ಬೆಂಗಳೂರು : ಮುಂಬರುವ ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಈಗಿನಿಂದಲೇ ತಯಾರಿ ನಡೆಸುತ್ತಿರುವ ಜೆಡಿಎಸ್, ಒಂದು ತಿಂಗಳ ಕಾಲ ವಿನೂತನ ಕಾರ್ಯಕ್ರಮ ರೂಪಿಸಲು ಸಜ್ಜಾಗುತ್ತಿದೆ. ರಾಜ್ಯದಲ್ಲಿ ಜನತಾ ಜಲಧಾರೆ ಕಾರ್ಯಕ್ರಮ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಜೆಡಿಎಸ್ ಬೆಂಗಳೂರಿನಲ್ಲಿ 'ಜನತಾ ಮಿತ್ರ' ಎಂಬ ಕಾರ್ಯಕ್ರಮವನ್ನು ಒಂದು ತಿಂಗಳ ಕಾಲ ನಡೆಸಲು ತಯಾರಿ ನಡೆಸಿದೆ.
ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಜೂನ್ 22ರಂದು ಜನತಾ ಮಿತ್ರ ವಾಹನಗಳಿಗೆ ಚಾಲನೆ ನೀಡಲಾಗುತ್ತದೆ. ಬೆಂಗಳೂರಿನ ಎಲ್ಲಾ ವಾರ್ಡ್ಗಲ್ಲೂ 15 ವಾಹನಗಳು ಸಂಚರಿಸಲಿವೆ. ಜನರಿಗೆ ಯಾವ ರೀತಿ ಆಡಳಿತ ಬೇಕೆಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಲಿವೆ. ಅಲ್ಲದೆ, ಜೆಡಿಎಸ್ ಉದ್ದೇಶಿತ ಪಂಚರತ್ನ ಕಾರ್ಯಕ್ರಮಗಳ ಬಗ್ಗೆ ಜನಜಾಗೃತಿ ಮೂಡಿಸಲಾಗುತ್ತದೆ.
ಜೆಡಿಎಸ್ ಪಕ್ಷ ಹಾಗೂ ಹೆಚ್.ಡಿ.ಕುಮಾರಸ್ವಾಮಿ ಅವರು ಮತ್ತೆ ಏಕೆ ಮುಖ್ಯಮಂತ್ರಿ ಯಾಗಬೇಕೆಂಬುದರ ಕುರಿತು ಜನರಿಂದ ಅಭಿಪ್ರಾಯ ಸಂಗ್ರಹಿಸಲಾಗುವುದು. ಇದರ ಜೊತೆಗೆ ಬಿಬಿಎಂಪಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ಪಕ್ಷ ಸಂಘಟನೆಗೆ ಜೆಡಿಎಸ್ ಮುಂದಾಗಿದೆ. ಈಗಾಗಲೇ ಕಳೆದ ಒಂದು ವಾರದಿಂದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹಾಗೂ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಬಿಬಿಎಂಪಿ ಚುನಾವಣೆ ಹಾಗೂ ಪಕ್ಷ ಸಂಘಟನೆಗೆ ಸಂಬಂಧಿಸಿದಂತೆ ಸಭೆಗಳನ್ನು ಮಾಡುತ್ತಿದ್ದಾರೆ.