ಬೆಂಗಳೂರು: ಕನಕಪುರ ಭಾಗದ ಜೆಡಿಎಸ್ ನಾಯಕರಾದ ಡಿ ಎಂ ವಿಶ್ವನಾಥ್ ಹಾಗೂ ರಾಧಾಕೃಷ್ಣ ಕಾಂಗ್ರೆಸ್ ಗೆ ಸೇರ್ಪಡೆಯಾದರು. ಈ ಇಬ್ಬರು ನಾಯಕರು ಹಾಗೂ ಅವರ ಬೆಂಬಲಿಗನ್ನು ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪಕ್ಷಕ್ಕೆ ಬರಮಾಡಿಕೊಂಡರು. ಪಕ್ಷದ ಶಾಲು ಹೊದಿಸಿ ಧ್ವಜ ನೀಡಿ ಪಕ್ಷ ಸೇರ್ಪಡೆ ಮಾಡಿಕೊಂಡರು.
ಇದಾದ ಬಳಿಕ ಮಾತನಾಡಿದ ಡಿಕೆ ಶಿವಕುಮಾರ್, ಇಂದು ಜೆಡಿಎಸ್ ಪಕ್ಷದ ಇಬ್ಬರು ಪ್ರಮುಖ ನಾಯಕರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದೇವೆ. ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ವಿರುದ್ಧ ಚುನಾವಣೆಗಳಲ್ಲಿ ಸ್ಪರ್ಧೆ ಮಾಡಿ ಬಹಳ ಕಡಿಮೆ ಅಂತರದಲ್ಲಿ ಸೋತಿದ್ದ, ಜೆಡಿಎಸ್ ಪಕ್ಷದ ಸಂಘಟನೆ ಮಾಡಿಕೊಂಡು ಬಂದಿದ್ದ ಡಿ.ಎಂ. ವಿಶ್ವನಾಥ್ ಅವರು ಕಾಂಗ್ರೆಸ್ ಪಕ್ಷವನ್ನು ಸೇರುತ್ತಿದ್ದಾರೆ.
ಅವರ ಕುಟುಂಬ ಕಾಂಗ್ರೆಸ್ ಪಕ್ಷದ ಆಧಾರ ಸ್ತಂಭವಾಗಿತ್ತು. ಅವರು ನನ್ನ ಪರವಾಗಿ ಒಂದೆರಡು ಚುನಾವಣೆಗಳಲ್ಲಿ ಪ್ರಚಾರ ಮಾಡಿ ಬೆಂಬಲ ನೀಡಿದ್ದ ನೆನಪು ಈಗಲೂ ಹಸಿಯಾಗಿದೆ. ನಂತರ ಜೆಡಿಎಸ್ ನಲ್ಲಿ ನಾಯಕರಾಗಿ ಬೆಳೆಯುವ ಕನಸು ಕಂಡ ಕುಟುಂಬ ಆ ಕೆಲಸ ಮಾಡಿಕೊಂಡು ಬಂದಿತ್ತು. ಇಡೀ ನಮ್ಮ ಜಿಲ್ಲೆಯಲ್ಲಿ ಡಿ.ಎಂ ವಿಶ್ವನಾಥ್ ಅವರು ಪಕ್ಷ ಸಂಘಟನೆ ಕೆಲಸ ಮಾಡಿದ್ದಾರೆ. ಇಂದು ಅವರಿಗೆ ಬಿಜೆಪಿಯಿಂದ ಆಹ್ವಾನ ಇದ್ದರೂ ರಾಜ್ಯ, ಜಿಲ್ಲೆ ಹಾಗೂ ಕನಕಪುರ ಕ್ಷೇತ್ರದ ಪರಿಸ್ಥಿತಿ ಅವಲೋಕಿಸಿ, ಡಿ.ಕೆ. ಶಿವಕುಮಾರ್ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೋಗಬೇಕು ಎಂದು ತಮ್ಮ ನಾಯಕರುಗಳ ಜತೆ ಚರ್ಚೆ ಮಾಡಿ ಈ ತೀರ್ಮಾನ ಮಾಡಿದ್ದಾರೆ ಎಂದು ಶಿವಕುಮಾರ್ ಹೇಳಿದರು.
ಷರತ್ತುಗಳಿಲ್ಲದೇ ಪಕ್ಷ ಸೇರುತ್ತಿದ್ದಾರೆ: ಕನಕಪುರ ಕ್ಷೇತ್ರದ ಶಾಸಕನಾಗಿ, ರಾಜ್ಯ ಕಾಂಗ್ರೆಸ್ ಅಧ್ಯಕ್ಷನಾಗಿ ವಿಶ್ವನಾಥ್ ಮತ್ತು ಕನಕಪುರ, ರಾಮನಗರ ಜಿಲ್ಲೆಯ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಂಡು ತುಂಬು ಹೃದಯದ ಸ್ವಾಗತ ಮಾಡುತ್ತಿದ್ದೇನೆ. ಮಂಡ್ಯದ ಕಿಲಾರ ಕ್ಷೇತ್ರದಲ್ಲಿ ಎಸ್.ಎಂ. ಕೃಷ್ಣ ಅವರ ಜತೆ ಉತ್ತಮ ಒಡನಾಟ ಇಟ್ಟುಕೊಂಡಿದ್ದ, ಜೆಡಿಎಸ್ ಪಕ್ಷದ ಜತೆ ಗುರುತಿಸಿಕೊಂಡಿದ್ದ ರಾಧಾಕೃಷ್ಣ ಅವರು ಬಹಳ ಹಿಂದೆಯೇ ಯಾವುದೇ ಷರತ್ತು ಇಲ್ಲದೆ ಪಕ್ಷಕ್ಕೆ ಸೇರುತ್ತೇವೆ ಎಂದು ಹೇಳಿದ್ದರು.