ಬೆಂಗಳೂರು: ಸಿಂದಗಿ ಹಾಗೂ ಹಾನಗಲ್ ಕ್ಷೇತ್ರಗಳ ಉಪಚುನಾವಣೆಯಲ್ಲಿ ಜೆಡಿಎಸ್ಗೆ ಭಾರಿ ಹಿನ್ನಡೆಯಾದ ಹಿನ್ನೆಲೆಯಲ್ಲಿ ಆತ್ಮಾವಲೋಕನ ಸಭೆ ನಡೆಸಿದ್ದಾರೆ.
ಪದ್ಮನಾಭ ನಗರದಲ್ಲಿರುವ ಗೌಡರ ನಿವಾಸದಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಸಭೆ ನಡೆದಿದೆ. ಅಲ್ಲದೇ, ಉಪಚುನಾವಣೆಯಲ್ಲಿ ಉಂಟಾದ ಸೋಲಿನ ಪರಾಮರ್ಶೆ ಮಾಡಿದ್ದಾರೆ.
ದೇವೇಗೌಡರು, ಕುಮಾರಸ್ವಾಮಿ, ಸಂಸದ ಪ್ರಜ್ವಲ್ ರೇವಣ್ಣ ಸೇರಿದಂತೆ ಅನೇಕ ನಾಯಕರು ಚುನಾವಣಾ ಪ್ರಚಾರ ನಡೆಸಿದ್ದರೂ ಜೆಡಿಎಸ್ಗೆ ಠೇವಣಿಯೂ ಸಿಗದೆ ಭಾರೀ ಹಿನ್ನಡೆ ಉಂಟಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿಂದಗಿ ಕ್ಷೇತ್ರವನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದ್ದ ಜೆಡಿಎಸ್ಗೆ ಆ ಸ್ಥಾನವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಪಕ್ಷಕ್ಕೆ ಸಾಂಪ್ರದಾಯಿಕ ಮತಗಳು ಸಹ ಬರದ ಕಾರಣ, ಎಲ್ಲಿ ಎಡವಿದ್ದೇವೆ ಎಂಬುದರ ಬಗ್ಗೆ ನಾಯಕರು ಪರಾಮರ್ಶೆ ನಡೆಸಿದ್ದಾರೆ ಎಂಬುದು ತಿಳಿದು ಬಂದಿದೆ.