ಬೆಂಗಳೂರು: 2023ರ ವಿಧಾನಸಭೆ ಚುನಾವಣಾ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಜೆಡಿಎಸ್ ಬಿಡುಗಡೆ ಮಾಡಿದೆ. 93 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ರಾಮನಗರ ಕ್ಷೇತ್ರ ನಿಖಿಲ್ ಕುಮಾರಸ್ವಾಮಿ, ಚನ್ನಪಟ್ಟಣ ಕ್ಷೇತ್ರದಲ್ಲಿ ಹೆಚ್.ಡಿ.ಕುಮಾರಸ್ವಾಮಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.
ಜೆಡಿಎಸ್ ಅಭ್ಯರ್ಥಿಗಳ ಪ್ರಥಮ ಪಟ್ಟಿ ಚುನಾವಣೆಗೆ ಇನ್ನೂ ಐದಾರು ತಿಂಗಳು ಬಾಕಿ ಇರುವಾಗಲೇ ಜೆಡಿಎಸ್ ಪಕ್ಷ ತನ್ನ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪಕ್ಷದ ಕಚೇರಿ ಜೆ.ಪಿ.ಭನವದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸಮ್ಮುಖದಲ್ಲಿ 2023 ವಿಧಾನಸಭಾ ಚುನಾವಣೆಗೆ 93 ಜೆಡಿಎಸ್ ರಣ ಕಲಿಗಳ ಹೆಸರನ್ನು ಘೋಷಣೆ ಮಾಡಿದರು.
ಜೆಡಿಎಸ್ ಅಭ್ಯರ್ಥಿಗಳ ಪ್ರಥಮ ಪಟ್ಟಿ ಅಪ್ಪ-ಮಗನ ಜೋಡಿಗಳಾದ ಕುಮಾರಸ್ವಾಮಿ-ನಿಖಿಲ್ ಕುಮಾರಸ್ವಾಮಿ, ಜಿ.ಟಿ.ದೇವೇಗೌಡ (ಚಾಮುಂಡೇಶ್ವರಿ)-ಹರೀಶ್ ಗೌಡ (ಹುಣಸೂರು)ಗೆ ಟಿಕೆಟ್ ಹಂಚಿಕೆಯಾಗಿದೆ. ಇನ್ನು ಹೆಚ್.ಡಿ.ರೇವಣ್ಣ ಪವರ್ ಸೆಂಟರ್ ಹಾಸನ ಜಿಲ್ಲೆ ಟಚ್ ಮಾಡದೇ ಇರುವುದು ಅಭ್ಯರ್ಥಿಗಳ ಮೊದಲ ಪಟ್ಟಿಯ ಹೈಲೈಟ್ ಆಗಿದೆ.
ಜೆಡಿಎಸ್ ಅಭ್ಯರ್ಥಿಗಳ ಪ್ರಥಮ ಪಟ್ಟಿ ಮೊದಲ ಅಭ್ಯರ್ಥಿಗಳ ಪಟ್ಟಿಯಲ್ಲಿ ಹೆಚ್.ಡಿ.ರೇವಣ್ಣ ಪವರ್ ಸೆಂಟರ್ ಹಾಸನ ಜಿಲ್ಲೆಯನ್ನು ಹೆಚ್.ಡಿ.ಕುಮಾರಸ್ವಾಮಿ ಟಚ್ ಮಾಡಿಲ್ಲ. ಹಾಸನ ಜಿಲ್ಲೆಯ ಏಳು ಕ್ಷೇತ್ರಗಳಾದ ಶ್ರವಣಬೆಳಗೊಳ, ಬೇಲೂರು, ಅರಸೀಕೆರೆ, ಹೊಳೆನರಸೀಪುರ, ಸಕಲೇಶಪುರ, ಅರಕಲಗೂಡು, ಹಾಸನ ಕ್ಷೇತ್ರಗಳ ಅಭ್ಯರ್ಥಿ ಘೋಷಣೆ ಮಾಡಿಲ್ಲ. ಆ ಮೂಲಕ ಹೆಚ್.ಡಿ.ಕುಮಾರಸ್ವಾಮಿ ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದಾರೆ.
