ಬೆಂಗಳೂರು :ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಪುತ್ರ, ನಟ ನಿಖಿಲ್ ಕುಮಾರಸ್ವಾಮಿ ಅವರ ರಾಜಕೀಯ ಜೀವನದ ಬಗ್ಗೆ ಚರ್ಚೆ ಏರ್ಪಟ್ಟಿದ್ದು, ಈ ಬಗ್ಗೆ ಖುದ್ದು ಅವರೇ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.''ನಿನ್ನೆಯ ದಿನ ಚರ್ಚೆಗೆ ಗ್ರಾಸವಾದ ವಿಷಯದ ಬಗ್ಗೆ ಸ್ಪಷ್ಟನೆ ನೀಡಲು ಇಚ್ಛಿಸುತ್ತೇನೆ. ಲೋಕಸಭೆ, ವಿಧಾನಸಭೆ ಚುನಾವಣೆಯ ಸೋಲಿನ ಬಳಿಕ ನಾನು ರಾಜಕಾರಣದಿಂದ ಒಂದು ಹೆಜ್ಜೆ ಹೊರಗಡೆ ಇಟ್ಟಿದ್ದೇನೆ ಎನ್ನುವ ಭಾವನೆ ಯಾರಿಗೂ ಬೇಡ'' ಎಂದು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ''ನಾನು ಜವಾಬ್ದಾರಿಯನ್ನು ಅರಿತಿದ್ದೇನೆ. ಚುನಾವಣೆಯ ಸೋಲು ತಾತ್ಕಾಲಿಕ. ಜನರು ನನಗೆ ಸದಾ ಕಾಲ ಪ್ರೀತಿ, ವಿಶ್ವಾಸ, ಗೌರವದಲ್ಲಿ ಎಂದೂ ಕೊರತೆ ಮಾಡಿಲ್ಲ. ಸಮಯ, ಸಂದರ್ಭ, ಕಾಲ ಎಲ್ಲದ್ದಕ್ಕೂ ಉತ್ತರ ಕೊಡುತ್ತದೆ'' ಎಂದಿದ್ದಾರೆ. ''ಮಾಜಿ ಪ್ರಧಾನಮಂತ್ರಿಗಳ ಮೊಮ್ಮಗ, ಮಾಜಿ ಮುಖ್ಯಮಂತ್ರಿಗಳ ಮಗ ಎನ್ನುವುದು ಒಂದು ಭಾಗವಾದರೆ, ಕನ್ನಡ ಚಿತ್ರರಂಗದಲ್ಲಿ ಒಬ್ಬ ಕಲಾವಿದನ ಸ್ಥಾನ ಕೊಟ್ಟಿರುವ ಸಮಸ್ತ ಕಲಾಭಿಮಾನಿಗಳಿಗೆ ನಾನು ಎಂದೆಂದಿಗೂ ಚಿರಋಣಿ'' ಎಂದು ನಿಖಿಲ್ ಹೇಳಿದ್ದಾರೆ.
''ನನ್ನ ಮೊದಲ ಚಿತ್ರ ಜಾಗ್ವಾರ್ ಮತ್ತು ನಾನು ನಟಿಸಿರುವ ಎಲ್ಲ ಸಿನಿಮಾಗಳಲ್ಲೂ ಬೆನ್ನುತಟ್ಟಿ ಆಶೀರ್ವದಿಸಿ, ಪ್ರೋತ್ಸಾಹಿಸಿ ನನ್ನ ಯಶಸ್ಸಿಗೆ ನೀವೆಲ್ಲರೂ ಕಾರಣರಾಗಿದ್ದಿರಿ. ಅದಕ್ಕೆ ನಾನು ಆಭಾರಿ. ಇನ್ನೂ ಬೆಟ್ಟದಷ್ಟು ಕನಸು ಹೊತ್ತು ಹಲವಾರು ಚಿತ್ರಗಳಲ್ಲಿ ನಟಿಸಿ ನಿಮ್ಮನ್ನು ಮನರಂಜಿಸಬೇಕು ಎನ್ನುವುದು ನನ್ನ ಜೀವನದ ಗುರಿ. ಇಲ್ಲಿಯವರೆಗೂ ನನ್ನ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಮುಂದೆಯೂ ನಾನು ನಿಮ್ಮ ನಿರೀಕ್ಷೆಗೂ ಮೀರಿ ಚಿತ್ರಗಳನ್ನು ಮಾಡುವವನಿದ್ದೇನೆ. ಕೊನೆಯದಾಗಿ ಎಲ್ಲ ಮಾಧ್ಯಮದ ಮಿತ್ರರಿಗೆ ರಾಜಕಾರಣ ಮತ್ತು ಸಿನಿಮಾದ ವಿಚಾರವಾಗಿ ನನಗೆ ಸಂಬಂಧಿಸಿದ ವಿಷಯಗಳಿದ್ದರೆ ಆ ಪ್ರಶ್ನೆಗಳಿಗೆ ನಾನೇ ಉತ್ತರ ನೀಡಲು ಬಯಸುತ್ತೇನೆ'' ಎಂದು ನಿಖಿಲ್ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ನಿಖಿಲ್ ಚುನಾವಣೆಗೆ ಸ್ಪರ್ಧಿಸಲ್ಲ ಎಂದಿದ್ದ ಹೆಚ್ಡಿಕೆ:ನಿಖಿಲ್ ಕುಮಾರಸ್ವಾಮಿ ರಾಜಕೀಯ ಜೀವನದ ಕುರಿತಂತೆ ಮಂಡ್ಯದಲ್ಲಿ ಎರಡು ದಿನಗಳ ಹಿಂದೆ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ''ಮುಂದಿನ ಐದು ವರ್ಷ ನಿಖಿಲ್ ಕುಮಾರಸ್ವಾಮಿ ಯಾವುದೇ ಚುನಾವಣೆಗೆ ಸ್ಪರ್ಧೆ ಮಾಡಲ್ಲ. ನಿಖಿಲ್‌ಗೆ ಸಲಹೆ ನೀಡಿದ್ದೇನೆ, ರಾಜಕೀಯ ಸಹವಾಸಕ್ಕೆ ಹೋಗಬೇಡ. ನಿನಗೆ ಭಗವಂತ ನೀಡಿದ ಕಲೆ ಇದೆ, ಸಿನಿಮಾ ಮಾಡು ಎಂದು ಹೇಳಿದ್ದೇನೆ'' ಅಂತ ಕುಮಾರಸ್ವಾಮಿ ಹೇಳಿದ್ದರು. ಇದರ ಬೆನ್ನಲ್ಲೇ ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಹಲವು ನಾಯಕರು ಪ್ರತಿಕ್ರಿಯೆ ನೀಡಿದ್ದರು. ಇದರಿಂದಾಗಿ ನಿಖಿಲ್ ರಾಜಕೀಯ ಭವಿಷ್ಯದ ಬಗ್ಗೆ ಚರ್ಚೆ ಶುರುವಾಗಿತ್ತು.
ಇದನ್ನೂ ಓದಿ:ಮುಂದಿನ ಐದು ವರ್ಷ ನಿಖಿಲ್ ಕುಮಾರಸ್ವಾಮಿ ಚುನಾವಣೆಗೆ ಸ್ಪರ್ಧಿಸಲ್ಲ : ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