ಕರ್ನಾಟಕ

karnataka

ETV Bharat / state

ಸುದೀಪ್ ನಟನೆಯ ಸಿನಿಮಾ, ಜಾಹೀರಾತು, ಪೋಸ್ಟರ್ ತೆರವಿಗೆ ಚು.ಆಯೋಗಕ್ಕೆ ಜೆಡಿಎಸ್ ದೂರು - ಸುದೀಪ್ ನಟನೆಯ ಸಿನಿಮಾ ಪೋಸ್ಟರ್

ಸುದೀಪ್ ನಟನೆಯ ಸಿನಿಮಾ ಪೋಸ್ಟರ್ ತೆರವು ಹಾಗೂ ಪ್ರಚಾರ ಕಾರ್ಯಗಳನ್ನು ತಡೆ ಹಿಡಿಯುವಂತೆ ಕೋರಿ ಜೆಡಿಎಸ್​ ಕಾನೂನು ಘಟಕ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.

ನಟ ಸುದೀಪ್
ನಟ ಸುದೀಪ್

By

Published : Apr 7, 2023, 5:21 PM IST

Updated : Apr 7, 2023, 5:29 PM IST

ಬೆಂಗಳೂರು : ನಟ ಕಿಚ್ಚ ಸುದೀಪ್ ಅವರು ಬಿಜೆಪಿ ಪಕ್ಷದ ಸ್ಟಾರ್ ಪ್ರಚಾರಕರಾಗಿದ್ದು ಅವರು ನಟಿಸಿರುವ ಸಿನಿಮಾ, ಜಾಹೀರಾತು, ಪೋಸ್ಟರ್ ಮತ್ತು ಪ್ರಚಾರ ಕಾರ್ಯಕ್ರಮಗಳನ್ನು ವಿಧಾನಸಭೆ ಚುನಾವಣೆ ಮುಗಿಯುವವರೆಗೂ ತಡೆ ಹಿಡಿಯಬೇಕೆಂದು ಜೆಡಿಎಸ್ ಕಾನೂನು ಘಟಕ ಚುನಾವಣಾ ಆಯೋಗಕ್ಕೆ ಇಂದು ದೂರು ನೀಡಿದೆ.

ಸುದೀಪ್ ಅವರು ಪ್ರಸ್ತುತ ಬಿಜೆಪಿಯ ಸ್ಟಾರ್ ಪ್ರಚಾರಕರಾಗಿ ಗುರುತಿಸಿಕೊಂಡಿದ್ದಾರೆ. ಆದ್ದರಿಂದ ಅವರ ಸಿನೆಮಾ, ಜಾಹೀರಾತು, ಪೋಸ್ಟರ್ ಮುಂತಾದವುಗಳನ್ನು ಬಿತ್ತರಿಸುವ ಮೂಲಕ ಮತಗಳ ಮೇಲೆ ಪ್ರಭಾವ ಉಂಟಾಗುತ್ತದೆ ಎಂಬ ಕಾರಣದಿಂದ ಚುನಾವಣೆ ಮುಗಿಯುವವರೆಗೆ ಅವರ ನಟನೆಯ ಯಾವುದೇ ಶೋ ಮತ್ತು ಅವರ ಭಾವಚಿತ್ರವಿರುವ ಜಾಹೀರಾತುಗಳ ಪ್ರಸಾರಕ್ಕೆ ತಡೆ ಹಿಡಿಯಬೇಕಾಗಿ ರಾಜ್ಯ ವಕ್ತಾರ, ಜೆಡಿಎಸ್ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಚುನಾವಣಾಧಿಕಾರಿಗಳಿಗೆ ನೀಡಿರುವ ಮನವಿ ಪತ್ರದಲ್ಲಿ ಕೋರಿದ್ದಾರೆ. ಸುದೀಪ್ ಭಾವಚಿತ್ರ ಇರುವ ಪೋಸ್ಟರ್ ಜಾಹೀರಾತುಗಳನ್ನು ಈ ಕೂಡಲೇ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ : ಮಾದರಿ ನೀತಿ ಸಂಹಿತೆ ಜಾರಿಯಾದ ನಂತರವೂ ಮಹಾಲಕ್ಷ್ಮಿಪುರಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯೊಳಗೆ ಬರುವ ಮಾರಪ್ಪನ ಪಾಳ್ಯ ವಾರ್ಡ್, ಮಹಾಲಕ್ಷ್ಮಿಪುರ ವಾರ್ಡ್ ಹಾಗೂ ನಂದಿನಿ ಲೇಔಟ್ ವಾರ್ಡ್​ಗಳಲ್ಲಿ ರಾತ್ರೋ ರಾತ್ರಿ ಡಾಂಬರೀಕರಣ ಮಾಡಲಾಗುತ್ತಿದೆ. ಸ್ಥಳೀಯ ಶಾಸಕರ ಆಪ್ತರಾಗಿರುವ ಅಧಿಕಾರಿಗಳು ಆ ಮೂಲಕ ಮತದಾರರ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಈ ಅಧಿಕಾರಗಳ ವಿರುದ್ಧ ಕ್ರಮ ಕೈಗೊಳ್ಳಲು ಜನತಾದಳ ಕಾನೂನು ಘಟಕ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಸುದೀಪ್​ ಜನರ ಪರ ನಿಲ್ಲಬೇಕು-ಪ್ರಿಯಾಂಕ್ ಖರ್ಗೆ:ಸುದೀಪ್ ಕರ್ನಾಟಕದ ಜನರ ಜೊತೆ ನಿಲ್ಲಬೇಕು ಪಕ್ಷದ ಪರವಾಗಿ ಅಲ್ಲ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಸುದೀಪ್ ರಾಜ್ಯಕ್ಕೆ ಅದ್ಭುತವಾದ ಕೊಡುಗೆ ನೀಡಿದ್ದಾರೆ. ಅವರು ಯಾವತ್ತೂ ಕರ್ನಾಟಕದ ಅಸ್ಮಿತೆ ಬಗ್ಗೆ ಮಾತನಾಡುವ ವ್ಯಕ್ತಿ. ಬಾಲಿವುಡ್ vs ಸ್ಯಾಂಡಲ್‌ವುಡ್ ಬಂದಾಗ ಸುದೀಪ್ ಕನ್ನಡದ ಅಸ್ಮಿತೆಗಾಗಿ ಗಟ್ಟಿಯಾಗಿ ನಿಂತಿದ್ದಾರೆ ಎಂದರು.

