ಬೆಂಗಳೂರು: ಕಾಂಗ್ರೆಸ್ನ ಸಾಫ್ಟ್, ಹಾರ್ಡ್ ಹಿಂದುತ್ವ ನಮಗೆ ಗೊತ್ತಿಲ್ಲ. ಇದೆಲ್ಲಾ ಕಾಂಗ್ರೆಸ್ನ ನಾಟಕ. ಜೆಡಿಎಸ್ನ ಹಿರಿಯ ನಾಯಕ ಬಸವರಾಜ ಹೊರಟ್ಟಿ ಅವರನ್ನು ಮುಂದಿಟ್ಟುಕೊಂಡು ಆಟ ಆಡುತ್ತಿದ್ದಾರೆ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಏನು ಎಂಬುದು ಗೊತ್ತಿದೆ. ಸಭಾಪತಿ ವಿಚಾರದಲ್ಲಿ ಜಾತ್ಯಾತೀತ ನಾಯಕತ್ವ ಪ್ರಶ್ನೆ ಮಾಡುವ ನಾಟಕವಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಸಭಾಪತಿ ಅವರೇ ರಾಜೀನಾಮೆ ಕೊಡಲು ಸಿದ್ಧವಿದ್ದರು. ಆದರೆ ಅವರ ಪಕ್ಷದವರೇ ಕೊಡಬೇಡಿ ಎಂದು ಹೇಳಿದ್ದಾರೆ. ಏಕೆಂದರೆ ನನ್ನನ್ನು ಟೆಸ್ಟ್ ಮಾಡಬೇಕೆಂದು ಈ ನಾಟಕ ಮಾಡಿದ್ದಾರೆ. ಗೋದ್ರಾ ಘಟನೆ ನಡೆದಾಗ ನಾನು ಗುಜರಾತ್ಗೆ ಹೋಗಿದ್ದೆ. ಇವರಲ್ಲಿ ಯಾರಾದರೂ ಹೋಗಿದ್ದಾರಾ?. ಕಾಂಗ್ರೆಸ್ನವರು ನನ್ನನ್ನು ಟೆಸ್ಟ್ ಮಾಡುತ್ತಿದ್ದಾರೆ. ಜೀವನದಲ್ಲಿ ಹೋರಾಟ ಮಾಡಿ ಈ ಹಂತಕ್ಕೆ ಬಂದಿದ್ದೇನೆ. ಕಾಂಗ್ರೆಸ್ ಏನೆಂದು ನನಗೆ ಗೊತ್ತಿದೆ ಎಂದು ಗುಡುಗಿದರು.
ಮೈತ್ರಿ ಸರ್ಕಾರದ ವೇಳೆ ಸಭಾಪತಿ ಸ್ಥಾನ ನಮಗೆ ಬಿಟ್ಟುಕೊಡಿ ಎಂದು ನಾವು ಕೇಳಿದ್ದೆವು. ಆಗ ವಿಧಾನಸಭೆಯಲ್ಲಿ ರಮೇಶ್ ಕುಮಾರ್ ಸ್ಪೀಕರ್ ಆಗಿದ್ದರು, ಮುಂದೆ ಮಾಡೋಣ ಎಂದು ಹೇಳಿದ್ದರು. ಆದರೆ ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಬಳಿಕ ಸಿದ್ದರಾಮಯ್ಯ ಅವರು, ಎಸ್.ಆರ್.ಪಾಟೀಲ್ ಅವರನ್ನು ಸಭಾಪತಿ ಮಾಡೋಣ ಎಂದು ಹೇಳಿದ್ದರು. ನಾನು ಬಸವರಾಜ ಹೊರಟ್ಟಿ ಅವರನ್ನು ಮಾಡೋಣ ಎಂದಿದ್ದೆ. ಆದರೆ ದೆಹಲಿ ನಾಯಕರು ಬೇರೆಯವರ ಹೆಸರು ಹೇಳಿದ್ದರು ಎಂದರು.
ಬಿಜೆಪಿ ಜೊತೆ ಜೆಡಿಎಸ್ ವಿಲೀನ ಕುರಿತು ಚರ್ಚೆಯೇ ಆಗಿಲ್ಲ. ಇದು ನಗು ತರಿಸುತ್ತದೆ. ಜನವರಿ 7ರಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅರಮನೆ ಮೈದಾನದಲ್ಲಿ ನಡೆಯುವ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಈ ಬಗ್ಗೆ ಗಟ್ಟಿಯಾಗಿ ಹೇಳಲಿದ್ದಾರೆ ಎಂದರು.