ಬೆಂಗಳೂರು : ಜೆಡಿಎಸ್ ನಾಯಕ ಹಾಗೂ ಮಾಜಿ ಶಾಸಕ ವೈಎಸ್‌ವಿ ದತ್ತ ಇಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಭೇಟಿಯಾಗಿ ಮಾತುಕತೆ ನಡೆಸಿರೋದು ತೀವ್ರ ಕುತೂಹಲ ಮೂಡಿಸಿದೆ.
ಕಳೆದ ಕೆಲ ತಿಂಗಳುಗಳಿಂದ ವೈಎಸ್‌ವಿ ದತ್ತ ಜೆಡಿಎಸ್ ತೊರೆದು ಕಾಂಗ್ರೆಸ್‌ನತ್ತ ಮುಖ ಮಾಡಲಿದ್ದಾರೆ ಎಂಬ ಮಾತು ಕೇಳಿ ಬರುತ್ತಲೇ ಇತ್ತು. ಆದರೆ, ಮಾಧ್ಯಮಗಳಿಗೆ ಯಾವ ಸಂದರ್ಭದಲ್ಲಿಯೂ ತಾವು ಜೆಡಿಎಸ್ ತೊರೆಯುವುದಾಗಿ ದತ್ತ ಹೇಳಿರಲಿಲ್ಲ. ಜೆಡಿಎಸ್ ಪಕ್ಷ ತಮಗೆ ಎಲ್ಲಾ ರೀತಿಯ ಅನುಕೂಲಗಳನ್ನು ಒದಗಿಸಿದೆ. ಪಕ್ಷ ಬಿಡುವ ಯೋಚನೆ ಇಲ್ಲ ಎಂದು ಹೇಳುತ್ತಾ ಬಂದಿದ್ದರು.
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಕೃಪಾ ಕಟಾಕ್ಷದಿಂದ ಶಾಸಕರಾಗಿದ್ದ ಇತ್ತೀಚಿನ ವರ್ಷಗಳಲ್ಲಿ ಕಡೆಗಣನೆಗೆ ಒಳಗಾಗಿದ್ದರು. ದೇವೇಗೌಡರು ರಾಷ್ಟ್ರ ರಾಜಕಾರಣದತ್ತ ಹೆಚ್ಚಿನ ಆಸಕ್ತಿವಹಿಸಿ ರಾಜ್ಯದ ಜವಾಬ್ದಾರಿಯನ್ನು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಗೆ ನೀಡಿದ ನಂತರ ದತ್ತ ಸಂಪೂರ್ಣ ಕಡೆಗಣನೆಗೆ ಒಳಗಾಗಿದ್ದರು.
ಒಂದೆರಡು ಸಾರಿ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎಂಬ ಮಾಹಿತಿ ಕೇಳಿ ಬಂದಿತ್ತು ಹಾಗೂ ಇವರು ಕೆಲ ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿದ್ದು ದೊಡ್ಡ ಸುದ್ದಿಯಾಗಿತ್ತು. ಎಲ್ಲಾ ಸಂದರ್ಭದಲ್ಲಿಯೂ ತಾವು ಜೆಡಿಎಸ್ ತೊರೆಯುವ ಯೋಚನೆ ಮಾಡಿಲ್ಲ ಎಂದು ಹೇಳುತ್ತಲೇ ಬಂದಿದ್ದರು.
ಇತ್ತೀಚಿನ ಕೆಲ ತಿಂಗಳುಗಳಲ್ಲಿ ಸಾಕಷ್ಟು ಜೆಡಿಎಸ್ ನಾಯಕರು ಪಕ್ಷ ತೊರೆದು ಕಾಂಗ್ರೆಸ್‌ನತ್ತ ಮುಖ ಮಾಡುತ್ತಿದ್ದಾರೆ. ಹಲವು ಹಾಲಿ ಶಾಸಕರು ಹಾಗೂ ಮಾಜಿ ಶಾಸಕರು ಮತ್ತು ಮಾಜಿ ಸಚಿವರು ಕೈಹಿಡಿಯಲು ಮುಂದಾಗಿದ್ದಾರೆ. ಇದೀಗ ಇವರ ಸಾಲಿಗೆ ವೈಎಸ್ ವಿ ದತ್ತ ಸಹ ಸೇರ್ಪಡೆ ಆಗಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಜೆಡಿಎಸ್ ಪಕ್ಷದಲ್ಲಿ ಹಿರಿಯ ನಾಯಕರಿಗೆ ಮಾನ್ಯತೆ ಕಡಿಮೆಯಾಗುತ್ತಿದ್ದಂತೆ ವಲಸೆ ಆರಂಭಿಸಿರುವ ಪ್ರಮುಖರಲ್ಲಿ ಇದೀಗ ವೈಎಸ್‌ವಿ ದತ್ತ ಸಹ ಸೇರ್ಪಡೆಯಾಗಿದ್ದಾರೆ. ಸಿದ್ದರಾಮಯ್ಯರನ್ನ ಇಂದು ಬೆಳಗ್ಗೆ ಅವರ ಸರ್ಕಾರಿ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಅರ್ಧಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿರುವ ಉಭಯ ನಾಯಕರು, ರಾಜಕೀಯ ವಲಯದಲ್ಲಿ ಸಾಕಷ್ಟು ದೊಡ್ಡ ಕುತೂಹಲ ಮೂಡಿಸಿದ್ದಾರೆ. ಈಗಾಗಲೇ ಮಾಜಿ ಸಚಿವ ಹಾಗೂ ಶಾಸಕ ಜಿ ಟಿ ದೇವೇಗೌಡ, ಶ್ರೀನಿವಾಸ್ ಗೌಡ, ಎಸ್ ಆರ್ ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಮತ್ತಿತರು ಕಾಂಗ್ರೆಸ್‌ನತ್ತ ಒಲವು ತೋರಿದ್ದಾರೆ.
ಇತ್ತೀಚೆಗಷ್ಟೇ ಕೋಲಾರ ಭಾಗದ ವಿಧಾನ ಪರಿಷತ್ ಸದಸ್ಯ ಸಿ ಆರ್ ಮನೋಹರ್ ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ಇನ್ನು ಸಾಕಷ್ಟು ನಾಯಕರು ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ. ಇದೀಗ ವೈಎಸ್‌ವಿ ದತ್ತ ನಾಯಕರನ್ನು ಭೇಟಿಯಾಗಿ ಚರ್ಚಿಸಿರೋದು ತೀವ್ರ ಕುತೂಹಲ ಮೂಡಿಸಿದೆ.
ಇದನ್ನೂ ಓದಿ : ನೂತನ ಪಿಂಚಣಿ ಯೋಜನೆ ಸರ್ಕಾರಿ ನೌಕರರಿಗೆ ಮಾರಕ: ಬಸವರಾಜ ಹೊರಟ್ಟಿ ಕಳವಳ