ಬೆಂಗಳೂರು: ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಇನ್ನೂ ಹತ್ತು ತಿಂಗಳು ಬಾಕಿ ಇರುವಾಗಲೇ ರಾಜ್ಯ ರಾಜಕಾರಣ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಮುಂಬರುವ ಚುನಾವಣೆಯಲ್ಲಿ ಬಹುಮತದೊಂದಿಗೆ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕೆಂದು ಬಿಜೆಪಿ ಮುಂದಾಗಿದ್ದರೆ, ಕಾಂಗ್ರೆಸ್ ಸಹ ರಾಜ್ಯದ ಗದ್ದುಗೆಗೆ ಏರಲು ತಂತ್ರಗಾರಿಕೆ ಮಾಡುತ್ತಿದೆ. ನಾವೇನು ಕಡಿಮೆ ಎಂಬಂತೆ ಜೆಡಿಎಸ್ ಕೂಡ ಬಿಜೆಪಿ ಮತ್ತು ಕಾಂಗ್ರೆಸ್ಗೆ ಪರ್ಯಾಯ ಶಕ್ತಿಯಾಗಿ ಹೊರಹೊಮ್ಮಲು ಹವಣಿಸುತ್ತಿದೆ.
ಆಂತರಿಕ ಕಚ್ಚಾಟ: ದಕ್ಷಿಣ ಭಾರತದ ರಾಜ್ಯಗಳ ಅಧಿಕಾರಕ್ಕಾಗಿ ದಂಡಯಾತ್ರೆ ಶುರು ಮಾಡಿರುವ ಬಿಜೆಪಿಗೆ ಕೆಲವು ಸೂಕ್ಷ್ಮ ಪರಿಸ್ಥಿತಿಗಳು ಎದುರಾಗಿವೆ. ರಾಜ್ಯದ ರಾಜಕೀಯ ಸೂಕ್ಷ್ಮ ಪರಿಸ್ಥಿತಿಯನ್ನು ತಹಬದಿಗೆ ತರಲು ಬಿಜೆಪಿಯ ಕೇಂದ್ರ ಹಾಗೂ ರಾಜ್ಯ ನಾಯಕರು ಪ್ರಯತ್ನಿಸುತ್ತಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಆಂತರಿಕ ಕಚ್ಚಾಟ ಮುಂದುವರಿದಿದೆ. ಈ ಸಮಯವನ್ನು ಜೆಡಿಎಸ್ ನಾಯಕ, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.
ಹೆಚ್ಡಿಕೆ ಮಾಸ್ಟರ್ ಪ್ಲಾನ್: 2023 ರ ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯ ಶಕ್ತಿಯಾಗಿ ಹೊರಹೊಮ್ಮಲು ಜೆಡಿಎಸ್ ಹವಣಿಸುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಮೂರು ಹತ್ಯೆಗಳ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮೂರು ದಿನಗಳ ಹಿಂದೆ ಕರಾವಳಿ ಪ್ರದೇಶಕ್ಕೆ ಭೇಟಿ ನೀಡಿದ್ದರು. ಅವಧಿಪೂರ್ವ ಚುನಾವಣೆ ಭವಿಷ್ಯ ನುಡಿದಿರುವ ಹೆಚ್ಡಿಕೆ, ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದಾರೆ.
ಶಾಂತಿ ಕದಡುವ ಕೆಲಸ:ಮೈಸೂರು, ಮಂಡ್ಯ ಹಾಗೂ ಕಲಬುರಗಿಗೆ ಇತ್ತೀಚೆಗೆ ಭೇಟಿ ನೀಡಿದ್ದರು. ಪಕ್ಷ ಸಂಘಟನೆ ಮತ್ತು ಬಲವರ್ಧನೆಗಾಗಿ ಮುಖಂಡರಿಗೆ ಮಾರ್ಗದರ್ಶನ ಮಾಡಿ ಬಂದಿದ್ದಾರೆ. ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿ ನಾಯಕರು ಕೇವಲ ತಮ್ಮದೇ ಪಕ್ಷದ ಸಂತ್ರಸ್ತರ ಕುಟುಂಬವನ್ನು ಭೇಟಿ ಮಾಡಿದ್ದರು. ಆದರೆ, ಕುಮಾರಸ್ವಾಮಿ ಅವರು ಎಲ್ಲಾ ಸಂತ್ರಸ್ತರ ಕುಟುಂಬಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿ, ಆರ್ಥಿಕ ನೆರವು ನೀಡಿದ್ದಾರೆ. ಎರಡೂ ರಾಷ್ಟ್ರೀಯ ಪಕ್ಷಗಳು ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ದಕ್ಷಿಣ ಕನ್ನಡದಲ್ಲಿ ಶಾಂತಿ ಕದಡುವ ಕೆಲಸದಲ್ಲಿ ನಿರತವಾಗಿವೆ ಎಂದು ಆರೋಪಿಸಿದ್ದಾರೆ.
ಇಲ್ಲಿನ ಅಶಾಂತಿಗೆ ರಾಷ್ಟ್ರೀಯ ಪಕ್ಷಗಳನ್ನು ಹೊಣೆ ಮಾಡುವುದರಿಂದ ನಮ್ಮ ಪಕ್ಷಕ್ಕೆ ಲಾಭವಾಗಲಿದೆ. ಕುಮಾರಸ್ವಾಮಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಒಟ್ಟು 224 ಸ್ಥಾನಗಳ ಪೈಕಿ 123 ಸ್ಥಾನಗಳ ಮೇಲೆ ಮಾತ್ರ ಗಮನ ಹರಿಸುತ್ತಿದ್ದರೂ, ಪಕ್ಷವು ಹೆಚ್ಚಿನ ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಇದು ಇತರ ಪಕ್ಷದ ಸ್ಪರ್ಧಿಗಳ, ವಿಶೇಷವಾಗಿ ಕಾಂಗ್ರೆಸ್‌ನ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ ಎನ್ನುತ್ತಾರೆ ಜೆಡಿಎಸ್ನ ಹಿರಿಯ ನಾಯಕರೊಬ್ಬರು.