ಬೆಂಗಳೂರು :ಸೋಮವಾರದಿಂದ ಆರಂಭವಾಗಲಿರುವ ಚಳಿಗಾಲದ ಅಧಿವೇಶನಕ್ಕೆ ಸಜ್ಜಾಗಿರುವ ಜೆಡಿಎಸ್, ರಾಜ್ಯದಲ್ಲಿ ಉಂಟಾದ ಪ್ರವಾಹದಿಂದಾದ ಸಮಸ್ಯೆ, ಕೋವಿಡ್-19, ಎಪಿಎಂಸಿ ಹಾಗೂ ಭೂಸುಧಾರಣೆ ಕಾಯ್ದೆ ತಿದ್ದುಪಡಿ, ಕೈಗಾರಿಕಾ ನೀತಿ ಸೇರಿದಂತೆ ಹಲವು ಮಹತ್ವದ ವಿಷಯಗಳನ್ನು ಪ್ರಸ್ತಾಪಿಸಲು ನಿರ್ಧರಿಸಿದೆ.
ಡ್ರಗ್ಸ್ ಮಾಫಿಯಾಗಿಂತಲೂ ಮುಖ್ಯವಾಗಿ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ಕಾರ್ಮಿಕ ಕಾಯ್ದೆ ತಿದ್ದುಪಡಿ ಸೇರಿದಂತೆ ಸುಗ್ರಿವಾಜ್ಞೆ ಮೂಲಕ ಜಾರಿಗೆ ತಂದಿರುವ ಕಾಯ್ದೆಗಳಿಂದ ಎದುರಾಗಬಹುದಾದ ಸಮಸ್ಯೆಗಳು ಹಾಗೂ ನೆರೆಯಿಂದ ಉಂಟಾದ ನಷ್ಟ, ನಿರುದ್ಯೋಗ ಸಮಸ್ಯೆ, ಆರ್ಥಿಕ ಬಿಕ್ಕಟು, ಅಭಿವೃದ್ಧಿ ಕಾರ್ಯಗಳ ಬಗ್ಗೆ ನಿರ್ಲಕ್ಷ್ಯ ವಹಿಸಿರುವ ಬಿಜೆಪಿ ಸರ್ಕಾರದ ವಿರುದ್ಧ ಧ್ವನಿ ಎತ್ತಲು ಜೆಡಿಎಸ್ ನಾಯಕರು ಸಜ್ಜಾಗಿದ್ದಾರೆ.
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (ಸಂಗ್ರಹ ಚಿತ್ರ) ಶಾಸಕಾಂಗ ಸಭೆ :ಅಧಿವೇಶನಕ್ಕೂ ಮುನ್ನ ಸೋಮವಾರ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ನಡೆಸಿ ಅಧಿವೇಶನದಲ್ಲಿ ಪಕ್ಷ ಪ್ರಸ್ತಾಪಿಸಬೇಕಾಗಿರುವ ವಿಚಾರಗಳ ಕುರಿತು ಚರ್ಚಿಸಿ ಪಕ್ಷದ ವರಿಷ್ಠರು ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಶಾಸಕರಿಗೆ ಯಾವ ಯಾವ ವಿಚಾರದ ಮೇಲೆ ಬೆಳಕು ಚೆಲ್ಲಬೇಕು ಎಂಬ ಮಾರ್ಗದರ್ಶನವನ್ನು ಪಕ್ಷದ ವರಿಷ್ಠರು ಮಾಡಲಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
ಸುಗ್ರಿವಾಜ್ಞೆ ಮೂಲಕ ಜಾರಿಗೊಳಿಸಿರುವ ಕಾಯಿದೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ, ಕೆಲ ದಿನಗಳ ಹಿಂದೆ ಹಾಸನ, ತುಮಕೂರು ಹಾಗೂ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದರು. ಎರಡನೇ ಹಂತದಲ್ಲಿ ವಿಧಾನ ಮಂಡಲದ ಅಧಿವೇಶನದಲ್ಲಿ ಈ ಬಗ್ಗೆ ಸರ್ಕಾರದ ಕಿವಿ ಹಿಂಡುವಂತೆ ತಮ್ಮಪಕ್ಷದ ಶಾಸಕರಿಗೆ ಕಿವಿ ಮಾತು ಹೇಳಿದ್ದಾರೆ.
