ಕರ್ನಾಟಕ

karnataka

ETV Bharat / state

ಕೇಂದ್ರ ಸಚಿವರಾಗುವ ಸುದ್ದಿ ಎಲ್ಲಿ ಹುಟ್ಟಿತು ಅನ್ನೋದು ನನಗೆ ಯಕ್ಷಪ್ರಶ್ನೆಯಾಗಿ ಉಳಿದಿದೆ: ವದಂತಿಗೆ ತೆರೆ ಎಳೆದ ಹೆಚ್​ಡಿಕೆ - ಕ್ಷೇತ್ರ ಹಂಚಿಕೆ

ಕೇಂದ್ರ ಸಚಿವನಾಗಬೇಕು ಎನ್ನುವ ಆಸಕ್ತಿಯೂ ನನ್ನಲ್ಲಿ ಇಲ್ಲ. ನನಗಿರುವ ಉದ್ದೇಶ ಒಂದೇ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 28ಕ್ಕೆ 28 ಲೋಕಸಭೆ ಕ್ಷೇತ್ರಗಳನ್ನು ಗೆಲ್ಲಬೇಕು. ಅದಷ್ಟೇ ನನ್ನ ಮುಂದಿರುವ ಅಜೆಂಡಾ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

HD Kumaraswamy spoke at a press conference.
ಹೆಚ್ ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

By ETV Bharat Karnataka Team

Published : Jan 18, 2024, 4:07 PM IST

ಬೆಂಗಳೂರು/ ನವದೆಹಲಿ: ತಾವು ಕೇಂದ್ರ ಸಚಿವರಾಗುವ ವದಂತಿಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ ಮಾಜಿ ಸಿಎಂ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಅವರು, ಯಾವ ಕಾರಣಕ್ಕೆ ಈ ಸುದ್ದಿ ಹುಟ್ಟಿಕೊಂಡಿತು ಎನ್ನುವುದು ಈಗಲೂ ನನಗೆ ಯಕ್ಷಪ್ರಶ್ನೆ ಆಗಿಯೇ ಉಳಿದಿದೆ ಎಂದು ತಿಳಿಸಿದರು.

ನವದೆಹಲಿಯಲ್ಲಿ ಇಂದು ಮಾಧ್ಯಮದವರೊಂದಿಎ ಮಾತನಾಡಿದ ಅವರು, ಕೇಂದ್ರದಲ್ಲಿ ನಾನು ಮಂತ್ರಿಯಾಗುತ್ತೇನೆ ಎನ್ನುವ ಸುದ್ದಿ ಯಾವ ಮೂಲಗಳಿಂದ ಅಷ್ಟು ಪ್ರಾಮುಖ್ಯತೆ ಪಡೆಯಿತೋ ಎನ್ನುವುದು ನನಗೆ ಗೊತ್ತಿಲ್ಲ. ಅದು ಎಲ್ಲಿಂದ ಬಂದಿತು, ಹುಟ್ಟಿತು ಎನ್ನುವುದು ನನಗೆ ತಿಳಿದಿಲ್ಲ. ಮಾಧ್ಯಮಗಳ ಮೂಲಕ ನನಗೆ ಆ ವಿಷಯ ಗೊತ್ತಾಯಿತು ಎಂದು ಹೇಳಿದರು.

ಚುನಾವಣೆ ಹತ್ತಿರದಲ್ಲಿ ಇದೆ. ಎರಡು ತಿಂಗಳಷ್ಟೇ ಸಮಯ ಉಳಿದಿದೆ. ಈಗ ನಾನು ಮಂತ್ರಿಯಾಗಿ ಮಾಡುವುದು ಏನಿದೆ? ಇಷ್ಟು ಅಲ್ಪ ಅವಧಿಯಲ್ಲಿ ರಾಜ್ಯಕ್ಕೆ, ರಾಷ್ಟ್ರಕ್ಕೆ ನಾನು ಏನು ಕೆಲಸ ಮಾಡಲು ಸಾಧ್ಯ? ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದ ಮೇಲೆ ಏನನ್ನೂ ಮಾಡಲು ಸಾಧ್ಯವಿಲ್ಲ, ಅದ್ದರಿಂದ ಉಪಯೋಗವೂ ಇಲ್ಲ. ಯಾವ ಕಾರಣಕ್ಕೆ ಆ ಸುದ್ದಿ ಹುಟ್ಟಿಕೊಂಡಿತು ಅನ್ನುವುದು ನನಗೆ ಅರ್ಥವಾಗುತ್ತಿಲ್ಲ ಎಂದರು.

