ಕರ್ನಾಟಕ

karnataka

By ETV Bharat Karnataka Team

Published : Sep 22, 2023, 12:56 PM IST

ETV Bharat / state

ಸುಳ್ಳು ಪೊಳ್ಳುಗಳ ಸೌಧದ ಮೇಲೆ ನಿಂತಿರುವ ರಾಜ್ಯ ಕಾಂಗ್ರೆಸ್‌ಗೆ ಅಸತ್ಯವೇ ಅಷ್ಟೈಶ್ವರ್ಯ: ಜೆಡಿಎಸ್

ಕೆಟ್ಟ ದಾರಿಯಲ್ಲಿ ಅಧಿಕಾರ ಹಿಡಿಯುವುದು ಕಾಂಗ್ರೆಸ್ ಚಾಳಿ. ಶೆಟ್ಟರ್, ಸವದಿಯಂಥ ಬಿಜೆಪಿಗರನ್ನು ಬಲೆಬೀಸಿ ಬಿಗಿದಪ್ಪಿಕೊಂಡ ಹಸ್ತ ಪಕ್ಷಕ್ಕೆ, ಮೈಯ್ಯೆಲ್ಲಾ ಉರಿ ಹತ್ತಿಕೊಂಡಿದೆ- ಜೆಡಿಎಸ್.

Representative image
ಪ್ರಾತಿನಿಧಿಕ ಚಿತ್ರ

ಬೆಂಗಳೂರು: 'ಬಾಳೆಗೊಂದು ಏಟು, ಬಾಳಿಗೊಂದು ಮಾತು' ಎನ್ನುವ ಮಾತಿದೆ. ಸುಳ್ಳು ಪೊಳ್ಳುಗಳ ಸೌಧದ ಮೇಲೆ ನಿಂತಿರುವ ರಾಜ್ಯ ಕಾಂಗ್ರೆಸ್ ಪಕ್ಷಕ್ಕೆ ಅಸತ್ಯವೇ ಅಷ್ಟೈಶ್ವರ್ಯ. ಆತ್ಮವಂಚನೆಯೇ ಅಧಿಕಾರದ ಮೂಲ ಬಂಡವಾಳ. ಮೂರ್ಖರಿಗೆ ಎಷ್ಟು ಹೇಳಿದರೂ ಅಷ್ಟೇ. ಅರ್ಥವೇ ಆಗುವುದಿಲ್ಲ ಎಂದು ಜೆಡಿಎಸ್ ವ್ಯಂಗ್ಯವಾಡಿದೆ.

ಈ ಕುರಿತು ಸಾಮಾಜಿಕ ಮಾಧ್ಯಮದ ಎಕ್ಸ್‌ನಲ್ಲಿ ​(ಹಿಂದಿನ ಟ್ವಿಟ್ಟರ್​) ಪೋಸ್ಟ್​ ಮಾಡಿರುವ ಜೆಡಿಎಸ್​ "ಪಂಚರತ್ನ ಯಾತ್ರೆಯಲ್ಲಿ ಪಕ್ಷ ವಿಸರ್ಜನೆ ಮಾತು ಹೇಳಿದ್ದು ನಿಜ. ನನಗೆ ಬಹುಮತದ ಸರ್ಕಾರ ಕೊಟ್ಟರೆ 5 ವರ್ಷದಲ್ಲಿ ಪಂಚರತ್ನ ಯೋಜನೆಗಳನ್ನು ಜಾರಿ ಮಾಡುವೆ. ಮಾತು ತಪ್ಪಿದರೆ ಮತ್ತೆಂದೂ ಮತ ಕೇಳಲು ಬರುವುದಿಲ್ಲ, ಪಕ್ಷವನ್ನೇ ವಿಸರ್ಜಿಸುತ್ತೇನೆ" ಎಂದಿದೆ. ಈ ಹೇಳಿಕೆಯ ವಿಡಿಯೋ, ಸುದ್ದಿಗಳಿವೆ. ಗಮನಿಸಬಹುದು" ಎಂದಿದೆ.

ಫ್ರೀ ಫ್ರೀ ಎಂದು ಹೇಳಿ ಪಂಗನಾಮ: ಕಾಂಗ್ರೆಸ್ ಪಕ್ಷಕ್ಕೆ ಈ ಪರಿಯ ಅಜ್ಞಾನವೇ? ಪರಮಾಶ್ಚರ್ಯ. ವರ್ಷದ ಕೂಳಿನ ಪಂಚರತ್ನಗಳಿಗೂ, ಒಪ್ಪೊತ್ತಿನ ಹರುಷದ ನಕಲಿ ಗ್ಯಾರಂಟಿಗಳಿಗೂ ಹೋಲಿಕೆಯೇ?. ಎಲ್ಲರಿಗೂ ಫ್ರೀ ಫ್ರೀ ಎಂದು ಹೇಳಿ ಪಂಗನಾಮ ಹಾಕಿದ್ದು ಗೊತ್ತಿಲ್ಲದ ಸಂಗತಿಯೇ?. ಎಲ್ಲಾ ಕಾಲದಲ್ಲಿಯೂ ಟೋಪಿ ಹಾಕಬಹುದು ಎನ್ನುವ ಅಹಂಕಾರವೇ ಎಂದು ಪಕ್ಷ ಪ್ರಶ್ನಿಸಿದೆ.

