ಬೆಂಗಳೂರು: ಸಾದಿಕ್ ಲೇಔಟ್ ಬಳಿ ಆಶಾ ಕಾರ್ಯಕರ್ತೆ ಮೇಲಿನ ಹಲ್ಲೆ ಘಟನೆ ಮಾಸುವ ಮುನ್ನವೇ, ಲಗ್ಗೆರೆಯಲ್ಲಿ ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆ ಮಾಡಿರುವ ಆರೋಪ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿಯನ್ನ ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಜೆಡಿಎಸ್ ಮುಖಂಡ ಧನಂಜಯ್ ಬಂಧಿತ ಆರೋಪಿಯಾಗಿದ್ದು, ಲಗ್ಗೆರೆ ಬಳಿ ಇದೇ ಭಾನುವಾರ ಆಸ್ಪತ್ರೆಯಲ್ಲಿ ಊಟ ಹಂಚಲು ಧನಂಜಯ್ ತೆರಳಿದ್ದರು.
ಆಶಾಕಾರ್ಯಕರ್ತೆಯ ಮೇಲೆ ಹಲ್ಲೆ: ಜೆಡಿಎಸ್ ಮುಖಂಡ ವಶಕ್ಕೆ ಇದೇ ವೇಳೆ ಆಶಾ ಕಾರ್ಯಕರ್ತೆಯರ ಬಳಿ ಸ್ಯಾನಿಟೈಜರ್ ಅನ್ನು ಕಾರ್ಪೊರೇಟರ್ ಕೊಟ್ಟಿದ್ದಾರಾ?ಲೋಕಲ್ ಎಂಎಲ್ಎ ಕೊಟ್ಟಿದ್ದಾರಾ? ಎಂದು ಪ್ರಶ್ನೆ ಕೇಳಿ ಸುಮಾರು ಅರ್ಧಗಂಟೆ ವಿಡಿಯೋ ಮಾಡಿಕೊಂಡಿದ್ದ. ಈ ವೇಳೆ ಆಶಾಕಾರ್ಯಕರ್ತೆ ಶಶಿಕಲಾ ಕಾರ್ಪೊರೇಟರ್ ಕೊಟ್ಟಿಲ್ಲ, ಎಮ್ಎಲ್ಎ ಕೊಟ್ಟಿಲ್ಲ ಸರ್ಕಾರ ಕೊಟ್ಟಿದ್ದು ಎಂದು ಹೇಳಿದ್ದರು.
ಆದರೆ ಧನಂಜಯ್ ತನಗೆ ಬೇಕಾದ ರೀತಿಯಲ್ಲಿ ವಿಡಿಯೋ ಎಡಿಟ್ ಮಾಡಿಕೊಂಡು ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ ಎನ್ನಲಾಗ್ತಿದೆ.
ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ನೋಡಿದ ಆಶಾ ಕಾರ್ಯಕರ್ತೆಯ ಮನೆಯವರು ಇದೆಲ್ಲ ನಿಮಗೆ ಏನಕ್ಕೆ ಬೇಕು ಅಂತಾ ರೇಗಾಡಿದ್ದಾರೆ. ಹೀಗಾಗಿ ಶಶಿಕಲಾ ವಿಡಿಯೋ ಡಿಲಿಟ್ ಮಾಡುವಂತೆ ಲಗ್ಗೆರೆ ಜೆಡಿಎಸ್ ಕಚೇರಿಗೆ ಹೋಗಿದ್ದರು. ಈ ವೇಳೆ ವಿಡಿಯೋ ಡಿಲಿಟ್ ಮಾಡುತ್ತೀನಿ ಅಂತಾ ಹೇಳಿ ಕಳುಹಿಸಿದ್ದರೆನ್ನಲಾದ ಧನಂಜಯ್ ವಿಡಿಯೋವನ್ನು ಡಿಲಿಟ್ ಮಾಡದೆ ಮತ್ತಷ್ಟು ಶೇರ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಹೀಗಾಗಿ ಮತ್ತೊಮ್ಮೆ ವಿಚಾರಿಸಲು ಮನೆ ಬಳಿ ಹೋದಾಗ ಕಾರ್ಯಕರ್ತೆಗೆ ಅವಾಚ್ಯ ಶಬ್ಧ ಬಳಸಿ ನಿಂದಿಸಿದ್ದಾರೆ. ನಂತರ ಧನಂಜಯ್ ತನ್ನ ಹೆಂಡತಿಯನ್ನು ಕರೆಸಿ ಥಳಿಸುವಂತೆ ಪ್ರಚೋದನೆ ನೀಡಿದ್ದಾರೆ ಎಂದು ಧನಂಜಯ್ ವಿರುದ್ಧ ನಂದಿನಿ ಲೇಔಟ್ನಲ್ಲಿ ಶಶಿಕಲಾ ದೂರು ನೀಡಿದ್ದರು. ಶಶಿಕಲಾ ದೂರಿನ ಅನ್ವಯ ಪೊಲೀಸರು ಧನಂಜಯ್ ನನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.