ಕೇಂದ್ರ ಸಚಿವನಾಗಬೇಕು ಎನ್ನುವ ಆಸಕ್ತಿಯೂ ನನ್ನಲ್ಲಿ ಇಲ್ಲ. ನನಗಿರುವ ಉದ್ದೇಶ ಒಂದೇ, ಮುಂದಿನ ಲೋಕಸಭೆ ಚುನಾವಣೆಯಲ್ಲಿ 28ಕ್ಕೆ 28 ಲೋಕಸಭೆ ಕ್ಷೇತ್ರಗಳನ್ನು ಗೆಲ್ಲಬೇಕು. ಅದಷ್ಟೇ ನನ್ನ ಮುಂದಿರುವ ಅಜೆಂಡಾ ಎಂದು ಕುಮಾರಸ್ವಾಮಿ ಹೇಳಿದರು.

ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ನಂತರ ಕ್ಷೇತ್ರ ಹಂಚಿಕೆ ನಿರ್ಧಾರ: ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಮುಗಿದ ಮೇಲೆ ಕ್ಷೇತ್ರ ಹಂಚಿಕೆ, ಮತ್ತಿತರ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳ ರಾಜ್ಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಅಮಿತ್ ಶಾ ಹಾಗೂ ಜೆ ಪಿ ನಡ್ಡಾ ಒಪ್ಪಿಗೆ ಸೂಚಿಸಿದ್ದಾರೆ. ಕ್ಷೇತ್ರಗಳ ಹಂಚಿಕೆ ಬಗ್ಗೆ ಎರಡೂ ಪಕ್ಷಗಳಲ್ಲಿ ಅತ್ಯಂತ ಸೌಹಾರ್ದ ಮನೋಭಾವನೆ ಇದೆ. ಯಾವುದೇ ಗೊಂದಲ, ಪ್ರಶ್ನೆಗಳು ಇಲ್ಲ ಎಂದು ಹೆಚ್​ಡಿಕೆ ಸ್ಪಷ್ಟಪಡಿಸಿದರು.

ರಾಜ್ಯಕ್ಕೆ ಒಳ್ಳೆಯದಾಗಬೇಕು ಎನ್ನುವ ಏಕೈಕ ಉದ್ದೇಶದಿಂದ ಜೆಡಿಎಸ್ ಪಕ್ಷವು ಎನ್​​ಡಿಎ ಮೈತ್ರಿಕೂಟ ಸೇರಿದೆ. ಈಗಾಗಲೇ ರಾಜ್ಯದ ಸ್ಥಿತಿಗತಿ, ಕ್ಷೇತ್ರವಾರು ಪರಿಸ್ಥಿತಿಗಳ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಬಳಿ ಸಮೀಕ್ಷಾ ವರದಿಗಳಿವೆ. ಅದೇ ರೀತಿ ನಾವು ಇದೇ ರೀತಿಯ ವರದಿಗಳನ್ನು ಸಿದ್ಧ ಮಾಡಿದ್ದೇವೆ. ಎರಡೂ ಕಡೆಯ ಮಾಹಿತಿಗಳು, ವರದಿಗಳ ಬಗ್ಗೆಯೂ ಸುದೀರ್ಘ, ಮುಕ್ತವಾಗಿ ಚರ್ಚೆ ಮಾಡಿದ್ದೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ನಮ್ಮದು ದೊಡ್ಡ ಪಕ್ಷ, ಜೆಡಿಎಸ್ ಚಿಕ್ಕ ಪಕ್ಷ ಎನ್ನುವ ಭಾವನೆ ಅಮಿತ್ ಶಾ ಮತ್ತು ನಡ್ಡಾ ಅವರಲ್ಲಿ ಇಲ್ಲ. ಅತ್ಯಂತ ಪ್ರೀತಿ, ವಿಶ್ವಾಸ, ಸ್ನೇಹಪೂರ್ವಕವಾಗಿ ಅವರು ಮಾತುಕತೆ ನಡೆಸಿದರು. ದೇವೇಗೌಡರ ಮೇಲೆ ಅವರು ಅಪಾರ ಗೌರವ ಇರಿಸಿಕೊಂಡಿದ್ದಾರೆ. ನಮ್ಮ ಹಾಗೂ ನಮ್ಮ ಪಕ್ಷದ ನಡವಳಿಕೆಗಳನ್ನು ಬಿಜೆಪಿ ಕೇಂದ್ರದ ನಾಯಕರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅವರ ನಂಬಿಕೆ, ವಿಶ್ವಾಸಕ್ಕೆ ಧಕ್ಕೆ ಬಾರದ ರೀತಿಯಲ್ಲಿ ನಾವೂ ನಡೆದುಕೊಳ್ಳುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

28 ಲೋಕಸಭೆ ಕ್ಷೇತ್ರ ಗೆಲ್ಲುವುದು ನನ್ನ ಗುರಿ: ರಾಜ್ಯದಲ್ಲಿ ಮೈತ್ರಿಕೂಟವನ್ನು ಬಲಪಡಿಸಿ 28ಕ್ಕೆ 28 ಲೋಕಸಭೆ ಕ್ಷೇತ್ರಗಳನ್ನು ಗೆಲ್ಲುವುದೇ ನನ್ನ ಗುರಿ. ಬಿಜೆಪಿ ಗುರಿ ಇದೇ ಆಗಿದೆ. ಈ ನಿಟ್ಟಿನಲ್ಲಿ ಎನ್‌ಡಿಎ ಮೈತ್ರಿಕೂಟದಲ್ಲಿ ಬಿಜೆಪಿ-ಜೆಡಿಎಸ್‌ ಪಕ್ಷಗಳು ಒಟ್ಟಾಗಿ ಕೆಲಸ ಮಾಡುತ್ತವೆ. ಈ ನಿಟ್ಟಿನಲ್ಲಿ ನಮ್ಮ ಚರ್ಚೆ ನಡೆದಿದೆ ಎಂದು ಒತ್ತಿ ಹೇಳಿದರು.
ಪಿಎಂಗೆ ಸಿಎಂ ಬಹಿರಂಗ ಚರ್ಚೆಗೆ ಆಹ್ವಾನಿಸಿರುವದು ಉದ್ಧಟತನದ ಪರಮಾವಧಿ:ಎಚ್ಡಿಕೆ

ಪ್ರಧಾನಮಂತ್ರಿಗಳನ್ನು ಬಹಿರಂಗ ಚರ್ಚೆಗೆ ಕರೆದಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉದ್ಧಟತನದ ಪರಮಾವಧಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ನವದೆಹಲಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ನಡುವೆ ವಿಶ್ವಾಸದ ಕೊರತೆ ಎದ್ದು ಕಾಣುತ್ತಿದೆ. ರಾಜ್ಯ ಸರ್ಕಾರ ಪ್ರತಿಯೊಂದಕ್ಕೂ ಕೇಂದ್ರ ಮತ್ತು ಪ್ರಧಾನಮಂತ್ರಿಗಳನ್ನು ದೂರುವ ಪರಿಪಾಠ ಬೆಳೆಸಿಕೊಂಡಿದೆ. ಇದು ಸರಿಯಲ್ಲ. ಕಾಂಗ್ರೆಸ್ ಸರಕಾರವು ತನ್ನ ಆಡಳಿತ ವೈಫಲ್ಯ, ಗ್ಯಾರಂಟಿಗಳ ವಿಫಲತೆ, ಬರಗಾಲ, ರೈತರ ಸಂಕಷ್ಟದ ಬಗ್ಗೆ ಜನರ ಗಮನವನ್ನು ಬೇರೆಡೆಗೆ ಹೊರಳಿಸುವ ಉದ್ದೇಶದಿಂದ ನಿರಂತರವಾಗಿ ಮೋದಿ ಅವರ ಮೇಲೆ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದೆ ಎಂದು ಹೇಳಿದರು.

ರಾಜ್ಯ ಸರಕಾರದ ಈ ನಡವಳಿಕೆಯ ಬಗ್ಗೆ ಕನ್ನಡಿಗರು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಉತ್ತರ ಕೊಡುತ್ತಾರೆ ಎಂದ ಅವರು, ಜನರ ಸಮಸ್ಯೆಗಳಿಗೆ ಹೇಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಸರ್ಕಾರವೇ ಆಲೋಚನೆ ಮಾಡಬೇಕು. ಅದು ಬಿಟ್ಟು ಸುಖಾಸುಮ್ಮನೆ ಕೇಂದ್ರದ ಮೇಲೆ ಗೂಬೆ ಕೂರಿಸುವುದು ಸರಿ ಅಲ್ಲ ಎಂದರು.

ಮುಖ್ಯಮಂತ್ರಿಯೊಬ್ಬರು ಪ್ರಧಾನಮಂತ್ರಿಯನ್ನು ಬಹಿರಂಗ ಚರ್ಚೆಗೆ ಕರೆಯುವುದು ಉದ್ಧಟತನದ ಪರಮಾವಧಿ. ಇದು ಸರಿಯಾದ ನಡವಳಿಕೆ ಅಲ್ಲ. ಪ್ರಧಾನಿಗಳನ್ನು ಚರ್ಚೆಗೆ ಕರೆಯುವ ಮುನ್ನ ತಮ್ಮಿಂದ ಆಗಿರುವ ಲೋಪಗಳನ್ನು ಸರಿ ಪಡಿಸಿಕೊಳ್ಳಬೇಕಿದೆ. ಆ ಸೌಜನ್ಯವನ್ನು ಮುಖ್ಯಮಂತ್ರಿಗಳು ತೋರಿಸಬೇಕಿದೆ. ನಲವತ್ತು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್‌ ಸರ್ಕಾರ ರಾಜ್ಯದ ನೀರಾವರಿಗೆ ಏನಾದರೂ ಕೊಡುಗೆ ನೀಡಿದೆಯಾ? ಎಂದು ಸಿಎಂ ಸಿದ್ದರಾಮಯ್ಯ ಅವರ ಹೆಸರು ಹೇಳದೆ ಟಾಂಗ್‌ ನೀಡಿದರು.