ಸುದೀಪ್ ಬಿಜೆಪಿಗೆ ಬೆಂಬಲ ನೀಡಿರುವುದಕ್ಕೆ ಯಾವುದೇ ತಕರಾರು ಇಲ್ಲ. ಅವರನ್ನು ಒಬ್ಬ ನಟನಾಗಿ ಗೌರವಿಸುತ್ತೇವೆ. ಅವರು ಕರ್ನಾಟಕದ ಜನರ ಜೊತೆ ನಿಲ್ಲಬೇಕು. ಕರ್ನಾಟಕದ ಅಸ್ಮಿತೆ ವಿಚಾರ ಬಂದಾಗ ಯಾವುದೇ ಪಕ್ಷವನ್ನು ನೋಡಬೇಡಿ. ಅವರು ಬಿಜೆಪಿಗೆ ಬೆಂಬಲ ನೀಡಿದ್ದಾರೆ ಅಂತ ಅವರ ಸಿನಿಮಾ ನೋಡುವುದನ್ನು ಬಿಡುವುದಿಲ್ಲ ಎಂದು ಇದೇ ವೇಳೆ ತಿಳಿಸಿದ್ದಾರೆ.

ಸುದೀಪ್‌ ಚಿತ್ರಗಳಿಗೆ ನಿರ್ಬಂಧ ಹೇರಿ ಎನ್ನುವುದು ಕೂಡಾ ಸರಿಯಲ್ಲ. ಹಲವು ಜನರಿಗೆ ಸಿನಿಮಾದಲ್ಲಿ‌ ಕೆಲಸ ಕೊಟ್ಟಿರುತ್ತಾರೆ. ವಾಣಿಜ್ಯ ದೃಷ್ಟಿಕೋನದಿಂದ ಚಿತ್ರ ತೆಗೆದಿರುತ್ತಾರೆ. ಅದನ್ನು ಬ್ಯಾನ್ ಮಾಡಿ ಅನ್ನೋದು ಸರಿಯಲ್ಲ ಎಂದು ಇದೇ ವೇಳೆ ತಿಳಿಸಿದರು. ಹಾಗೆಯೇ ಅದು‌ ಸರಿಯಾದ ಕ್ರಮವೂ ಅಲ್ಲ. ಆದರೆ ರಾಜಕೀಯ ಪಕ್ಷದ ವಿಚಾರ ಇದ್ದರೆ ನಿಷೇಧಿಸಬೇಕಾಗುತ್ತೆ. ಚುನಾವಣಾ ನಿಯಮಗಳಲ್ಲೇ ಅದು ಇರುತ್ತದೆ. ಅವರ ಸಿನಿಮಾಗಳನ್ನು ನಿರ್ಬಂಧಿಸುವುದಕ್ಕೆ ನಮ್ಮ ಬೆಂಬಲ ಇಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ :ಸುದೀಪ್ ಕರ್ನಾಟಕದ ಜನರ ಜೊತೆ ನಿಲ್ಲಬೇಕು, ಪಕ್ಷದ ಪರವಾಗಿ ಅಲ್ಲ: ಪ್ರಿಯಾಂಕ್ ಖರ್ಗೆ

Last Updated : Apr 7, 2023, 5:29 PM IST

ABOUT THE AUTHOR

...view details