ಬೆಂಗಳೂರು:ಕಳೆದ ತಿಂಗಳು 16ರಂದು ಹನುಮ ಜಯಂತಿ ದಿನ ಆರಂಭವಾದ ಜೆಡಿಎಸ್ ಜನತಾ ಜಲಧಾರೆ ಕಾರ್ಯಕ್ರಮ ರಾಜ್ಯಾದ್ಯಂತ ಯಸ್ವಿಯಾಗಿ ನಡೆದಿದ್ದು, ಇದೇ ಮೇ 13ರಂದು ಬೆಂಗಳೂರಿನ ನೆಲಮಂಗಲ ಟೋಲ್ ಪ್ಲಾಜಾ ಬಳಿ ಬೃಹತ್ ಜನತಾ ಜಲಧಾರೆ ಸಮಾವೇಶ ನಡೆಯಲಿದೆ.
ಜಲಧಾರೆ ಕಾರ್ಯಕ್ರಮವು ಈ ಸಮಾವೇಶದ ಮೂಲಕ ಸಮಾಪ್ತಿಯಾಗಲಿದ್ದು, ಆ ಬೃಹತ್ ಸಮಾವೇಶದ ಸಿದ್ಧತೆ ಮತ್ತು ರೂಪುರೇಷೆಗಳ ಬಗ್ಗೆ ಶುಕ್ರವಾರ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ವಿಸ್ತೃತವಾಗಿ ಚರ್ಚೆ ನಡೆಸಲಾಯಿತು.
ಸಭೆಯ ನಂತರ ಮಾಹಿತಿ ನೀಡಿದ ಕೋರ್ ಕಮಿಟಿ ಅಧ್ಯಕ್ಷ ಬಂಡೆಪ್ಪ ಕಾಶೆಂಪೂರ್, ರಾಜ್ಯದ 184 ವಿಧಾನಸಭೆ ಕ್ಷೇತ್ರಗಳಲ್ಲಿ ಜಲಧಾರೆಯ 15 ಗಂಗಾ ರಥಗಳು ಯಶಸ್ವಿಯಾಗಿ ಸಂಚರಿಸುತ್ತಿವೆ. ಇವುಗಳ ಮೂಲಕ ರಾಜ್ಯದ ಎಲ್ಲ ಜೀವ ನದಿಗಳಿಂದ ಸಂಗ್ರಹ ಮಾಡಲಾಗಿರುವ ಪುಣ್ಯಜಲವನ್ನು ಒಂದು ಬೃಹತ್ ಕಲಶಕ್ಕೆ ತುಂಬಿಸಿ ಸಮಾವೇಶದಲ್ಲಿ ಪೂಜೆ ನೆರವೇರಿಸಲಾಗುವುದು. ಈ ಸಮಾವೇಶದಲ್ಲಿ 5 ಲಕ್ಷಕ್ಕಿಂತ ಹೆಚ್ಚು ಜನ ಸೇರಲಿದ್ದಾರೆ ಎಂದು ಹೇಳಿದರು.