ನಾನೂ ಎರಡು ಬಾರಿ ಕರ್ನಾಟಕದ ಮುಖ್ಯಮಂತ್ರಿ ಆಗಿದ್ದೆ. ಬಿಜೆಪಿ ಜತೆ ಸರ್ಕಾರ ಮಾಡಿದ್ದಾಗ ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿ ಇತ್ತು. ಕಾಂಗ್ರೆಸ್‌ ಜತೆ ಸರಕಾರ ಮಾಡಿದ್ದಾಗ ಬಿಜೆಪಿ ಅಧಿಕಾರದಲ್ಲಿ ಇತ್ತು. 2018 ರಲ್ಲಿ ನರೇಂದ್ರ ಮೋದಿ ಅವರೇ ಪ್ರಧಾನಿಗಳಾಗಿದ್ದರು. ಅವರ ಜತೆ ನಾನೆಂದೂ ಸಂಘರ್ಷಕ್ಕೆ ಹೋಗಲಿಲ್ಲ. ರಾಜ್ಯಕ್ಕೆ ಆಗಬೇಕಾದ ಎಲ್ಲ ಕೆಲಸಗಳು ಆದವು. ನಾನು ಕೇಳಿದಾಕ್ಷಣ ಪ್ರಧಾನಿಗಳ ಕಚೇರಿಯಿಂದ ಭೇಟಿಗೆ ಅವಕಾಶ ದೊರೆಯುತ್ತಿತ್ತು. ಇಲ್ಲಿ ನಾವು ಹೇಗೆ ನಡೆದುಕೊಳ್ಳುತ್ತೇವೆ ಎನ್ನುವುದು ಬಹಳ ಮುಖ್ಯವಾಗುತ್ತದೆ ಎಂದು ಸಿದ್ದರಾಮಯ್ಯ ವಿರುದ್ಧ ಪ್ರಹಾರ ನಡೆಸಿದರು.

ಲೋಕಸಭೆಗೆ ಸ್ಪರ್ಧೆಗೆ ಒತ್ತಡ ಇದೆ : ನಾನು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು ಎಂದು ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಒತ್ತಡ ಹೇರುತ್ತಿದ್ದಾರೆ. ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಮಂಡ್ಯದಿಂದ ಸ್ಪರ್ಧೆ ಮಾಡುವಂತೆ ಕಾರ್ಯಕರ್ತರ ಒತ್ತಡವಿದೆ. ನನ್ನ ಸ್ಪರ್ಧೆಯ ಬಗ್ಗೆ ಸೂಕ್ತ ನಿರ್ಣಯವನ್ನು ಎರಡು ಪಕ್ಷದ ನಾಯಕರು ಕೂತು ತೀರ್ಮಾನ ಮಾಡುತ್ತಾರೆ ಎಂದು ಅವರು ಪ್ರಶ್ನೆಯೊಂದಕ್ಕೆ ಕುಮಾರಸ್ವಾಮಿ ಉತ್ತರ ನೀಡಿದರು.

ಅಯೋಧ್ಯೆಗೆ ಹೋಗುತ್ತೇನೆ: ಶ್ರೀರಾಮದೇವರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ನಾನು ಕುಟುಂಬ ಸಮೇತ ಅಯೋಧ್ಯಗೆ ಹೋಗುತ್ತೇನೆ ಎಂದು ಎಂದು ಹೇಳಿದ ಕುಮಾರಸ್ವಾಮಿ ಅವರು; ಇಡೀ ದೇಶವೇ ಹಬ್ಬದ ಸಂಭ್ರಮದಲ್ಲಿದೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಕಾತುರನಾಗಿದ್ದೇನೆ. ದೇವೇಗೌಡರು ಕೂಡ ಭಾಗಿಯಾಗುತ್ತಾರೆ. ನಮಗೆಲ್ಲರಿಗೂ ಆಹ್ವಾನ ಬಂದಿದೆ ಎಂದರು.

ಇದನ್ನೂಓದಿ:'ಹೆಗಡೆಗೆ ಬಿಜೆಪಿ ರಾಜ್ಯಾಧ್ಯಕ್ಷರು ಟ್ರೀಟ್ಮೆಂಟ್ ಕೊಡಿಸಲಿ, ಇಲ್ಲಾಂದ್ರೆ ನಾವು ಕೊಡಿಸುತ್ತೇವೆ'

ABOUT THE AUTHOR

...view details