ಜೆಡಿಎಸ್ ಅಭ್ಯರ್ಥಿಗಳ ಪ್ರಥಮ ಪಟ್ಟಿ ಜೆಡಿಎಸ್ ಮೊದಲ ಪಟ್ಟಿಯಲ್ಲಿ ಗೌಡರ ಕುಟುಂಬದ ಇಬ್ಬರಿಗೆ ಟಿಕೆಟ್ ನೀಡಲಾಗಿದೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಹೆಚ್.ಡಿ. ಕುಮಾರಸ್ವಾಮಿ, ರಾಮನಗರ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಆ ಮೂಲಕ ರಾಮನಗರ ಹಾಲಿ ಶಾಸಕಿ ಅನಿತಾ ಕುಮಾರಸ್ವಾಮಿ ತಮ್ಮ ಮಗನಿಗೆ ಕ್ಷೇತ್ರ ಬಿಟ್ಟು ಕೊಟ್ಟಿದ್ದಾರೆ.
ಇದೀಗ ಎರಡನೇ ಪಟ್ಟಿಯಲ್ಲಿ ಗೌಡರ ಕುಟುಂಬದಿಂದ ಹೆಚ್.ಡಿ ರೇವಣ್ಣ ಹೊರತು ಪಡಿಸಿ ಉಳಿದ ಸದಸ್ಯರಿಗೆ ಟಿಕೆಟ್ ಸಿಗುತ್ತಾ ಎಂಬ ಕುತೂಹಲ ಮೂಡಿದೆ. ಹಾಸನದಿಂದ ಭವಾನಿ ರೇವಣ್ಣ ಮತ್ತು ಮುಖಂಡ ಸ್ವರೂಪ್ ಮಧ್ಯೆ ಟಿಕೆಟ್ಗೆ ಪೈಪೋಟಿ ಇದೆ. ಗೊಂದಲ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ ಯಾವೊಂದೂ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡುವ ಗೋಜಿಗೆ ಹೋಗಿಲ್ಲ.
ಮೊದಲ ಪಟ್ಟಿಯಲ್ಲಿ ನಿರೀಕ್ಷೆಯಂತೆಯೇ ಹಾಲಿ ಶಾಸಕರ ಪೈಕಿ ಬಹುತೇಕರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಜೆಡಿಎಸ್ ಬಂಡಾಯ ಅಭ್ಯರ್ಥಿಗಳ ಕ್ಷೇತ್ರಗಳಾದ ಕೋಲಾರ ಹಾಗೂ ಗುಬ್ಬಿಗೆ ಪರ್ಯಾಯ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. ಕೋಲಾರ ಕ್ಷೇತ್ರಕ್ಕೆ ಸಿ.ಎಂ.ಆರ್. ಶ್ರೀನಾಥ್, ಗುಬ್ಬಿ ಹಾಲಿ ಶಾಸಕ ಶ್ರೀನಿವಾಸ್ ಬದಲಿಗೆ ನಾಗರಾಜ್ ಅನ್ನೋರಿಗೆ ಟಿಕೆಟ್ ನೀಡಲಾಗಿದೆ. ಇನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಪುತ್ರ ಸಿ.ಎಂ.ಫಯಾಜ್ ಹುಮ್ನಾಬಾದ್ ಕ್ಷೇತ್ರದಿಂದ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಭದ್ರಾವತಿ ಕ್ಷೇತ್ರಕ್ಕೆ ದಿವಂಗತ ಅಪ್ಪಾಜಿ ಗೌಡ ಪತ್ನಿ ಶಾರದಾ ಅಪ್ಪಾಜಿ ಗೌಡಗೆ ಟಿಕೆಟ್ ನೀಡಲಾಗಿದೆ.