ಬೆಂಗಳೂರು: ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡರು ಕೋರ್ ಕಮಿಟಿ ಸಭೆ ಕರೆದಿದ್ದಾರೆ. ಕೋರ್ ಕಮಿಟಿ ಅಧ್ಯಕ್ಷರು ಸಭೆಗೆ ಬರಲು ಹೇಳಿದ್ದಾರೆ, ಅದಕ್ಕೆ ಬಂದಿದ್ದೇನೆ. ಸಭೆಯ ಬಳಿಕ ದೇವೇಗೌಡರು ಮಾಹಿತಿಯನ್ನು ಹಂಚಿಕೊಳ್ಳುತ್ತಾರೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಸಭೆಗೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರ ಮೇಲೆ ಕ್ರಮ ಆಗುತ್ತಾ, ಇಲ್ಲವೋ ಗೊತ್ತಿಲ್ಲ. ಸಭೆಯ ಅಜೆಂಡಾ ಅಲ್ಲಿ ಭಾಗಿಯಾದ ಬಳಿಕ ಗೊತ್ತಾಗಲಿದೆ ಎಂದರು. ವಿಧಾನಸೌಧದಲ್ಲಿ ಅರಿಶಿನ, ಕುಂಕುಮ ಬಳಕೆಗೆ ನಿರ್ಬಂಧ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್ ಡಿಕೆ, ಹಿಂದೂ ಸಂಸ್ಕೃತಿಯಲ್ಲಿ ಅರಿಶಿನ ಕುಂಕುಮ ಹಾಕಬಾರದು ಅಂತ ಇದೆಯಾ?.
ಈ ಸರ್ಕಾರ ಬ್ಯಾಗ್ರೌಂಡ್ ಏನು ಎಂದು ಆದೇಶ ನೋಡಿದರೆ ಗೊತ್ತಾಗುತ್ತದೆ. ಸರ್ಕಾರ ಯಾವ ದಿಕ್ಕಿನಲ್ಲಿ ಇದೆ. ಸರ್ಕಾರದಿಂದ ನಾಡಿಗೆ ಯಾವುದೇ ಶುಭದಿನ ಕಾಣೋದಿಲ್ಲ ಎಂಬುದು ಇವರ ನಿರ್ಧಾರದಿಂದ ಗೊತ್ತಾಗಲಿದೆ ಎಂದು ಟೀಕಿಸಿದರು.
ಆಪರೇಷನ್ ಕಮಲ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನೇ ಎರಡು ಬಾರಿ ಆಪರೇಷನ್ ಮಾಡಿಸಿಕೊಂಡಿದ್ದೇನೆ. ಅದರ ಅನುಭವ ನನಗೆ ಇದೆ ಎಂದರು. ಪದೇ ಪದೇ ನನ್ನ ಟಾರ್ಗೆಟ್ ಮಾಡ್ತಾ ಇದ್ದಾರೆ ಅನ್ನೋ ಡಿಕೆಶಿ ಹೇಳಿಕೆ ಪ್ರತಿಕ್ರಿಯಿಸಿ, ನಾನು ಅದರ ಬಗ್ಗೆ ಮಾತಾಡಲ್ಲ. ಮುಂದೆ ನೋಡೋಣ ಏನಾಗುತ್ತದೆ ಎಂದರು. ದೇಶದಲ್ಲಿ ಹೇಗಿದೆ ಅಂದರೆ ದರೋಡೆ ಮಾಡುವವನಿಗೂ ಸಿಂಪತಿ ವ್ಯಕ್ತವಾಗುತ್ತದೆ. ಏನೂ ಮಾಡದೇ ಇರುವವರು ಸಮಸ್ಯೆ ಅನುಭವಿಸ್ತಾರೆ. ಅನುಕಂಪವನ್ನು ಯಾರು ಹೇಗೆ ಬೇಕಾದರೂ ಬಳಸಿಕೊಳ್ಳೋ ವಾತಾವರಣ ಇದೆ. ಅದಕ್ಕೆ ನಾನ್ಯಾಕೆ ಬಲಿಯಾಗಬೇಕು ಎಂದು ಹೇಳಿದರು.