ಕರ್ನಾಟಕ

karnataka

ETV Bharat / state

ಅಮಿತ್ ಶಾರಿಂದ ಮಂಡ್ಯ ಜನರಿಗೆ ಮಂಕುಬೂದಿ ಎರಚುವ ವಿಫಲ ಪ್ರಯತ್ನ: ಜೆಡಿಎಸ್ - ETv Bharat kannada news

ಮಂಡ್ಯದಲ್ಲಿಂದು ಭಾಷಣ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜೆಡಿಎಸ್‌ ಪಕ್ಷದ ವಿರುದ್ಧ ಟೀಕಾ ಸಮರ ನಡೆಸಿದ್ದರು. ಇದಕ್ಕೆ ಜೆಡಿಎಸ್‌ ಸರಣಿ ಟ್ವೀಟ್‌ಗಳ ಮೂಲಕ ಪ್ರತಿ ದಾಳಿ ನಡೆಸಿದೆ.

JDS
ಜೆಡಿಎಸ್

By

Published : Dec 30, 2022, 10:38 PM IST

ಬೆಂಗಳೂರು :ಕೇಂದ್ರದ ಗೌರವಾನ್ವಿತ ಗೃಹ ಮಂತ್ರಿ ಅಮಿತ್ ಶಾ ಅವರು ಮಂಡ್ಯ ಜನರಿಗೆ ಮಂಕುಬೂದಿ ಎರಚಲು ವಿಫಲ ಪ್ರಯತ್ನ ನಡೆಸಿದ್ದಾರೆ ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ. ಈ ಕುರಿತು ಸರಣಿ ಟ್ವೀಟ್ ಮಾಡಿದ್ದು, ಅವರ ಪಕ್ಷದ ಕೆಲ ನಾಯಕರು ಅಪಪ್ರಚಾರದ ಜಾಗಟೆಗೆ ಡ್ರಮ್ಮು ಬಾರಿಸುವ ಕೆಲಸ ಮಾಡಿದ್ದಾರೆ. ಆದರೆ, ಮಂಡ್ಯದವರನ್ನು ಮೋಸ ಮಾಡಲು ಆಗುವುದಿಲ್ಲ ಎಂದು ತಿಳಿಸಿದೆ.

ರಾಜ್ಯ ಬಿಜೆಪಿ ನಾಯಕರು, ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಮಂಡ್ಯದಲ್ಲಿ ಎಟಿಎಂ ಬಗ್ಗೆ ಮಾತನಾಡಿದ್ದಾರೆ. ಭೂತದ ಬಾಯಲ್ಲಿ ಭಗವದ್ಗೀತೆ ಎಂದರೆ ಹೀಗೆಯೇ. ಸುಳ್ಳು ಹೇಳುವುದಕ್ಕೆ ಸಂಕೋಚ ಬೇಡವೇ? ಕರ್ನಾಟಕ ಮಾತ್ರವಲ್ಲ, ಇಡೀ ಭಾರತವೇ ಭಾರತೀಯ ಜನತಾ ಪಕ್ಷದ ಎಟಿಎಂ ಆಗಿದೆ, ಇದು ಸುಳ್ಳಾ ಎಂದು ಪ್ರಶ್ನಿಸಿದೆ.

ಯಾರಿಗೆ ಯಾವುದು ಎಟಿಎಂ ಎನ್ನುವುದು ಕರ್ನಾಟಕಕ್ಕೆ ಗೊತ್ತು. 40% ಕಮೀಷನ್ ಯಾರ ಎಟಿಎಂಗೆ ಹೋಯಿತು? ಪಿಎಸ್​ಐ ಹಗರಣ ಯಾರ ಎಟಿಎಂ? ಕೋವಿಡ್ ಸಾವುಗಳ ಮೇಲೆ ದೋಚಿದ ಹಣ ಯಾವ ಹುಂಡಿಗೆ ಹೋಯಿತು? ಅಪರೇಷನ್ ಕಮಲಕ್ಕೆ ಯಾವ ಎಟಿಎಂನಿಂದ ಬಂತು?. ದೇವರಾಯನ ದುರ್ಗದ ಐಬಿಯಲ್ಲಿ ಗುತ್ತಿಗೆದಾರನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಾವಿಗೂ 40% ಕಾರಣ ಎಂಬ ಆರೋಪ ಕೇಳಿ ಬರುತ್ತಿದೆ. ಅಮಿತ್ ಶಾ ಸಾಹೇಬರು ಇದಕ್ಕೆ ಉತ್ತರ ಕೊಡುತ್ತಾರೆಯೇ? ಎಂದು ಜೆಡಿಎಸ್ ಕೇಳಿದೆ.

ಹೆಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರವನ್ನು ಕೆಡವಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಮಾಡಿದ್ದು ಎಂದರೆ ಕಮೀಷನ್ ವಿಕಾಸ. ಶಾಸಕರ ಖರೀದಿ ವಿಕಾಸ. ಬಿಜೆಪಿ ಎಂದರೆ ಎಟಿಎಂಗಳ ನ್ಯಾಷನಲ್ ಟೀಮ್. ಸತ್ಯ ಹೀಗಿದ್ದರೂ ಮಂಡ್ಯದಲ್ಲಿ ಬಂದು ಎಟಿಎಂ ಎಂದು ಟಮ್ ಟಮ್ ಹೊಡೆದರೆ ಯಾರು ನಂಬುತ್ತಾರೆ ಬಿಜೆಪಿ ನಾಯಕರೇ?. ಎಂದು ಬಿಜೆಪಿ ವಿರುದ್ದ ಜೆಡಿಎಸ್​ ಸಿಡಿದೆದ್ದಿದೆ.

ರಾಮ ಮಂದಿರ ಕಟ್ಟಿದ್ದೀರಿ ಎನ್ನುತ್ತೀರಿ. ಇದು ಬಿಜೆಪಿ ಸಾಧನೆಯೇ? ಇದಕ್ಕೆ ಭಾರತೀಯರೆಲ್ಲರ ಕಾಣಿಕೆ ಇಲ್ಲವೇ? ನೀವೊಬ್ಬರೇ ಕ್ರೆಡಿಟ್ ಹೊಡೆದುಕೊಳ್ಳಬೇಡಿ. ಒಂದೆಡೆ ದೆವಾಲಯಗಳನ್ನು ಉದ್ಧಾರ ಮಾಡುತ್ತೇವೆ ಎನ್ನುತ್ತೀರಿ, ಇನ್ನೊಂದೆಡೆ ಅದೇ ದೇವರನ್ನು ನಾಚಿಕೆ ಇಲ್ಲದೆ ರಾಜಕೀಯಕ್ಕೆ ಬಳಸಿಕೊಳ್ಳುತ್ತೀರಿ ಎಂದು ಟೀಕಿಸಿದೆ.

ಪಂಚರತ್ನ ರಥಯಾತ್ರೆಯ ಯಶಸ್ಸು ನಿಮ್ಮ ಕಣ್ಣಿಗೂ ಬಿದ್ದಿರಬಹುದು. ಇಲ್ಲವೇ ಯಾರಾದರೂ ಭಟ್ಟಂಗಿಗಳು ನಿಮ್ಮ ಕಿವಿ ಊದಿರಬಹುದು. ಅದಕ್ಕೆ ಮಂಡ್ಯಕ್ಕೆ ಬಂದು ಮಕ್ಮಲ್ ಟೋಪಿ ಹಾಕಲು ವ್ಯರ್ಥ ಪ್ರಯತ್ನ ಮಾಡುತ್ತಿದ್ದೀರಿ. ನೀವು ಮಂಡ್ಯದಲ್ಲಿ ವಿಧಾನಸಭೆ ಚುನಾವಣೆ ವೇಳೆ ಮುಗ್ಗರಿಸುತ್ತೀರಿ. ಅಮಿತ್ ಶಾ ಅವರೇ ಅತಿಯಾದ ಅಮಿತೋತ್ಸಾಹ ಒಳ್ಳೆಯದಲ್ಲ ಎಂದು ಜೆಡಿಎಸ್​ ವ್ಯಂಗ್ಯವಾಡಿದೆ.

ಇದನ್ನೂ ಓದಿ:ಮಂಡ್ಯ: ಮೆಗಾ ಹಾಲಿನ ಡೈರಿ ಉದ್ಘಾಟಿಸಿದ ಅಮಿತ್​ ಶಾ

ABOUT THE AUTHOR

...view details