ಬೆಂಗಳೂರು: ರಾಜರಾಜೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಆಟಕ್ಕುಂಟು ಲೆಕ್ಕಕಿಲ್ಲ. ನಾವು ಅವರ ಬಗ್ಗೆ ಮಾತನಾಡಲ್ಲ. ಇಲ್ಲಿ ನೇರ ಫೈಟ್ ಇರೋದು ಕಾಂಗ್ರೆಸ್ - ಬಿಜೆಪಿಗೆ ಮಾತ್ರ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ರಾಜರಾಜೇಶ್ವರಿ ವಿಧಾನಸಭೆ ಕ್ಷೇತ್ರದ ಜೆ.ಪಿ.ಪಾರ್ಕ್ ವಾರ್ಡ್ನಲ್ಲಿ ಇಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ರೋಡ್ ಶೋ ನಡೆಸಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಪರ ಮತಯಾಚಿಸಿದರು. ಈ ವೇಳೆ, ಮಾತನಾಡಿದ ಸಿದ್ದರಾಮಯ್ಯ, ಮುನಿರತ್ನ ಅವರನ್ನು ಕತ್ತು ಹಿಡಿದು ನಾವು ಕಳುಹಿಸಿಲ್ಲ. ಮತದಾರರಿಗೆ ದ್ರೋಹ ಮಾಡಿ ಬಿಜೆಪಿಗೆ ಹೋಗಿದ್ದಾರೆ. ರಾಜಕೀಯವಾಗಿ ಬೆಳೆಸಿದ ಕಾಂಗ್ರೆಸ್ ಪಕ್ಷಕ್ಕೆ ಚೂರಿ ಹಾಕಿ ಹೋಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ ಮುನಿರತ್ನ ಬಿಜೆಪಿಗೆ ಸುಮ್ಮನೆ ಹೋಗಿಲ್ಲ. ಒಬ್ಬರಿಗೆ 25 ರಿಂದ 30 ಕೋಟಿ ಕೊಟ್ಟಿದ್ದಾರೆ ಎಂದು ಆರೋಪಿಸಿದರು.
ನಾನು ಸಿಎಂ ಆಗಿದ್ದಾಗ ಹಲವು ಯೋಜನೆ ತಂದಿದ್ದೆ. ನನ್ನ ಅವಧಿಯಲ್ಲಿ ಬಡ ಜನರಿಗೆ ಉಚಿತವಾಗಿ 7 ಕೆಜಿ ಅಕ್ಕಿ ನೀಡುತ್ತಿದ್ದೆ. ಬಿಜೆಪಿ ಸರ್ಕಾರ ನಾಲ್ಕು ಕೆಜಿ ಕೊಡುತ್ತಿದೆ. ಜನರ ತೆರಿಗೆ ದುಡ್ಡಿನಲ್ಲೇ ಯೋಜನೆ ರೂಪಿಸಿ ಅವರಿಗೆ ಸೌಲಭ್ಯ ಒದಗಿಸುವುದು. ಯಾರೂ ಕೂಡ ಅವರ ಮನೆಯಿಂದ ಹಣ ತಂದು ಜನರಿಗೆ ನೀಡೋದಿಲ್ಲ. ನಮ್ಮ ಪಕ್ಷ ಅಧಿಕಾರಕ್ಕೆ ಬಂದ್ರೆ ನಾವು 10 ಕೆಜಿ ಅಕ್ಕಿ ಕೊಡುತ್ತೇವೆ. 10 ಕೆಜಿ ಅಕ್ಕಿ ಬೇಕಾದ್ರೆ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿದರು.