ಬೆಂಗಳೂರು: ನಾಳೆಯಿಂದ ಜನತಾಮಿತ್ರ ಕಾರ್ಯಕ್ರಮ ರಾಜಧಾನಿಯಲ್ಲಿ ಆರಂಭವಾಗಲಿದೆ. ಜನತಾಮಿತ್ರ ಕಾರ್ಯಕ್ರಮಕ್ಕಾಗಿ 15 ವಿಶೇಷ ವಾಹನಗಳು ಸಿದ್ಧವಾಗಿವೆ. ಇಡೀ ನಗರದ 28 ವಿಧಾನಸಭೆ ಕ್ಷೇತ್ರಗಳಲ್ಲಿ, ಪ್ರತಿಯೊಂದು ವಾರ್ಡ್ಗಳಿಗೂ ತೆರಳಲಿರುವ ಈ ವಾಹನಗಳಿಗೆ ಶುಕ್ರವಾರ ಜೆಪಿ ಭವನದಲ್ಲಿ ಹಸಿರು ನಿಶಾನೆ ತೋರಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.
ಪಕ್ಷಗಳ ಎಲ್ಲ ಮುಖಂಡರು ಈ ವಾಹನಗಳ ಜತೆ ಹೋಗಬೇಕು. ಪಕ್ಷದ ಮುಖಂಡರೆಲ್ಲ ಪ್ರತ್ಯೇಕ ತಂಡಗಳಾಗಿ ಬೇರ್ಪಟ್ಟು ಸಂಚರಿಸಬೇಕು. ಎಲ್ಲ ವಾರ್ಡ್ಗಳಲ್ಲಿಯೂ ಸಭೆಗಳನ್ನು ನಡೆಸಬೇಕು. ಅದಕ್ಕೆ ಅಗತ್ಯವಾದ ಎಲ್ಲ ಸೂಚನೆಗಳನ್ನು ನೀಡಲಾಗಿದೆ. ಜನತಾ ಮಿತ್ರ ವಾಹನವನ್ನು ವಿಶೇಷವಾಗಿ ವಿನ್ಯಾಸ ಮಾಡಲಾಗಿದೆ. ಜನರು ತಮ್ಮ ನಿರೀಕ್ಷೆಯ ಸರ್ಕಾರ ಹೇಗಿರಬೇಕು ಎಂಬ ಬಗ್ಗೆ ಸಲಹೆ, ಅಭಿಪ್ರಾಯವನ್ನು ಕೊಡಬಹುದು.
ಜನತಾ ಮಿತ್ರ ಕಾರ್ಯಕ್ರಮವನ್ನು ನಗರದ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿ ಮನೆ ಮನೆಗೂ ತಲುಪಿಸಬೇಕು. ಈ ನಿಟ್ಟಿನಲ್ಲಿ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಬೇಕು. ಈಗಾಗಲೇ 15 ಜನತಾ ಮಿತ್ರ ಹೆಸರಿನ ಎಲ್ ಇ ಡಿ ವಾಹನಗಳನ್ನು ಸಿದ್ಧಪಡಿಸಲಾಗಿದೆ. ಪ್ರತಿ ಒಂದು ವಾಹನ ತಲಾ ಎರಡು ಕ್ಷೇತ್ರಗಳಿಗೆ ತೆರಳಿದೆ. ಅಷ್ಟೂ ವಾಹನಗಳಿಗೆ ಶಾಸಕರು ಅಥವಾ ಹಿರಿಯ ಮುಖಂಡರ ನೇತೃತ್ವದಲ್ಲಿ ಉಸ್ತುವಾರಿ ತಂಡಗಳನ್ನು ರಚನೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.