ಕರ್ನಾಟಕ

karnataka

ETV Bharat / state

ನೈಸ್ ರಸ್ತೆ ಅಕ್ರಮದ ವಿರುದ್ಧ ಜೆಡಿಎಸ್ - ಬಿಜೆಪಿ ಒಟ್ಟಾಗಿ ಹೋರಾಡಲಿದೆ; ಕುಮಾರಸ್ವಾಮಿ ಘೋಷಣೆ - ಹೆಚ್​ಡಿಕೆ

JDS-BJP Joint Press Conference: ನಾವು ನೈಸ್ ರಸ್ತೆ ಹಲವು ಅಕ್ರಮಗಳ ವಿರುದ್ಧ ಒಂದಿಷ್ಟು ಚರ್ಚೆ ನಡೆಸಬೇಕೆಂದು ಮನವಿ ಮಾಡಿದ್ದೆವು. ನಾಡಿನ ಹಿತಾಸಕ್ತಿ ಕಾಪಾಡಲು ನಾವು ಬಿಜೆಪಿ ಜತೆ ಹೋರಾಟಕ್ಕೆ ಮುಂದಾಗಿದ್ದೇವೆ. ಭೂಮಿ ಕಬಳಿಸುವ ಇಂತಹ ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ಹೋರಾಡುತ್ತೇವೆ ಎಂದು ಮಾಜಿ ಸಿಎಂ ಹೆಚ್​ಡಿಕೆ ಹೇಳಿದರು.

JDS-BJP Joint Press Conference
ಜೆಡಿಎಸ್ ಬಿಜೆಪಿ ಜಂಟಿ ಸುದ್ದಿಗೋಷ್ಠಿ

By

Published : Jul 21, 2023, 3:46 PM IST

ನೈಸ್ ರಸ್ತೆ ಅಕ್ರಮದ ವಿರುದ್ಧ ಜೆಡಿಎಸ್-ಬಿಜೆಪಿ ಒಟ್ಟಾಗಿ ಹೋರಾಡಲಿದೆ-ಹೆಚ್​ಡಿಕೆ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಪ್ರತಿಪಕ್ಷ ಹೊರಗಿರುವಾಗ ಬಜೆಟ್ ಅಧಿವೇಶನ ಮುನ್ನಡೆಸಿರುವುದು ವಿಪರ್ಯಾಸ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದರು. ವಿಧಾನಸೌಧದ ತಮ್ಮ ಕಚೇರಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.

ಉದ್ಧಟತನ ಸರಿಯಲ್ಲ:ಎರಡು ದಿನದಿಂದ ನಡೆಯುತ್ತಿರುವ ಕಲಾಪ ನೋಡಿದ್ದೀರಿ. ಸರ್ಕಾರ ಶಿಷ್ಟಾಚಾರ ಉಲ್ಲಂಘಿಸಿದೆ. ಅಂದು ಸದನದಲ್ಲಿ‌ಬೊಮ್ಮಾಯಿ ಮತ್ತಿತರರು ಪ್ರಸ್ತಾಪಿಸಿದ ವಿಚಾರ ಮುಂದುವರಿಸುವುದು ಬೇಡ, ಸಮಾಧಾನ ಮಾಡಿಕೊಳ್ಳೋಣ ಎನ್ನಬಹುದಿತ್ತು. ವಿಧಾನಸಭೆಯಲ್ಲಾದ ಅದೆಷ್ಟೋ ಗದ್ದಲಗಳನ್ನು ಸಭಾಧ್ಯಕ್ಷರು ನಿಯಂತ್ರಿಸಿದ್ದರು. ಒಮ್ಮೆ ಗಲಾಟೆ ಆಯಿತು ಸರಿ. ಉದ್ಧಟತನ ಸರಿಯಲ್ಲ. ಊಟಕ್ಕೂ ಬಿಡದೇ ಶಿಕ್ಷಿಸಿ ಸಭೆ ನಡೆಸುವುದು ಸರಿಯಲ್ಲ ಎಂದರು.

