ಬೆಂಗಳೂರು : ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಅವಹೇಳನಕಾರಿ ಪೋಸ್ಟರ್ ಅಂಟಿಸಿದ ಕಿಡಿಗೇಡಿಗಳ ಬಂಧನಕ್ಕೆ ಪೊಲೀಸ್ ಇಲಾಖೆ ಮೀನಮೇಷ ಎಣಿಸುತ್ತಿದೆ ಎಂದು ಜೆಡಿಎಸ್ ಕಿಡಿಕಾರಿದೆ. ಕೂಡಲೇ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸದಿದ್ದರೆ, ವಿಧಾನಸೌಧದಲ್ಲಿರುವ ಗೃಹ ಸಚಿವರ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಪಕ್ಷದ ರಾಜ್ಯ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ನಗರ ಘಟಕದ ಅಧ್ಯಕ್ಷ ಹೆಚ್ ಎಂ ರಮೇಶ್ ಗೌಡ, ವಿಧಾನ ಪರಿಷತ್ ಸದಸ್ಯ ಕೆ. ಎ ತಿಪ್ಪೇಸ್ವಾಮಿ, ಪರಿಷತ್ ಮಾಜಿ ಸದಸ್ಯ ಚೌಡರೆಡ್ಡಿ ತೂಪಲ್ಲಿ, ಪಕ್ಷದ ರಾಜ್ಯದ ಕಾನೂನು ಘಟಕದ ಅಧ್ಯಕ್ಷ ಎ. ಪಿ ರಂಗನಾಥ್, ಮುಖಂಡ ಕೆ. ಮಂಜು ಅವರು, ತಪ್ಪಿತಸ್ಥರ ಬಂಧಿಸಬೇಕು ಎಂದು ಒತ್ತಾಯಿಸಿದರು.
ಪರಿಷತ್ ಸದಸ್ಯರಾದ ತಿಪ್ಪೇಸ್ವಾಮಿ ಮಾತನಾಡಿ, 'ನಮ್ಮ ಪಕ್ಷದ ನಾಯಕರ ವಿರುದ್ಧ ಜೆಡಿಎಸ್ ಪಕ್ಷದ ಕಚೇರಿಯ ಆವರಣದಲ್ಲೇ ಕಾಂಗ್ರೆಸ್ ಕಾರ್ಯಕರ್ತರು ಪೋಸ್ಟರ್ ಅಂಟಿಸಿದ್ದರು. ಯಾರು ಹೀಗೆ ಮಾಡಿದ್ದಾರೆ ಎಂದು ನಾವು ಕೂಡ ಪರಿಶೀಲನೆ ನಡೆಸಿ ಪೊಲೀಸ್ ಕಮಿಷನರ್‌ಗೆ ದೂರು ನೀಡಿದ್ದೆವು. ಕಮಿಷನರ್ ಸೂಚನೆಯಂತೆ ಶ್ರೀರಾಂಪುರ ಸ್ಟೇಷನ್‌ನಲ್ಲಿ ಕೂಡ ದೂರು ದಾಖಲಿಸಿದ್ದೇವೆ. ನಮ್ಮ ನಾಯಕರ ವಿರುದ್ಧ ಪೋಸ್ಟರ್ ಅಂಟಿಸಿರುವ ವಿಚಾರ ಮತ್ತು ವೈಯಕ್ತಿಕ ತೇಜೋವಧೆ, ವ್ಯಕ್ತಿ ನಿಂದನೆ ಆಧಾರವಾಗಿ ದೂರು ದಾಖಲಿಸಿದ್ದೇವೆ. ಆದರೆ ಇಲ್ಲಿಯವರೆಗೂ ಪೊಲೀಸರು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ. ಇಂಡಿಯನ್ ಪೀನಲ್ ಕೋಡ್, ಐಟಿ ಆ್ಯಕ್ಟ್‌ನಡಿ ಕ್ರಮ ಜರುಗಿಸಬೇಕಾಗಿತ್ತು. ಅದನ್ನು ಪೊಲೀಸರು ಮಾಡಿಲ್ಲ ಎಂದರು.
