ಕರ್ನಾಟಕ

karnataka

ETV Bharat / state

ಮುನ್ನೆಲೆಗೆ ಬಂದ ಜೆಡಿಎಸ್-ಬಿಜೆಪಿ ಮೈತ್ರಿ ವಿಚಾರ: ಸೀಟು ಹಂಚಿಕೆಯಲ್ಲಿ ಪಟ್ಟು ಹಿಡಿದಿದೆಯೇ ಜೆಡಿಎಸ್? - BJP JDS alliance updates

ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅ.21ರಂದು ದೆಹಲಿಗೆ ತೆರಳಿ ಕೇಂದ್ರ ನಾಯಕರನ್ನು ಭೇಟಿ ಮಾಡಲಿದ್ದಾರೆ.

ಮುನ್ನೆಲೆಗೆ ಬಂದ ಜೆಡಿಎಸ್-ಬಿಜೆಪಿ ಮೈತ್ರಿ ವಿಚಾರ
ಮುನ್ನೆಲೆಗೆ ಬಂದ ಜೆಡಿಎಸ್-ಬಿಜೆಪಿ ಮೈತ್ರಿ ವಿಚಾರ

By ETV Bharat Karnataka Team

Published : Oct 16, 2023, 10:45 PM IST

ಬೆಂಗಳೂರು: ಪಕ್ಷದ ಹಲವು ನಾಯಕರು, ಅಲ್ಪಸಂಖ್ಯಾತ ಮುಖಂಡರು ಮೈತ್ರಿಗೆ ಅಪಸ್ವರ ವ್ಯಕ್ತಪಡಿಸಿದ್ದರೂ ಜೆಡಿಎಸ್‌ ವರಿಷ್ಠರು ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಬಿಜೆಪಿ ಜೊತೆಗಿನ ಮೈತ್ರಿ ಖಚಿತವಾದ ಬೆನ್ನಲ್ಲೇ ಸೀಟು ಹಂಚಿಕೆ ವಿಚಾರ ಮುನ್ನೆಲೆಗೆ ಬಂದಿದೆ. ಈ ವಿಚಾರವಾಗಿ ಬಿಜೆಪಿ ಹೈಕಮಾಂಡ್ ಜೊತೆ ಚರ್ಚಿಸಲು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅಕ್ಟೋಬರ್ 21 ರಂದು ದೆಹಲಿಗೆ ತೆರಳಲಿದ್ದು, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ. ಎಂದು ಜೆಡಿಎಸ್​ನ ಉನ್ನತ ಮೂಲಗಳು ತಿಳಿಸಿವೆ.

