ಕರ್ನಾಟಕ

karnataka

ETV Bharat / state

ಸಂಕ್ರಾಂತಿ ಬಳಿಕ ಪಕ್ಷ ಸಂಘಟನೆಗೆ ಜೆಡಿಎಸ್ ವರಿಷ್ಠರ ಹೊಸ ಪ್ಲಾನ್: ಏನದು? - ಪಕ್ಷ ಸಂಘಟನೆಗೆ ಮುಂದಾಗುವಂತೆ ಕಾರ್ಯಕರ್ತರು, ಮುಖಂಡರನ್ನು ಹುರಿದುಂಬಿಸಲು ಜೆಡಿಎಸ್ ವರಿಷ್ಠರ ಪ್ಲಾನ್

ಮುಂದಿನ ವಾರ ಕುಮಾರಸ್ವಾಮಿ ಅವರು ಪಕ್ಷ ಸಂಘಟನೆಯ ರೂಪುರೇಷೆಗಳನ್ನು ಪ್ರಕಟಿಸುವ ಸಾಧ್ಯತೆ ಇದೆ. ರಾಜ್ಯದ ಎಲ್ಲ ಜಿಲ್ಲೆ, ತಾಲ್ಲೂಕುಗಳಲ್ಲಿ ಪ್ರವಾಸ ಕೈಗೊಂಡು ಪಕ್ಷ ಬಲಗೊಳಿಸಲು ಹಾಗೂ ಪಕ್ಷ ತೊರೆದವರ ಕ್ಷೇತ್ರಗಳಲ್ಲಿ ಪರ್ಯಾಯ ನಾಯಕರನ್ನು ಹುಟ್ಟುಹಾಕುವ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.

ಜೆಡಿಎಸ್
ಜೆಡಿಎಸ್

By

Published : Jan 3, 2022, 3:34 PM IST

ಬೆಂಗಳೂರು:ಇತ್ತೀಚೆಗೆ ನಡೆದ ವಿಧಾನಸಭೆ ಉಪಚುನಾವಣೆ, ವಿಧಾನ ಪರಿಷತ್ ಚುನಾವಣೆ ಹಾಗೂ ನಗರ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಪಕ್ಷಕ್ಕೆ ಆಗಿರುವ ಹಿನ್ನಡೆಯಿಂದ ವಿಚಲಿತರಾಗದಂತೆ ಪಕ್ಷ ಸಂಘಟನೆಗೆ ಮುಂದಾಗುವಂತೆ ಕಾರ್ಯಕರ್ತರು ಹಾಗೂ ಮುಖಂಡರನ್ನು ಹುರಿದುಂಬಿಸಲು ಜೆಡಿಎಸ್‍ ವರಿಷ್ಠರು ಸಿದ್ಧತೆ ಮಾಡಿಕೊಂಡಿದ್ದಾರೆ.

ಸಂಕ್ರಾಂತಿ ಹಬ್ಬದ ನಂತರ ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಲು ಜೆಡಿಎಸ್ ನಾಯಕರು ಹೆಚ್ಚು ಒತ್ತು ನೀಡಲಿದ್ದು, ನಿರಂತರ ಕಾರ್ಯಕ್ರಮಗಳನ್ನು ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಪ್ರಾದೇಶಿಕ ಪಕ್ಷವಾಗಿ ಮತ್ತೆ ಪುಟಿದೇಳುವ ಜೆಡಿಎಸ್ ಕನಸಿಗೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಪೆಟ್ಟು ಕೊಟ್ಟಿದೆ. 2023 ರ ವಿಧಾನಸಭೆಯಲ್ಲಿ 123 ಸ್ಥಾನ ಗೆದ್ದು ಸ್ವಂತ ಬಲದ ಮೇಲೆ ಅಧಿಕಾರ ಗದ್ದುಗೆ ಹಿಡಿಯುವ ಜೆಡಿಎಸ್ ನಾಯಕರ ಕನಸಿಗೆ ಕಲ್ಲು ಹಾಕಿದೆ.

