ಕರ್ನಾಟಕ

karnataka

ETV Bharat / state

ಜೆಡಿಎಸ್‌ ಕೋರ್‌ ಕಮಿಟಿ ಸಭೆ: ಬಿಬಿಎಂಪಿ ಚುನಾವಣೆ ಸೇರಿ ಮಹತ್ವದ ವಿಷಯಗಳ ಚರ್ಚೆ - ಜೆಡಿಎಸ್‌ ಕೋರ್‌ ಕಮಿಟಿ ಸಭೆ

ಕೋರ್ ಕಮಿಟಿ ಅಧ್ಯಕ್ಷ ಬಂಡೆಪ್ಪ ಕಾಶೆಂಪೂರ್ ಹಾಗೂ ಕೋರ್ ಕಮಿಟಿ ವಿಶೇಷ ಆಹ್ವಾನಿತರೂ ಆಗಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ನೇತೃತ್ವದಲ್ಲಿ ಜೆಡಿಎಸ್​​ ನಾಯಕರು ಕೋರ್ ಕಮಿಟಿ ಸಭೆ ನಡೆಸಿದರು.

JDS Core committee meeting at Bangalore
ಜೆಡಿಎಸ್‌ ಕೋರ್‌ ಕಮಿಟಿ ಸಭೆ

By

Published : Jan 27, 2022, 10:50 PM IST

ಬೆಂಗಳೂರು:ಜೆಡಿಎಸ್ ಪಕ್ಷಕ್ಕೆ ನಾಲ್ವರು ಕಾರ್ಯಾಧ್ಯಕ್ಷರನ್ನು ನೇಮಕ ಮಾಡುವ ಬಗ್ಗೆ ಪಕ್ಷದ ನೂತನ ಕೋರ್ ಕಮಿಟಿ ಸಭೆಯಲ್ಲಿ ವಿಸ್ತೃತವಾಗಿ ಚರ್ಚೆ ನಡೆಸಲಾಗಿದೆ.

ಕೋರ್ ಕಮಿಟಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್ ಹಾಗೂ ಕೋರ್ ಕಮಿಟಿ ವಿಶೇಷ ಆಹ್ವಾನಿತರೂ ಆಗಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಉಪಸ್ಥಿತಿಯಲ್ಲಿ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಗುರುವಾರ ಸಭೆ ನಡೆಯಿತು. ಈ ವೇಳೆ ಬಿಬಿಎಂಪಿ ಪಾಲಿಕೆ ಚುನಾವಣೆ ಹಾಗೂ ಪಕ್ಷ ಸಂಘಟನೆ ಇತ್ಯಾದಿ ವಿಷಯಗಳ ಬಗ್ಗೆ ಸಭೆಯಲ್ಲಿ ಮಹತ್ವದ ಸಮಾಲೋಚನೆ ನಡೆಸಲಾಯಿತು.

ಸಭೆಯ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಬಂಡೆಪ್ಪ ಕಾಶೆಂಪೂರ್, ನಾಲ್ವರು ಕಾರ್ಯಾಧ್ಯಕ್ಷರ ನೇಮಕ ಸೇರಿ ವಿವಿಧ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಕೋರ್ ಕಮಿಟಿಯ ಮೊದಲ ಸಭೆ ಇದಾಗಿದ್ದು, 17 ಸದಸ್ಯರು ಹಾಜರಿದ್ದರು ಎಂದರು.

ಪಕ್ಷದ ಬಲವರ್ಧನೆಗೆ ಏನು ಕ್ರಮ ತೆಗೆದುಕೊಳ್ಳಬೇಕು. ತಳಮಟ್ಟದಲ್ಲಿ ಪಕ್ಷವನ್ನು ಗಟ್ಟಿಗೊಳಿಸುವ ಬಗ್ಗೆ ಹಾಗೂ ಬೇರೆ ಬೇರೆ ಘಟಕಗಳಿಗೆ ನೇಮಕಾತಿ ಸೇರಿದಂತೆ ಹಲವಾರು ವಿಚಾರಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಪಕ್ಷವನ್ನು ಎಲ್ಲಾ ದಿಕ್ಕುಗಳಲ್ಲೂ ಬಲಿಷ್ಠಗೊಳಿಸುವ ಹಿನ್ನೆಲೆಯಲ್ಲಿ ನಾಲ್ವರು ಕಾರ್ಯಾಧ್ಯಕ್ಷರನ್ನು ನೇಮಕ ಮಾಡುವ ಬಗ್ಗೆ ಸಭೆಯಲ್ಲಿ ಪ್ರಮುಖವಾಗಿ ಸಮಾಲೋಚನೆ ನಡೆಸಲಾಗಿದೆ ಎಂದು ತಿಳಿಸಿದರು.