ನಿಮ್ಮನ್ನೇನು ರೌಡಿಗುರು ಅನ್ನಬೇಕಾ?:ಸಭಾಧ್ಯಕ್ಷರು ನಮ್ಮನ್ನು ಕರೆದು ಮಾತನಾಡಬಹುದಿತ್ತು. ಪೇಪರ್ ಹರಿದು ಎಸೆದರು, ತಪ್ಪೇ. ಆದರೆ, ಇಂದಿನ ಉಪ ಮುಖ್ಯಮಂತ್ರಿಗಳು ಇದನ್ನೇ ಮಾಡಿಲ್ಲವೇ?. ಯಾರೂ ಕೊಡದೇ ಇರುವ ಬಜೆಟ್ಟಾ? ಇದು. ಖಾಲಿ ಖುರ್ಚಿಗೆ ಭಾಷಣ ಮಾಡಿದ್ದಾರೆ. ಐದು ಭಾಗ್ಯ ನೀಡಿದ್ದೀರಿ, ಸಂತೋಷ. ಅನ್ನಭಾಗ್ಯ ಕೊಡುವ ನೀವು ಮಾಡಿದ್ದೇನು?. ಅನ್ನ ಕೊಡುವವನಿಗೆ ನಾಲ್ಕು‌ಸಾವಿರ ಹಣ ತೆಗೆದು ಹಾಕಿದ್ದೀರಿ. ಕೇವಲ 50 ಲಕ್ಷ ಜನರಿಗೆ ಸಿಗುತ್ತಿತ್ತು ಅಂತ ತೆಗೆದಿದ್ದೀರಿ. ಈಗ ಬರಗಾಲ ಕಾಡುತ್ತಿದೆ. ಕೇಂದ್ರ ಸರ್ಕಾರಕ್ಕೆ ಒಂದು ಮೆಮೊರಾಂಡಮ್ ಕೊಟ್ಟಿಲ್ಲ. ಜುಲೈ ಅಂತ್ಯದವರೆಗೆ ಕಾಯುತ್ತಿದ್ದಾರಂತೆ. ಶೇ.33 ರಷ್ಟು ಬಿತ್ತನೆ‌ ಆಗಿಲ್ಲ. ಸಮಸ್ಯೆಗೆ ಪರಿಹಾರ ಏನು?. ಮಾತಿಗೆ ಹೊಸ ಶಾಸಕರಿಗೆ ಅವಕಾಶ ಕೊಡಬೇಕಿತ್ತು. ಆಡಳಿತ ಪಕ್ಷದಲ್ಲಿ ಮಾತು ಮಾತಿಗೆ ಟವೆಲ್ ಕೊಡವಿ ಎದ್ದು ನಿಲ್ಲುವ ಶಾಸಕರೊಬ್ಬರು ನಿನ್ನೆ ಹೇಳಿದ್ದೇನು?. ಅವರನ್ನು ವಿಶ್ವಗುರು ಅಂತ ಛೇಡಿಸುತ್ತೀರಿ. ನಿಮ್ಮನ್ನೇನು ರೌಡಿಗುರು ಅನ್ನಬೇಕಾ? ಎಂದು ಪ್ರಶ್ನಿಸಿದರು.

ನೈಸ್ ವಿಚಾರ ಪ್ರಸ್ತಾಪ: ಕೇಂದ್ರ ಸರ್ಕಾರಕ್ಕೆ ಬರ ಸಮಸ್ಯೆಯ ಮಾಹಿತಿ ನೀಡಿ. ಸರ್ಕಾರ ನಡೆದುಕೊಳ್ಳುತ್ತಿರುವುದು ಸರಿಯಲ್ಲ. ಈಗ ನಡೆಯುತ್ತಿರುವುದು ದೊಡ್ಡ ಕರ್ಮಕಾಂಡ. ಬೆಂಗಳೂರು- ಮೈಸೂರು ಹೆದ್ದಾರಿ ವಿಚಾರ ಕಂಪನಿಯವರು ಹೆದ್ದಾರಿ ನಿಯಮ ಪ್ರಕಾರ ಮಾಡುತ್ತೇವೆ ಎಂದಿದ್ದಾರೆ. ಕಳೆದ ಒಂದು ವಾರದಿಂದ ಕಡೆಯಲ್ಲಿ ಇದರ ಚರ್ಚೆಯ ವಿಚಾರ ಅಜೆಂಡಾದಲ್ಲಿ ಕೊನೆಯಲ್ಲಿಡುತ್ತಿದ್ದಾರೆ. ಇಂದು ನಾವಿಲ್ಲ ಅಂತ ಮೊದಲಿಗೆ ತಂದಿಟ್ಟಿದ್ದಾರೆ ಎಂದು ನೈಸ್ ವಿಚಾರ ಪ್ರಸ್ತಾಪಿಸಿದರು.

ರಾಜ್ಯದ ಮುಖ್ಯಮಂತ್ರಿಗಳು ಭ್ರಷ್ಟಾಚಾರ ನಿಯಂತ್ರಿಸಲು ಹೊರಟಿದ್ದಾರೆ. ಟಿ.ಬಿ. ಜಯಚಂದ್ರ ಅವರೇ ಮಾತನಾಡಿದ್ದು, ಸದನ ಸಮಿತಿ ರಚಿಸಿ ಮೌನವಾಗುವ ಸರ್ಕಾರದ ನಿರ್ಧಾರ ನಾಟಕೀಯ ಎನ್ನಿಸುತ್ತಿದೆ. ನನ್ನ ಸರ್ಕಾರ ಅವಧಿಯಲ್ಲಿ ಮಾಡಬಹುದಿತ್ತು ಅಂತ ನೀವು ಹೇಳಬಹುದು. ಆದರೆ ಆಗಿಲ್ಲ. ನನ್ನ ಕಟ್ಟಿ ಹಾಕಿದ್ದರು. ಬೊಮ್ಮಾಯಿ ಸರ್ಕಾರವನ್ನು ಅಭಿನಂದಿಸುತ್ತೇನೆ. ಮಾಧುಸ್ವಾಮಿ ಮೇಲೆ 5 ಲಕ್ಷ ದಂಡ ಹಾಕಿದರು. ದೇವೇಗೌಡರ ಮೇಲೆ 2 ಕೋಟಿ ದಂಡ ಹಾಕಿದ್ದರು. ಈ ಸಂದರ್ಭ ಬೊಮ್ಮಾಯಿ ಸರ್ಕಾರ ಈ ನಿಟ್ಟಿನಲ್ಲಿ ಒಂದಿಷ್ಟು ಕೆಲಸ ಮಾಡಿದ್ದು, ಕೋರ್ಟ್ ಈಗ ಆ ವ್ಯಕ್ತಿಗೆ ಛೀಮಾರಿ ಹಾಕಿದೆ. ಈಗ ಅಲ್ಲಲ್ಲಿ ವೈಟ್ ಟ್ಯಾಪಿಂಗ್ ರಸ್ತೆ ಮಾಡಿಸುತ್ತಿದ್ದಾನೆ ಎಂದು ಅಶೋಕ್ ಖೇಣಿ ವಿರುದ್ಧ ಏಕವಚನದಲ್ಲಿ ದೂರಿದರು.

ಬಿಜೆಪಿ ಜತೆ ಹೋರಾಟಕ್ಕೆ ಮುಂದಾಗಿದ್ದೇವೆ:ನಾವು ನೈಸ್ ಹಲವು ಅಕ್ರಮದ ವಿರುದ್ಧ ಒಂದಿಷ್ಟು ಚರ್ಚೆ ನಡೆಸಬೇಕೆಂದು ಮನವಿ ಮಾಡಿದ್ದೆವು. ನಾಡಿನ ಹಿತಾಸಕ್ತಿ ಕಾಪಾಡಲು ನಾವು ಬಿಜೆಪಿ ಜತೆ ಹೋರಾಟಕ್ಕೆ ಮುಂದಾಗಿದ್ದೇವೆ. ಭೂಮಿ ಕಬಳಿಸುವ ಇಂತಹ ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ಹೋರಾಡುತ್ತೇವೆ. ಸದನ ಸಮಿತಿ ವರದಿ ಕೈಲಿಟ್ಟುಕೊಂಡು ಸುಮ್ಮನಿದ್ದೀರಿ. ಈ ಯೋಜನೆ ಸ್ಕ್ರಾಪ್ ಮಾಡಿದರೆ ಉಳಿಯುವ ಹಣದಿಂದ ಭಾಗ್ಯ ಮುನ್ನಡೆಸಬಹುದು. 30 ಸಾವಿರ ಕೋಟಿ ಹಣ ಸಿಗುತ್ತದೆ. ಅದನ್ನು ಬಳಸಿ. ಇದರಲ್ಲಿ ನಮ್ಮ ಪಕ್ಷದವರ ಭೂಮಿ ಇದ್ದರೂ ಮುಟ್ಟುಗೋಲು ಹಾಕಿಕೊಳ್ಳಿ. ನಮ್ಮ ಹೋರಾಟ ಮುಂದುವರಿಯುತ್ತದೆ. ನಮ್ಮ ಬಳಿ ಹಲವು ದಾಖಲೆ ಇದ್ದು, ಸರ್ಕಾರಕ್ಕೆ ನೀಡುತ್ತೇವೆ. ತನಿಖೆ ಮಾಡಲಿ. ಸರ್ಕಾರಕ್ಕೆ ಇದರ ವಿರುದ್ಧ ಕ್ರಮಕ್ಕೆ ಅಗತ್ಯ ಸಲಹೆ, ಸೂಚನೆ ನೀಡಲು ಸಿದ್ಧ. ಅವರು ಈಗಲೂ ಬೆಂಗಳೂರು ಸುತ್ತವೇ ಗಿರಕಿ ಹೊಡೆಯುತ್ತಿದ್ದಾರೆ. ಮೈಸೂರು ರಸ್ತೆಗೆ ಹೋಗಿಯೇ ಇಲ್ಲ. ಬೆಂಗಳೂರು - ಮೈಸೂರು ಹೆದ್ದಾರಿ ಆರಂಭವಾಗಿ ನಾಲ್ಕು ವರ್ಷದಲ್ಲಿ ಮುಗಿದೇ ಹೋಗಿದೆ. ಹೀಗಿರುವಾಗ ಈ ರಸ್ತೆ ಏಕೆ ಆಗಿಲ್ಲ ಎಂದು ಹೆಚ್​ಡಿಕೆ ಪ್ರಶ್ನಿಸಿದರು.

