ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಜೆಡಿಎಸ್ ನಿಂದ 6 ರಿಂದ 8 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದ್ದು, ಹಾಸನದಿಂದ ಮಾಜಿ ಸಚಿವ ಹೆಚ್.ಡಿ.ರೇವಣ್ಣ (Former Minister H.D. Ravenna ) ಅವರ ಪುತ್ರ ಡಾ.ಸೂರಜ್ ರೇವಣ್ಣ ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ. ಉಳಿದಂತೆ ಮಂಡ್ಯದಿಂದ ಹಾಲಿ ವಿಧಾನ ಪರಿಷತ್ ಸದಸ್ಯ ಅಪ್ಪಾಜಿಗೌಡ, ತುಮಕೂರಿಗೆ ಅನಿಲ್ ಕುಮಾರ್, ಬೆಂಗಳೂರು ಗ್ರಾಮಾಂತರದಿಂದ ಹಾಲಿ ಸದಸ್ಯ ರಮೇಶ್ ಗೌಡ, ಕೋಲಾರಕ್ಕೆ ರಾಮು, ಮೈಸೂರಿನಿಂದ ಮಂಜೇಗೌಡ ಹೆಸರುಗಳನ್ನು ಬಹುತೇಕ ಅಂತಿಮಗೊಳಿಸಲಾಗಿದೆ.
ಇನ್ನೂ ಎರಡು ಕ್ಷೇತ್ರಗಳೂ ಸೇರಿದಂತೆ ಅಭ್ಯರ್ಥಿಗಳ ಪಟ್ಟಿಯನ್ನು ಜೆಡಿಎಸ್ ಬಿಡುಗಡೆ ಮಾಡಿಲ್ಲ. ಹಾಗೆಯೇ ಕೊನೆ ಕ್ಷಣದಲ್ಲಿ ಹೆಸರುಗಳು ಬದಲಾಗುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಪಟ್ಟಿ ಬಿಡುಗಡೆ ಮಾಡದೆ ಅಭ್ಯರ್ಥಿಗಳಿಗೆ ನೇರವಾಗಿ ಬಿ ಫಾರಂ ಕೊಡುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ. ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆಯ ದಿನವಾಗಿದೆ. ಹಾಲಿ ಸದಸ್ಯ ಅಪ್ಪಾಜಿಗೌಡ (Appajigouda ) ಅವರಿಗೆ ಮಂಡ್ಯ ಕ್ಷೇತ್ರದಿಂದ ಟಿಕೆಟ್ ನೀಡಲಾಗುತ್ತಿದೆ. ಬೆಂಗಳೂರು ಗ್ರಾಮಾಂತರದಿಂದ ರಮೇಶ್ ಗೌಡ ಮತ್ತು ತುಮಕೂರು ಕ್ಷೇತ್ರದಿಂದ ಅನಿಲ್ ಕುಮಾರ್ (Anil Kumar )ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಈ ಮೂವರು ನಾಳೆ ನಾಮಪತ್ರ ಸಲ್ಲಿಕೆ ಮಾಡುವುದು ಬಹುತೇಕ ಖಚಿತ ಎಂದು ಹೇಳಲಾಗಿದೆ. ರಮೇಶ್‌ಗೌಡ ಈಗಾಗಲೇ ವಿಧಾನ ಪರಿಷತ್‌ಗೆ ನಾಮನಿರ್ದೇಶಿತಗೊಂಡಿದ್ದಾರೆ. ಈಗ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಣಕ್ಕಿಳಿಯುವ ಆಕಾಂಕ್ಷಿಯಾಗಿದ್ದಾರೆ.
ಹೆಚ್.ಡಿ.ಕುಮಾರಸ್ವಾಮಿ (H. D. Kumaraswamy ) ಅವರು ನಾಳೆ ಬೆಳಗ್ಗೆ ಹೆಸರನ್ನು ಪ್ರಕಟಿಸಿದ ಬಳಿಕ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡುವ ಸಾಧ್ಯತೆಯೂ ಇದೆ.ಚುನಾವಣೆ ಘೋಷಣೆಯಾದ ಬಳಿಕ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಕ್ಷೇತ್ರಗಳ ಸ್ಥಳೀಯ ಮುಖಂಡರೊಂದಿಗೆ ಸುಧೀರ್ಘ ಚರ್ಚೆ ನಡೆಸಿದರೂ ಕೊನೆಯ ದಿನದವರೆಗೂ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡುವಲ್ಲಿ ಜೆಡಿಎಸ್ ತೀವ್ರ ಕಸರತ್ತು ನಡೆಸಿದೆ.