ಜೆಡಿಎಸ್ ಮಾಧ್ಯಮ ಸೆಲ್ ಅಧ್ಯಕ್ಷರನ್ನಾಗಿ ಮಾಜಿ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಹಾಗೂ ಕೈಗಾರಿಕಾ ವಿಭಾಗದ ರಾಜ್ಯಾಧ್ಯಕ್ಷರಾಗಿ ಸುಧಾಕರ್ ಶೆಟ್ಟಿ ಅವರನ್ನು ನೇಮಕ ಮಾಡುವ ಬಗ್ಗೆ ಒಂದು ಶಾರ್ಟ್ ಲಿಸ್ಟ್ ಮಾಡಲಾಗಿದೆ. ಬಿಬಿಎಂಪಿ ಚುನಾವಣೆ ಸಂಬಂಧ ಇಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ನಗರದ 28 ಕ್ಷೇತ್ರಗಳಿಂದ ಅಧ್ಯಕ್ಷರನ್ನು ಕರೆಸಿ ಚರ್ಚೆ ಮಾಡಲಾಗಿದ್ದು, ಮುಂಬರುವ ಬಿಬಿಎಂಪಿ ಚುನಾವಣೆಗೆ ತಯಾರಿ ಆರಂಭಿಸಲಾಗಿದೆ ಎಂದರು.

ಇದನ್ನೂ ಓದಿ: ನಾಳೆ ಸಿಎಂ ಬೊಮ್ಮಾಯಿಗೆ ಹುಟ್ಟುಹಬ್ಬದ ಸಂಭ್ರಮ: ಬರ್ತಡೇ ಸೆಲೆಬ್ರೇಷನ್ ಮಾಡಿಕೊಳ್ಳಲ್ಲ ಅಂದ್ರು ಸಿಂಪಲ್ ಸಿಎಂ

ಫೆಬ್ರವರಿ.11ರಂದು ಚಿಂತಾಮಣಿಯಲ್ಲಿ ಕೋರ್‌ ಕಮಿಟಿ ಸಭೆ ನಡೆಸಲಾಗುತ್ತದೆ. ಅಲ್ಲಿ ಶಾಸಕ ಜೆ.ಕೆ.ಕೃಷ್ಣಾ ರೆಡ್ಡಿ ಅವರ ಹೊಸ ಕಚೇರಿ ಉದ್ಘಾಟನೆ ಮಾಡಲಾಗುತ್ತದೆ. ಅಲ್ಲಿಯೇ ಈ ಮೀಟಿಂಗ್ ನಡೆಸಲಾಗುತ್ತದೆ. ಜೊತೆಗೆ ಜಲಧಾರೆ ವಿಚಾರವಾಗಿಯೂ ರೋಡ್ ಮ್ಯಾಪ್ ಮಾಡಲಾಗುತ್ತಿದೆ. ಫೆಬ್ರವರಿ 15ರ ನಂತರ ಜಲಧಾರೆ ಕಾರ್ಯಕ್ರಮ ಮಾಡಬೇಕು ಅಂದುಕೊಂಡಿದ್ದೇವೆ. ಕೊರೊನಾ ಕಡಿಮೆಯಾದರೆ ನಿಗದಿತ ವೇಳೆಗೆ ಮಾಡುತ್ತೇವೆ ಎಂದರು.

ಕೋರ್‌ ಕಮಿಟಿ ಸಭೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ (ವಿಶೇಷ ಆಹ್ವಾನಿತರು), ವಿಧಾನ ಪರಿಷತ್‌ ಸದಸ್ಯ ಹಾಗೂ ಸಮಿತಿ ಸಂಚಾಲಕ ಕೆ.ಎ.ತಿಪ್ಪೇಸ್ವಾಮಿ, ಮಾಜಿ ಸಚಿವ ವೆಂಕಟರಾವ್‌ ನಾಡಗೌಡ, ಸಿ.ಎಸ್.ಪುಟ್ಟರಾಜು, ಮಾಜಿ ಸಂಸದ ಕುಪೇಂದ್ರ ರೆಡ್ಡಿ, ಶಾಸಕರಾದ ಕೃಷ್ಣಾರೆಡ್ಡಿ,ರಾಜಾ ವೆಂಕಟಪ್ಪನಾಯ್ಕ ದೊರೆ, ವಿಧಾನ ಪರಿಷತ್‌ ಸದಸ್ಯ ಬಿ.ಎಂ.ಫಾರೂಕ್‌, ವಿಧಾನ ಪರಿಷತ್‌ ಮಾಜಿ ಸದಸ್ಯ ಟಿ.ಎ.ಶರವಣ, ಮಾಜಿ ಶಾಸಕ ತಿಮ್ಮರಾಯಪ್ಪ, ನಾಸೀರ್‌ ಭಗವಾನ್‌, ಹನುಮಂತ ಬಸಪ್ಪ ಬೇವಿನಮರದ, ರೂತ್‌ ಮನೋರಮಾ, ಸುಧಾಕರ್‌ ಶೆಟ್ಟಿ, ವಿ.ನಾರಾಯಣಸ್ವಾಮಿ ಭಾಗಿಯಾಗಿದ್ದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details