ಕೊರೊನಾ, ಪ್ರವಾಹ ಪರಿಸ್ಥಿತಿಯ ಬಗ್ಗೆ ಹೆಚ್.ಡಿ. ದೇವೇಗೌಡ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಅವರು ನಾಲ್ಕೈದು ಹಂತಗಳಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪಕ್ಷದ ಶಾಸಕರು, ಮುಖಂಡರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಈ ಮಾಹಿತಿಯನ್ನು ಮುಂದಿಟ್ಟು ಸರ್ಕಾರದ ವಿರುದ್ಧ ಜೆಡಿಎಸ್ ನಾಯಕರು ಸದನದ ಒಳಗೆ ಮತ್ತು ಹೊರಗೆ ಹೋರಾಟ ರೂಪಿಸಲು ಚಿಂತನೆ ನಡೆಸಿದ್ದಾರೆ.
ಸಿಗದ ಪರಿಹಾರ :ಕೋವಿಡ್ ನಿರ್ವಹಣೆಯಲ್ಲಿ ವೈಫಲ್ಯ ಹಾಗೂ ಉಪಕರಣ, ಔಷಧ ಖರೀದಿಯಲ್ಲಿ ನಡೆದಿದೆ ಎನ್ನಲಾಗುತ್ತಿರುವ ಭ್ರಷ್ಟಾಚಾರ, ಪ್ರವಾಹ ಪೀಡಿತ ಪ್ರದೇಶಗಳ ಸಂತ್ರಸ್ತರಿಗೆ ಪರಿಹಾರ ನೀಡಿಕೆಯಲ್ಲಿ ವಿಳಂಬವನ್ನು ಗಂಭೀರವಾಗಿ ಪರಿಗಣಿಸಿ ಚರ್ಚಿಸಲು ಜೆಡಿಎಸ್ ಪೂರ್ವ ತಯಾರಿ ನಡೆಸಿದೆ. ಜೊತೆಗೆ ಕೋವಿಡ್ನಿಂದ ಉಂಟಾಗಿರುವ ನಿರುದ್ಯೋಗ ಸಮಸ್ಯೆ, ಸಣ್ಣ, ಸಣ್ಣ ವ್ಯಾಪಾರಿಗಳ ಸಂಕಷ್ಟ, ಬಡವರ ಬಂಧು ಜಾರಿಯಲ್ಲಿ ಸರ್ಕಾರ ತೋರುತ್ತಿರುವ ಉದಾಸೀನತೆಯ ಮೇಲೆ ಶಾಸಕರು ಸದನದಲ್ಲಿ ಪ್ರಸ್ತಾಪ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಖಾಸಗಿ ಶಾಲೆ ಶಿಕ್ಷಕರು, ಅತಿಥಿ ಉಪನ್ಯಾಸಕರಿಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಜೆಡಿಎಸ್ ಶಾಸಕರು ಅನೇಕ ಬಾರಿ ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ. ಮಾಜಿ ಪ್ರಧಾನಿ ಹೆಚ್ .ಡಿ.ದೇವೇಗೌಡರು ಈ ಬಗ್ಗೆ ಖುದ್ದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ವಿಧಾನ ಪರಿಷತ್ ಸದಸ್ಯರು ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿ ಎದುರು ಪ್ರತಿಭಟನೆ ಸಹ ನಡೆಸಿದ್ದರು. ಆದರೂ ಈ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಹಾಗಾಗಿ ಈ ವಿಷಯದ ಬಗ್ಗೆಯೂ ಚರ್ಚೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.