಇಟ್ಟುಕೊಂಡು ಅಳೆದು ತೂಗಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ವರಿಷ್ಠರು ನಿರ್ಧರಿಸಿದ್ದಾರೆ. ರಥಯಾತ್ರೆ ಬಳಿಕ ಕೆಲವು ಕ್ಷೇತ್ರಗಳಲ್ಲಿ ಟಿಕೆಟ್ ಗೆ ಪೈಪೋಟಿ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.