ಬೆಂಗಳೂರು : ರಾಜ್ಯ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾದ ಇಂದು 13 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದ ಜೆಡಿಎಸ್, 224 ಕ್ಷೇತ್ರಗಳ ಪೈಕಿ 211 ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಏಳು ಕ್ಷೇತ್ರದಲ್ಲಿ ಇತರರಿಗೆ ಬಾಹ್ಯ ಬೆಂಬಲ ನೀಡಿದೆ. ಆಡಳಿತಾರೂಢ ಬಿಜೆಪಿ ತೊರೆದು ಜೆಡಿಎಸ್‌ಗೆ ಸೇರ್ಪಡೆಯಾಗಿರುವ ಎ.ಬಿ.ಮಾಲಕರೆಡ್ಡಿ, ಕಾಂಗ್ರೆಸ್‌ನಲ್ಲಿ ಟಿಕೆಟ್ ಸಿಗದೆ ಬೇಸರಗೊಂಡು ಪಕ್ಷಕ್ಕೆ ಬಂದಿರುವ ಮೋಹಿನುದ್ದೀನ್ ಬಾವಗೆ ಟಿಕೆಟ್ ನೀಡಲಾಗಿದೆ. ಬಿಡುಗಡೆಯಾಗಿರುವ ನಾಲ್ಕನೇ ಪಟ್ಟಿಯ ಅಭ್ಯರ್ಥಿಗಳು ಬಿ ಫಾರಂ ಪಡೆದು ನಾಮಪತ್ರ ಸಲ್ಲಿಸಿದ್ದಾರೆ.
ಜಾತಿವಾರು ಜೆಡಿಎಸ್ ಟಿಕೆಟ್ ಹಂಚಿಕೆ : ಟಿಕೆಟ್ ಹಂಚಿಕೆಯಲ್ಲಿ ಜಾತಿವಾರು ಗಮನಿಸಿದರೆ ಒಕ್ಕಲಿಗ ಸಮುದಾಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ಹಂಚಿಕೆ ಮಾಡಲಾಗಿದೆ. ನಂತರ ಲಿಂಗಾಯತರಿಗೆ ಟಿಕೆಟ್ ನೀಡಿದೆ. ಒಕ್ಕಲಿಗ ಸಮುದಾಯಕ್ಕೆ - 55, ಲಿಂಗಾಯತರಿಗೆ - 41, ಪರಿಶಿಷ್ಟ ಜಾತಿಗೆ - 33, ಪರಿಶಿಷ್ಟ ಪಂಗಡಕ್ಕೆ - 13, ಮುಸ್ಲಿಮರಿಗೆ - 23 ಮಂದಿಗೆ ಟಿಕೆಟ್ ನೀಡಲಾಗಿದ್ದು, ಹಿಂದುಳಿದ ವರ್ಗದ - 31 ಮಂದಿಗೆ ಅವಕಾಶ ಕಲ್ಪಿಸಲಾಗಿದೆ.
ಈ ಪೈಕಿ ಕುರುಬ - 10, ಈಡಿಗ - 7, ಉಪ್ಪಾರ, ಬಲಿಜಿಗ ಸಮುದಾಯದಲ್ಲಿ ತಲಾ ಇಬ್ಬರಿಗೆ, ನೇಕಾರ, ಮಡಿವಾಳ, ಕೋಲಿ, ಕ್ಷತಿಯ, ನಾಯ್ಡು, ತಿಗಳ, ಕುಂಬಾರ, ಅಕ್ಕಸಾಲಿಗ, ನಾಯ್ಡು, ಕೊಂಕಣಿ ಸಮುದಾಯದಲ್ಲಿ ತಲಾ ಒಬ್ಬರಿಗೆ ಟಿಕೆಟ್ ನೀಡಲಾಗಿದೆ. ಇತರೆ ವರ್ಗದಲ್ಲಿ 15 ಮಂದಿಗೆ ಟಿಕೆಟ್ ಹಂಚಿಕೆ ಮಾಡಲಾಗಿದ್ದು, ಮರಾಠ - 5, ಬಂಟ್ಸ್ - 4, ಜೈನ್, ಬ್ರಾಹ್ಮಣ, ಜಿಎಸ್‌ಬಿ, ರೆಡ್ಡಿ, ಕೊಡವ, ಕ್ರಿಶ್ಚಿಯನ್ ಸಮುದಾಯದ ತಲಾ ಒಬ್ಬರಿಗೆ ಟಿಕೆಟ್ ನೀಡಲಾಗಿದೆ. ಒಟ್ಟು 13 ಮಂದಿ ಮಹಿಳೆಯರಿಗೆ ಜೆಡಿಎಸ್ ಟಿಕೆಟ್ ನೀಡಿದೆ.