ಷರತ್ತು ಉಲ್ಲಂಘನೆ:ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಬೆಂಗಳೂರು- ಮೈಸೂರು ನಡುವೆ ಹೆದ್ದಾರಿ ಮಾಡಿ ದಟ್ಟಣೆ ನಿವಾರಿಸುವ ಭರವಸೆ ಕೊಡಲಾಗಿತ್ತು. ಆದರೆ, ಆಗಿಲ್ಲ. ಹೆಚ್ಚುವರಿ ಭೂಮಿ ರೈತರಿಗೆ ವಾಪಸ್ ಕೊಡಿ ಎನ್ನುತ್ತಿದ್ದೇವೆ. ಷರತ್ತು ಉಲ್ಲಂಘನೆ ಆಗಿದೆ. ಈ ಮಧ್ಯೆ ಕಂಪನಿ ವತಿಯಿಂದ ಕೆಲವರಿಗೆ ಭೂಮಿ ವಶಪಡಿಸಿಕೊಳ್ಳುವ ನೋಟಿಸ್ ನೀಡುತ್ತಿದ್ದಾರೆ. ಆತಂಕಕ್ಕೆ ಒಳಗಾದ ರೈತರು ನಮ್ಮನ್ನು ಸಂಪರ್ಕಿಸುತ್ತಿದ್ದಾರೆ. ಸಂಪುಟ ಉಪಸಮಿತಿ, ಸುಪ್ರೀಂ ಕೋರ್ಟ್, ಹೈಕೋರ್ಟ್ ನೀಡಿರುವ ಆದೇಶ ಪಾಲನೆ ಆಗಲಿ. ಟೋಲ್ ಸಂಗ್ರಹ ಹೆಚ್ಚುವರಿ ಆಗಿದ್ದರೆ ತನಿಖೆ ನಡೆಸಿ ಹಣವನ್ನು ಸರ್ಕಾರ ವಶಪಡಿಸಿಕೊಳ್ಳಬೇಕು. ನೈಸ್ ಅಕ್ರಮದ ವಿಚಾರದಲ್ಲಿ ಸರ್ಕಾರದ ಸ್ಪಷ್ಟ ನಿಲುವು ತಿಳಿಸಬೇಕು. ಇಲ್ಲವಾದರೆ ಸರ್ಕಾರದ ಮೇಲೆ ನಾವು ಅನುಮಾನ ಪಡಬೇಕು. ಕನಿಷ್ಠ ಜಯಚಂದ್ರ ಮಾತಿಗೆ ಬೆಲೆ ಕೊಡಿ. ಕಾಲಮಿತಿಯಲ್ಲಿ ತನಿಖೆ ಮಾಡಿಸಿ ಕ್ರಮ ಕೈಗೊಳ್ಳಿ ಎಂದು ಸಲಹೆ ಇತ್ತರು.

ಇದನ್ನೂ ಓದಿ:ಬಿಜೆಪಿ ಶಾಸಕರಿಂದ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಧರಣಿ

ABOUT THE AUTHOR

...view details