ರಾಜಕೀಯದಲ್ಲಿ ಪಕ್ಷದ ಹಿರಿಯ ನಾಯಕರ ವಿರುದ್ಧ ವ್ಯಕ್ತಿನಿಂದನೆ ಮಾಡಿದಾಗ ಅವರ ಹಿಂಬಾಲಕರು, ಅಭಿಮಾನಿಗಳು, ಕಾರ್ಯಕರ್ತರಿಗೆ ನೋವು ಉಂಟಾಗುತ್ತದೆ. ನಮ್ಮ ಕಾರ್ಯಕರ್ತರನ್ನು ಕೂಡ ನಾವು ಸಮಾಧಾನಪಡಿಸಿದ್ದೇವೆ. ಆದರೆ, ಇಲ್ಲಿಯವರೆಗೂ ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಆರೋಪಿ ಎಸ್. ಮನೋಹರ್ ಶುಕ್ರವಾರ ಬೆಂಗಳೂರು ನಗರ ಜೆಡಿಎಸ್ ಜಿಲ್ಲಾಧ್ಯಕ್ಷರಾದ ರಮೇಶ್‌ಗೌಡ ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದು ಅಲ್ಲದೇ, ವೈಯಕ್ತಿಕ ತೇಜೋವಧೆ, ವ್ಯಕ್ತಿ ನಿಂದನೆ ಮಾಡುವ ಕೆಲಸ ಮಾಡಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ ಸರ್ಕಾರ ಕೂಡಲೇ ಈ ಬಗ್ಗೆ ಎಚ್ಚೆತ್ತುಕೊಂಡು ಕಡಿವಾಣ ಹಾಕಬೇಕಾಗಿದೆ. ಇಲ್ಲವಾದರೆ ಪರಸ್ಪರ ಪ್ರತಿಭಟನೆಗಳು ನಡೆಯುತ್ತವೆ. ಪರಿಸ್ಥಿತಿ ಮಿತಿ ಮೀರಿದರೆ ಕಾನೂನು ಸುವ್ಯವಸ್ಥೆ ಹದಗೆಡಬಹುದು. ಗೃಹ ಇಲಾಖೆ, ಡಿಜಿಪಿಯವರು ಇದನ್ನು ಸೂಕ್ಷ್ಮವಾಗಿ ಗಮನಹರಿಸಿ ಈ ರೀತಿಯ ಘಟನೆಗಳು ಪುನರಾವರ್ತನೆ ಆಗದಂತೆ ಕ್ರಮ ವಹಿಸಬೇಕು. ಇದು ನಿಲ್ಲದಿದ್ದರೆ ನಾವು ಹೋರಾಟ ಮಾಡಲಿದ್ದೇವೆ ಎಂದು ಸರ್ಕಾರಕ್ಕೆ ಅವರು ಎಚ್ಚರಿಕೆ ನೀಡಿದರು.
ಎಸ್ ಮನೋಹರ್ ವಿರುದ್ಧ ಆಕ್ರೋಶ : ಜೆಡಿಎಸ್ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ರಮೇಶ್‌ಗೌಡ ಮಾತನಾಡಿ, 'ಚಿಕ್ಕವಯಸ್ಸಿನಲ್ಲೇ ವಿಧಾನ ಪರಿಷತ್ ಸದಸ್ಯನಾಗಿದ್ದೇನೆ ಎಂದು ನನ್ನ ತೇಜೋವಧೆ ಮಾಡುವ ಕೆಲಸ ಮಾಡುತ್ತಿದ್ದಾರೆ. ನಾನು ಅವರುಗಳಂತೆ ಜಾಮೀನು ತೆಗೆದುಕೊಂಡು ಓಡಾಡುತ್ತಿಲ್ಲ. ಎಸ್ ಮನೋಹರ್ ವಿರುದ್ಧ ನಾನು ಕಾಂಗ್ರೆಸ್ ವರಿಷ್ಠ ನಾಯಕರಿಗೂ ಕೂಡ ಪತ್ರ ಬರೆಯುತ್ತೇನೆ' ಎಂದರು.