ಕರ್ನಾಟಕ

karnataka

ETV Bharat / state

ಮ್ಯಾಚ್‌ ಫಿಕ್ಸಿಂಗ್‌ ರೀತಿ ಬೈ ಎಲೆಕ್ಷನ್‌ನಲ್ಲಿ ವೋಟ್‌ ಫಿಕ್ಸಿಂಗ್ ‌: ಶರವಣ ಆರೋಪ - ಕರ್ನಾಟಕ ಉಪಚುನಾವಣೆ

ಆರ್​.ಆರ್​. ನಗರದ ಜೆಡಿಎಸ್​ ಅಭ್ಯರ್ಥಿ ಮಾರಾಟವಾಗಿದ್ದಾರೆ ಎಂಬ ಫೇಸ್​ಬುಕ್​ ಪೋಸ್ಟ್ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್​ ಮುಖಂಡರು ಕಾಂಗ್ರೆಸ್​ -ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

JDS leaders Press Meet at Bengaluru
ಬೆಂಗಳೂರಿನಲ್ಲಿ ಜೆಡಿಎಸ್​ ನಾಯಕರಿಂದ ಸುದ್ದಿಗೋಷ್ಠಿ

By

Published : Oct 26, 2020, 9:13 PM IST

ಬೆಂಗಳೂರು : ಉಪಚುನಾವಣೆ ಗೆಲ್ಲಲು ಒಂದು ಕಡೆ ಜಾತಿ, ಇನ್ನೊಂದು ಕಡೆ ಅಧಿಕಾರ ಬಳಸಲಾಗುತ್ತಿದೆ. ಕೊರೊನಾ ವೈರಸ್‌ಗಿಂತಲೂ ಇಂತಹ ನಾಯಕರು ಅಪಾಯಕಾರಿ. ಮತದಾರರಿಗೆ ಹಣ, ಹೆಂಡ ಹಂಚಿದ್ದಾಯಿತು, ಈಗ ಸೆಟ್‌ಟಾಪ್‌ ಬಾಕ್ಸ್‌ ನೀಡುತ್ತಿದ್ದಾರೆ ಎಂದು ವಿಧಾನಪರಿಷತ್‌ ಮಾಜಿ ಸದಸ್ಯ ಟಿ.ಎ. ಶರವಣ ಹೇಳಿದರು.

ನಗರದ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಜಾತಿ ಆಧಾರದ ಮೇಲೆ ಮತ ಕೇಳುತ್ತಿದ್ದಾರೆ. ಹುಟ್ಟಿದಾಗ ಜಾತಿ-ಜಾತಕ, ಮಧ್ಯದಲ್ಲಿ ನಾಟಕ, ಸತ್ತಾಗ ಸೂತಕ ಎಂದು ಎಲ್ಲರಿಗೂ ಗೊತ್ತಿದೆ. ಜಾತಿ ಬಿಟ್ಟು ಅಭಿವೃದ್ಧಿ ಬಗ್ಗೆ ಮಾತನಾಡಬೇಕು. ಸರ್ಕಾರ ಮ್ಯಾಚ್‌ ಫಿಕ್ಸಿಂಗ್‌ ರೀತಿ ವೋಟ್‌ ಫಿಕ್ಸಿಂಗ್‌ ಮಾಡಿರುವಂತೆ ಕಾಣುತ್ತಿದೆ. ಎರಡು ರಾಷ್ಟ್ರೀಯ ಪಕ್ಷಗಳು ಚುನಾವಣಾ ಅಕ್ರಮ ಎಸಗುತ್ತಿದ್ದರೂ, ಚುನಾವಣಾ ಆಯೋಗ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಜೆಡಿಎಸ್ ನಾಯಕರು ಸುದ್ದಿಗೋಷ್ಠಿ ನಡೆಸಿದರು​