ಹಾಗಾಗಿ, ಪಕ್ಷಕ್ಕೆ ಹೊಸ ಚೈತನ್ಯ ತುಂಬಲು ಯೋಜನೆ ರೂಪಿಸುತ್ತಿರುವ ನಾಯಕರು, ಪಕ್ಷದ ವಿವಿಧ ಹಂತದ ಪದಾಧಿಕಾರಿಗಳ ಬದಲಾವಣೆ, ಶಾಸಕರು, ಮುಖಂಡರಿಗೆ ಜವಾಬ್ದಾರಿ ಹಂಚಿಕೆ, ಕ್ಷೇತ್ರ, ವಿಭಾಗವಾರು ಸಭೆ, ಪಕ್ಷದ ಎಲ್ಲ ಹಂತದ ಕಾರ್ಯಕರ್ತರ ಸಭೆ, ಸಮಾವೇಶ ಆಯೋಜಿಸಿ ಪಕ್ಷದ ಮುಖಚರ್ಯೆಯನ್ನು ಬದಲಿಸಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕದಲ್ಲೇ ಜೆಡಿಎಸ್‌ಗೆ ದೊಡ್ಡ ಏಟು ಬೀಳುತ್ತಿದೆ. ಇತ್ತೀಚಿನ ಯಾವುದೇ ಚುನಾವಣೆಯಲ್ಲಿ ಮಹತ್ವದ ಮೈಲುಗಲ್ಲನ್ನು ಇಲ್ಲಿ ಸಾಧಿಸಿಲ್ಲ. ಕಳೆದ ಲೋಕಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹಾಗೂ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಸೋಲು ಜೆಡಿಎಸ್ ಬೆನ್ನೆಲುಬನ್ನೇ ಮುರಿದಿತ್ತು. ಆ ನಂತರದ ಯಾವುದೇ ಚುನಾವಣೆಯಲ್ಲೂ ಜೆಡಿಎಸ್ ಮೈಕೊಡವಿ ಎದ್ದು ನಿಂತು ತನ್ನ ಸಾಮರ್ಥ್ಯ ತೋರಿಸಿಲ್ಲ. ಇದು ಸಹ ವರಿಷ್ಠರ ಚಿಂತೆಗೀಡುಮಾಡಿದೆ.

ಬಿಡದಿ ಹಾಗೂ ಬೆಂಗಳೂರಿನಲ್ಲಿ ಈಗಾಗಲೇ ಎರಡು ಹಂತದ ಕಾರ್ಯಾಗಾರಗಳನ್ನು ನಡೆಸಿದ್ದು, ಮುಂಬರುವ 2023ರ ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಪೂರಕ ಕಾರ್ಯಕ್ರಮ ರೂಪಿಸಲಿದ್ದಾರೆ.

ರಾಜಕಾರಣದಲ್ಲಿ ಸೋಲು-ಗೆಲುವು ಸಹಜ. ಇತ್ತೀಚಿನ ಚುನಾವಣೆಗಳಲ್ಲಿ ಪಕ್ಷಕ್ಕಾಗಿರುವ ಹಿನ್ನಡೆ ಹಾಗೂ ಪಕ್ಷ ತೊರೆಯುತ್ತಿರುವ ಮುಖಂಡರಿಂದ ಧೃತಿಗೆಡುವ ಅಗತ್ಯವಿಲ್ಲ. ಪಕ್ಷವನ್ನು ಪುನರ್ ಸಂಘಟನೆ ಮಾಡಿ ಅಧಿಕಾರಕ್ಕೆ ತರುವ ಸಂಕಲ್ಪದೊಂದಿಗೆ ಕಾರ್ಯಪ್ರವೃತ್ತರಾಗುವಂತೆ ಕಾರ್ಯಕರ್ತರಿಗೆ ತುಂಬಲು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಪಕ್ಷದ ನಾಯಕರು ಸಜ್ಜಾಗುತ್ತಿದ್ದಾರೆ.

ಮುಂದಿನ ವಾರ ಕುಮಾರಸ್ವಾಮಿ ಅವರು ಪಕ್ಷ ಸಂಘಟನೆಯ ರೂಪುರೇಷೆಗಳನ್ನು ಪ್ರಕಟಿಸುವ ಸಾಧ್ಯತೆ ಇದೆ. ರಾಜ್ಯದ ಎಲ್ಲ ಜಿಲ್ಲೆ, ತಾಲ್ಲೂಕುಗಳಲ್ಲಿ ಪ್ರವಾಸ ಕೈಗೊಂಡು ಪಕ್ಷವನ್ನು ಬಲಗೊಳಿಸಲು ಹಾಗೂ ಪಕ್ಷ ತೊರೆದವರ ಕ್ಷೇತ್ರಗಳಲ್ಲಿ ಪರ್ಯಾಯ ನಾಯಕರನ್ನು ಹುಟ್ಟುಹಾಕುವ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಪಕ್ಷಕ್ಕೆ ಶಕ್ತಿ ತುಂಬಲು ಜನಪರ ಹೋರಾಟಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಈಗಾಗಲೇ ಘೋಷಣೆ ಮಾಡಿರುವಂತೆ ಸಂಕ್ರಾಂತಿ ನಂತರ ಮೊದಲ ಹಂತದ ವಿಧಾನಸಭಾ ಚುನಾವಣೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಜೆಡಿಎಸ್‍ ವರಿಷ್ಠರು, ಪಕ್ಷಕ್ಕೆ ಹೊಸ ಚೈತನ್ಯ ತುಂಬಲು ಯೋಜನೆ ರೂಪಿಸುತ್ತಿದ್ದಾರೆ ಎನ್ನಲಾಗಿದೆ.

For All Latest Updates

ABOUT THE AUTHOR

...view details