ಜೆಡಿಎಸ್‌ ಬಿಜೆಪಿ ಬಾಗಿಲಿಗೆ ಪದೇ ಪದೆ ಹೋಗುತ್ತದೆಂದು ಹಲ್ಲು ಗಿಂಜುವ ಕಾಂಗ್ರೆಸ್ಸಿಗರಿಗೆ ಅದೇ ಕೇಂದ್ರದ ಬಿಜೆಪಿ ಜತೆ ಅಧಿಕಾರ ಅನುಭವಿಸಿದ ನಿತೀಶ್‌ ಕುಮಾರ್‌, ಮಮತಾ ಬ್ಯಾನರ್ಜಿ, ಸ್ಟಾಲಿನ್, ಉದ್ಧವ್​ ಠಾಕ್ರೆ ಮನೆಗಳ ಸುತ್ತ ಗಿರಕಿ ಹೊಡೆಯಲು ಸಂಕೋಚವಿಲ್ಲ. ಗಂಗೆಯಲ್ಲಿ ಮಿಂದರೆ ಕಾಗೆ ಕೋಗಿಲೆ ಆಗುತ್ತದೆಯೇ?, ಕಾಮಾಲೆ ಕಣ್ಣಿನ ಕಾಂಗ್ರೆಸ್ಸಿಗರೇ? ಎಂದು ಕಿಡಿಕಾರಿದೆ.

ಜಾಣ ರೋಗಕ್ಕೆ ಮದ್ದಿಲ್ಲ: ಪ್ರಜಾಪ್ರಭುತ್ವದಲ್ಲಿ ಮೈತ್ರಿ, ಹೊಂದಾಣಿಕೆ ಸಾಮಾನ್ಯ. ಆಯಾ ಸಂದರ್ಭಕ್ಕೆ ತಕ್ಕಂತೆ ಮೈತ್ರಿ ಆಗುತ್ತದೆ. ದೇಶ ವಿದೇಶದಲ್ಲೂ ಇದ್ದದ್ದೆ. ಆದರೆ, ನಮ್ಮ ಪಕ್ಷವನ್ನು ಬಿಜೆಪಿ ಬಿ ಟೀಂ ಎಂದು ಮೂದಲಿಸುವ ಕಾಂಗ್ರೆಸ್​ಗೆ, ಸ್ವತಃ ತಾನೇ ಪ್ರಾದೇಶಿಕ ಪಕ್ಷಗಳ ಬಾಲಂಗೋಚಿ ಎನ್ನುವುದು ಮರೆತಿದೆ. ದುರದೃಷ್ಟಕ್ಕೆ ಇಂಥ ಜಾಣ ರೋಗಕ್ಕೆ ಮದ್ದಿಲ್ಲ ಎಂದು ಜೆಡಿಎಸ್ ತಿರುಗೇಟು ನೀಡಿದೆ.

ಜೆಡಿಎಸ್-ಬಿಜೆಪಿ ಮೈತ್ರಿ?:ಜೆಡಿಎಸ್​​ - ಬಿಜೆಪಿ ಮೈತ್ರಿಗೆ ಸಂಬಂಧಿಸಿದಂತೆ ಈಗಾಗಲೇ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಬಿಜೆಪಿ ಹೈಕಮಾಂಡ್ ಜೊತೆ ಚರ್ಚಿಸಿ ಅಂತಿಮಗೊಳಿಸಿದ್ದಾರೆ ಎನ್ನಲಾಗಿದೆ. ಈಗ ಸೀಟು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರ ಜೊತೆ ಕುಮಾರಸ್ವಾಮಿ ಅವರು ಸಮಾಲೋಚನೆ ನಡೆಸಿದ್ದಾರೆ.

ಇದನ್ನೂ ಓದಿ:ದೆಹಲಿಗೆ ಪ್ರಯಾಣ ಬೆಳೆಸಿದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ.. ಜೆಡಿಎಸ್-ಬಿಜೆಪಿ ಮೈತ್ರಿಗೆ ಇಂದು ಅಂತಿಮ ಮುದ್ರೆ?

ABOUT THE AUTHOR

...view details