ಬಿಜೆಪಿ ಅಭ್ಯರ್ಥಿ ಶಾಸಕ ಸ್ಥಾನ ಮಾರಾಟ ಮಾಡಿಕೊಂಡಿದ್ದಕ್ಕೆ ಉಪಚುನಾವಣೆ ಬಂದಿದೆ. ಆದರೆ, ಫೇಸ್‌ಬುಕ್‌ಗಳಲ್ಲಿ ನಮ್ಮ ಅಭ್ಯರ್ಥಿ ಮಾರಾಟವಾಗಿದ್ದಾರೆ ಎಂದು ಸುಳ್ಳುಸುದ್ದಿಯನ್ನು ಉದ್ದೇಶಪೂರ್ವಕವಾಗಿ ಹಬ್ಬಿಸಲಾಗುತ್ತಿದೆ. ಈ ಮೂಲಕ ನಮ್ಮ ಕಾರ್ಯಕರ್ತರ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಕೆಲಸ ಮಾಡಲಾಗುತ್ತಿದೆ. ಆದ್ದರಿಂದ ಚುನಾವಣಾ ಆಯೋಗ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ʼಮಾರಾಟ ಆಗಿರುವುದು ನಾವಲ್ಲ, ಬಿಜೆಪಿ ಮತ್ತು ಕಾಂಗ್ರೆಸ್‌ನವರುʼ

ಜೆಡಿಎಸ್‌ ಅಭ್ಯರ್ಥಿ ವಿ. ಕೃಷ್ಣಮೂರ್ತಿ ಮಾತನಾಡಿ, ಮಾರಾಟ ಆಗಿರುವುದು ನಾವಲ್ಲ, ಬಿಜೆಪಿ ಮತ್ತು ಕಾಂಗ್ರೆಸ್‌ನವರು ಮಾರಾಟವಾಗಿದ್ದಾರೆ. ನನ್ನ ಮೇಲೆ ಭಯ ಹುಟ್ಟಿರುವುದರಿಂದಲೇ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಸುಖಾ ಸುಮ್ಮನೇ ವ್ಯಕ್ತಿಯ ತೇಜೋವಧೆ ಮಾಡುವುದು ಸರಿಯಲ್ಲ. ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ನಮ್ಮ ನಾಯಕರು ಟಿಕೆಟ್ ಕೊಟ್ಟಿದ್ದೇ ತಪ್ಪಾ..? ಯುವಕರು ಬೆಳೆಯಬಾರದಾ..? ಎಂದು ಪ್ರಶ್ನಿಸಿದರು.

ಚುನಾವಣೆ ವೇಳೆ ಹನುಮಂತರಾಯಪ್ಪ ಅವರಿಗೆ ಒಕ್ಕಲಿಗರ ಮೇಲೆ ಪ್ರೀತಿ ಬಂದಿದೆ. ಜಾತಿ ಹೆಸರು ಹೇಳುವುದಕ್ಕಿಂತ ಮುಂಚೆ ಸಮಾಜಕ್ಕೆ ನೀವು ಏನು ಮಾಡಿದ್ದೀರಿ ಎಂಬುದನ್ನು ಹೇಳಬೇಕು. ಐಎಎಸ್‌ ಅಧಿಕಾರಿ ಡಿ.ಕೆ. ರವಿ ಕುಟುಂಬ ಕೂಡ ಒಕ್ಕಲಿಗರೇ ಅವರಿಗೇಕೆ ಸಹಾಯ ಮಾಡಲಿಲ್ಲ. ಕುಮಾರಣ್ಣ, ದೇವೇಗೌಡರು ಒಕ್ಕಲಿಗರೇ. ಚುನಾವಣೆಯಲ್ಲಿ ಜಾತಿ ರಾಜಕಾರಣ ಏಕೆ ಮಾಡುತ್ತಿದ್ದೀರಿ ಎಂದು ಅವರು ಪ್ರಶ್ನಿಸಿದರು.