ಜೆಡಿಎಸ್ ಪ್ರಬಲವಾಗಿರುವ ಕಡೆಗಳಲ್ಲಿ ಮಾತ್ರ ಸೀಟು ಕೇಳುವುದಾಗಿ ಈಗಾಗಲೇ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದು, ಮಂಡ್ಯ, ಮೈಸೂರು, ತುಮಕೂರು, ಹಾಸನ, ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಬೇಡಿಕೆ ಇಡುವ ಸಾಧ್ಯತೆಗಳಿವೆ. ಹಾಸನ ಜೆಡಿಎಸ್ ಹಿಡಿತದಲ್ಲಿದ್ದು, ಮಂಡ್ಯ ಕ್ಷೇತ್ರದಲ್ಲಿ ಹೆಚ್ಚು ಪ್ರಾಬಲ್ಯ ಹೊಂದಿದೆ. ಆದರೆ, 2019ರ ಚುನಾವಣೆಯಲ್ಲಿ ನಟಿ ಸುಮಲತಾ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಈ ಕ್ಷೇತ್ರವನ್ನು ಶತಾಯ- ಗತಾಯ ಮರಳಿ ಪಡೆಯಲು ಜೆಡಿಎಸ್‌ ನಾಯಕರು ಆಲೋಚನೆ ಮಾಡುತ್ತಿದ್ದಾರೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪ್ರತಿಪಕ್ಷಗಳ ಮುಖಂಡರು, ಕಾರ್ಯಕರ್ತರ ಮೇಲೆ ದೌರ್ಜನ್ಯ ಮೇರೆ ಮೀರಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ಹಾಸನ ಕ್ಷೇತ್ರ ಜೆಡಿಎಸ್ ಹಿಡಿತದಲ್ಲಿದ್ದು, ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಮತ್ತೆ ಕಣಕ್ಕಿಳಿಸುವ ಬಗ್ಗೆ ಜೆಡಿಎಸ್‌ ವರಿಷ್ಠರಲ್ಲೇ ವಿಭಿನ್ನ ಅಭಿಪ್ರಾಯವ್ಯಕ್ತವಾಗಿವೆ. ಜೆಡಿಎಸ್ ಗೆಲ್ಲಬಹುದಾದ ಕ್ಷೇತ್ರಗಳ ಕುರಿತು ಸರ್ವೇ ಮಾಡಿಸಲಾಗಿದೆ. ಈ ಸರ್ವೇ ಹಾಸನದಲ್ಲಿ ಪ್ರಜ್ವಲ್ ರೇವಣ್ಣಗೆ ಪೂರಕವಾಗಿಲ್ಲ. ಹಾಗಾಗಿ ಮತ್ತೊಂದು ಸರ್ವೇ ಮಾಡಿಸಿ ನೋಡಲು ನಿರ್ಧರಿಸಲಾಗಿದೆ. ಸರ್ವೇ ವರದಿ ಆಧರಿಸಿ ಮುಂದಿನ ನಡೆ ನಿರ್ಧರಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಇನ್ನೊಂದೆಡೆ ಬಿಜೆಪಿ ಜೊತೆಗಿನ ಜೆಡಿಎಸ್​ ಮೈತ್ರಿಗೆ ವಿರೋಧದ ಸಮರ ಸಾರಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು ಇಂದು ಚಿಂತನ ಮಂಥನ ಸಭೆ ನಡೆಸಿ ಅಲ್ಪಸಂಖ್ಯಾತ ಮುಖಂಡರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ರಾಜ್ಯದ ಬಹುತೇಕ ಜಿಲ್ಲೆಗಳಿಂದ ಆಗಮಿಸಿದ್ದ ಮುಸ್ಲಿಂ ಮುಖಂಡರು ಮೈತ್ರಿಗೆ ವಿರೋಧ ವ್ಯಕ್ತಪಡಿಸಿ ಇಬ್ರಾಹಿಂ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದೇ ಸಭೆಯಲ್ಲಿ ಜೆಡಿಯು ನಾಯಕ ಮಹಿಮಾ ಪಟೇಲ್, ಎಂ.ಪಿ. ನಾಡಗೌಡ ಮಾತನಾಡಿ, ರಾಷ್ಟ್ರೀಯ ಪಕ್ಷಗಳಿಗೆ ಪರ್ಯಾಯ ಶಕ್ತಿ ರೂಪಿಸಲು ಸಲಹೆಗಳನ್ನೂ ಕೂಡ ನೀಡಿದ್ದಾರೆ.

ಇತ್ತ ಸಿ.ಎಂ. ಇಬ್ರಾಹಿಂ, ಬಿಜೆಪಿಯೊಂದಿಗೆ ಲೋಕಸಭಾ ಚುನಾವಣೆ ವೇಳೆ ಮೈತ್ರಿ ಮಾಡಿಕೊಳ್ಳಬೇಡಿ ಅಂತ ದೇವೇಗೌಡರಿಗೆ ಮನವಿ ಮಾಡಲಾಗುತ್ತಿದೆ. ನಮ್ಮ ಮಾತಿನ್ನು ಧಿಕ್ಕರಿಸಿ ಬಿಜೆಪಿಯೊಂದಿಗೆ ಮೈತ್ರಿ ಮುಂದುವರೆಸಿದರೆ ಮುಂದಿನ ನಿರ್ಧಾರ ನಾವು ತೆಗೆದುಕೊಳ್ಳುತ್ತೇವೆ. ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಉಚ್ಚಾಟನೆ ಮಾಡುವುದಕ್ಕೆ ಕಾಲ ಪಕ್ವ ಆಗಿಲ್ಲ. ನಮ್ಮ ನಿರ್ಣಯವನ್ನು ವಿರೋಧ ಮಾಡಿದರೆ ಏನಾಗುತ್ತದೆಂದು ಮುಂದೆ ಕಾದು ನೋಡಿ. ನಾನು ಜೆಡಿಎಸ್ ಪಕ್ಷ ಬಿಡುವುದಿಲ್ಲ. ಪಕ್ಷದಲ್ಲಿ ಇದ್ದು ಅಧಿಕಾರ ಚಲಾವಣೆ ಮಾಡುತ್ತೇನೆ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ದೇವೇಗೌಡರನ್ನು ಭೇಟಿ ಮಾಡಿದ ನಂತರ ಸಿ.ಎಂ. ಇಬ್ರಾಹಿಂ ಅವರ ನಡೆ ಏನು ಎಂಬುದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ:ಜೆಡಿಎಸ್ ಬಿಜೆಪಿ ಮೈತ್ರಿ.. ಪಕ್ಷದೊಳಗೆ ಭುಗಿಲೆದ್ದ ಅಸಮಾಧಾನ ಶಮನಕ್ಕೆ ಮುಂದುವರಿದ ದಳಪತಿಗಳ ಕಸರತ್ತು

ABOUT THE AUTHOR

...view details