ಬೆಂಗಳೂರು: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಹೇಗೆ ಬಂತು?. ಶಾಸಕರನ್ನು ಹೊರಗೆ ಕಳಿಸಿದ್ದು ಯಾರು ಎಂಬುದೆಲ್ಲಾ ನನಗೆ ಗೊತ್ತಿದೆ. ಯಾರು ಸರ್ಕಾರ ಬೀಳಿಸಿದರು ಎಂಬುದೂ ಗೊತ್ತಿದೆ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ವಾಗ್ದಾಳಿ ನಡೆಸಿದ್ದಾರೆ.
ಜೆಪಿ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈತ್ರಿ ಸರ್ಕಾರವನ್ನು ಯಾರು ಪತನಗೊಳಿಸಿದರು ಎಂಬುದು ಇಡಿ ರಾಜ್ಯಕ್ಕೆ ಗೊತ್ತಿದೆ. 16 ಶಾಸಕರನ್ನು ಯಾರು ಮುಂಬೈಗೆ ಕಳಿಸಿದರು ಎಂಬುದನ್ನು ಅಲ್ಲಿಗೆ ಹೋದ ಶಾಸಕರೇ ಹೇಳಿದ್ದಾರೆ. ಅವರೆಲ್ಲಾ ಮಾಧ್ಯಮಗಳಿಗೆ ಹೇಳಿಕೆಯನ್ನು ನೀಡಿದ್ದಾರೆ. ಕೆಲವರು ಮಾಧ್ಯಮಗಳ ಸಂದರ್ಶನದಲ್ಲೂ ಎಲ್ಲಾ ವಿಷಯ ಹೇಳಿದ್ದಾರೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಅವರ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಶಿರಾದಲ್ಲಿ ವಿಜಯೇಂದ್ರ ಚುನಾವಣಾ ತಂತ್ರ ವಿಚಾರಕ್ಕೆ ಪ್ರತಿಕ್ರಿಯಿಸಿದ ಗೌಡರು, ಅವರು ಚುನಾವಣೆ ನಡೆಸುವ ಬಗ್ಗೆ ನನಗೆ ಗೊತ್ತಿದೆ. ಅವರು ಯಾವ ರೀತಿ ಚುನಾವಣೆ ನಡೆಸುತ್ತಾರೆ ಎಂಬ ಬಗ್ಗೆ ವರದಿ ಕೂಡ ಇದೆ. ಪೊಲೀಸರ ಮೂಲಕ ದುಡ್ಡು ಹಂಚುತ್ತಿದ್ದಾರೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಈ ಬಗ್ಗೆ ಕೆಲವರು ದೂರು ಕೊಟ್ಟರೂ ಯಾವುದೇ ಕ್ರಮ ಜರುಗಿಸುತ್ತಿಲ್ಲ, ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಇದರ ಬಗ್ಗೆ ಮಾತನಾಡುತ್ತಾ ಕೂತರೆ ಯಾವುದೇ ಉಪಯೋಗವಿಲ್ಲ. ನೀವೇ ಹೇಳಿ ಈ ರಾಜ್ಯದಲ್ಲಿ ನಿಷ್ಪಕ್ಷಪಾತವಾದ ಚುನಾವಣೆ ನಡೆಸಲು ಸಾಧ್ಯವೆ ? ಯಾಕೆಂದರೆ ರಾಷ್ಟ್ರದಲ್ಲೇ ಆ ರೀತಿ ಆಗಿ ಹೋಗಿದೆ ಏನು ಮಾಡುವುದು? ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಡಿ.ಕೆ.ಶಿವಕುಮಾರ್ ಜಾತಿ ರಾಜಕಾರಣದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಜಾತಿ ರಾಜಕಾರಣ ಹೊಸದೇನಲ್ಲ ಬಿಡಿ. ನನ್ನನ್ನು 1989ರಲ್ಲಿ ಪಕ್ಷದಿಂದ ಹೊರಹಾಕಿದ್ದರು. ಆಗ ನನ್ನ ಜೊತೆಗೆ ಬಂದವರು ದತ್ತಾ, ಬಿ.ಎಲ್.ಶಂಕರ್, ಉಗ್ರಪ್ಪ, ಆಗ ಏನೇನು ಆಯ್ತು ಅದು ಎಲ್ಲರಿಗೂ ಗೊತ್ತಿದೆ. ಆಗಿನಿಂದಲೂ ಕೆಲವರು ಜಾತಿ ರಾಜಕಾರಣ ಮಾಡಿಕೊಂಡೆ ಬಂದಿದ್ದಾರೆ. ಜಾತಿರಾಜಕಾರಣದ ಬಗ್ಗೆ ಮಾತನಾಡುವುದಿಲ್ಲ. ಅಭಿವೃದ್ಧಿ ಬಗ್ಗೆ ಮಾತಾಡಲಿ, ಜಾತಿ ರಾಜಕಾರಣದ ಬಗ್ಗೆ ಮಾತಾನಾಡೋದು ಮೊದಲು ಬಿಡಲಿ ಎಂದು ಗುಡುಗಿದರು.