‘ಕನಕಪುರದಿಂದ ಆರ್‌ಆರ್‌ ನಗರಕ್ಕೆ ಗೂಂಡಾಗಳು’

ಜೆಡಿಎಸ್‌ ಬೆಂಗಳೂರು ನಗರ ಘಟಕದ ಅಧ್ಯಕ್ಷ ಆರ್‌ .ಪ್ರಕಾಶ್‌ ಮಾತನಾಡಿ, ಚುನಾವಣೆ ವೇಳೆ ಭೂತದ ಬಾಯಲ್ಲಿ ಭಗವದ್ಗೀತೆ ಬರುತ್ತಿದೆ. ಮುನಿರತ್ನಂ ನಾಯ್ಡು ಅವರನ್ನು ಬೆಳೆಸಿದ್ದು ಡಿಕೆ ಸಹೋದರರು. ಕನಕಪುರದಿಂದ ಗೂಂಡಾಗಳನ್ನು ಕರೆಸಿ ಮುನಿರತ್ನಂಗೆ ಬೆಂಬಲ ನೀಡಿದ್ದಾರೆ. ಈಗ ಒಕ್ಕಲಿಗ ಕಾರ್ಡ್‌ನ್ನು ಚುನಾವಣೆಯಲ್ಲಿ ಬಳಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್‌ ಅಭ್ಯರ್ಥಿಯ ತಂದೆ ಹನುಮಂತರಾಯಪ್ಪ ಅವರಿಗೆ ದುರಾಸೆ, ಅಧಿಕಾರ ದಾಹ ಇದೆ. ಅವರ ಕೈಯಲ್ಲಿ ಆಗಲಿಲ್ಲ ಅಂತ ತಮ್ಮ ಮಗಳನ್ನು ಚುನಾವಣೆಗೆ ನಿಲ್ಲಿಸಿದ್ದಾರೆ. ತನ್ನ ಮಗಳಿಗೆ ಅನ್ಯಾಯ ಆಗಿದೆ. ಆದ್ದರಿಂದ, ಒಕ್ಕಲಿಗರೆಲ್ಲಾ ಒಂದಾಗಿ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಕೇಳುತ್ತಿದ್ದಾರೆ. ಒಕ್ಕಲಿಗ ಸಮಾಜಕ್ಕೆ ಯಾವತ್ತಿದ್ರೂ ದೇವೇಗೌಡರು, ಕುಮಾರಸ್ವಾಮಿ ಅವರೇ ನಾಯಕರು ಎಂದು ಹೇಳಿದರು.

ಕ್ರೈಂ ಬ್ರಾಂಚ್‌, ಚುನಾವಣಾ ಆಯೋಗಕ್ಕೆ ದೂರು

ಆರ್‌ಆರ್‌ ನಗರ ಜೆಡಿಎಸ್‌ ಅಭ್ಯರ್ಥಿ ವಿ. ಕೃಷ್ಣಮೂರ್ತಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್‌ ಮಾಡಿದ್ದ ಕೆಂಪೇಗೌಡ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಪೇಜ್‌ ವಿರುದ್ಧ ಸೈಬರ್ ಕ್ರೈಮ್, ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಯಿತು. ಜೆಡಿಎಸ್ ಅಭ್ಯರ್ಥಿ 5 ಕೋಟಿ ರೂ.ಗೆ ಮಾರಾಟವಾಗಿದ್ದಾರೆ ಎಂದು ಪೇಜ್‌ನಲ್ಲಿ ಪೋಸ್ಟ್‌ ಮಾಡಲಾಗಿತ್ತು. ಉದ್ದೇಶಪೂರ್ವಕವಾಗಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ತಕ್ಷಣ ಕ್ರಮಕೈಗೊಳ್ಳುವಂತೆ ದೂರು ನೀಡಲಾಯಿತು. ಈ ವೇಳೆ ರಾಜರಾಜೇಶ್ವರಿ ನಗರ ಕ್ಷೇತ್ರದ ಜೆಡಿಎಸ್‌ ಅಧ್ಯಕ್ಷ ಆರ್‌. ಕೇಶವ‌ ಮೂರ್ತಿ ಸೇರಿ ಅನೇಕ ಮುಖಂಡರು ಇದ್ದರು.

ABOUT THE AUTHOR

...view details