ಬೆಂಗಳೂರು:ರಾಜ್ಯದಲ್ಲಿ ಮತ್ತೊಮ್ಮೆ ರಾಜಕೀಯ ಧ್ರುವೀಕರಣದ ಮಾತುಗಳು ಕೇಳಿ ಬರುತ್ತಿದೆ. ರಾಜ್ಯದ ಏಕೈಕ ಪ್ರಭಾವಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಆಡಳಿತಾರೂಢ ಬಿಜೆಪಿಯೊಂದಿಗೆ ವಿಲೀನವಾಗುತ್ತದೆ ಎನ್ನುವ ಚರ್ಚೆ ಆರಂಭಗೊಂಡಿದೆ. ಸ್ವತಃ ಉಭಯ ಪಕ್ಷಗಳ ಪ್ರಮುಖ ನಾಯಕರೇ ನೇರವಾಗಿ ಸ್ಪಷ್ಟೀಕರಣ ನೀಡುತ್ತಿರುವುದು ಎರಡೂ ಪಕ್ಷಗಳ ನಡುವೆ ಏನೋ ನಡೆಯುತ್ತಿದೆ ಎನ್ನುವ ಅನುಮಾನಕ್ಕೆ ಪುಷ್ಟಿ ನೀಡಿದೆ.
ಮೈತ್ರಿ ಸರ್ಕಾರ ಪತನಗೊಂಡು ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದನಂತರ ಹಳೇ ದೋಸ್ತಿಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಸಂಬಂಧ ಹಳಸಿದೆ. ಮೈತ್ರಿ ಸರ್ಕಾರ ಪತನಕ್ಕೆ ಕಾರಣವಾದ ಬಿಜೆಪಿ ಜೊತೆಯಲ್ಲೇ ಜೆಡಿಎಸ್ ಸ್ನೇಹ ಬೆಳೆಸುತ್ತಿದೆ. ಇದಕ್ಕೆ ವಿಧಾನ ಪರಿಷತ್ನಲ್ಲಿ ಬಿಜೆಪಿ ನೀಡಿದ್ದ ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಜೆಡಿಎಸ್ ಬೆಂಬಲ ನೀಡಿದ್ದೇ ಸಾಕ್ಷಿಯಾಗಿದೆ.
ಇದು ಇಷ್ಟಕ್ಕೆ ನಿಂತಿಲ್ಲ, ರಾತ್ರೋ ರಾತ್ರಿ ಬಿಜೆಪಿ ಜೊತೆ ಜೆಡಿಎಸ್ ವಿಲೀನವಾಗಲಿದೆ ಎನ್ನುವ ಸುದ್ದಿಯೊಂದು ಹಬ್ಬಿ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಇತ್ತೀಚಿನ ದಿನಗಳಲ್ಲಿ ಜೆಡಿಎಸ್ ಬಗ್ಗೆ ಬಿಜೆಪಿಯಲ್ಲಿ ಹಾಗೂ ಬಿಜೆಪಿ ಬಗ್ಗೆ ಜೆಡಿಎಸ್ನಲ್ಲಿ ಮೃದು ಧೋರಣೆ ನಿಲುವುಗಳು, ಹೇಳಿಕೆಗಳು ಕೂಡ ಇದಕ್ಕೆ ಪುಷ್ಟಿ ನೀಡಿವೆ.
ಇಂತಹ ವದಂತಿ ನಡುವೆ ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪತ್ರಿಕಾ ಪ್ರಕಟಣೆ ಮೂಲಕ ಬಿಜೆಪಿಯಲ್ಲಿ ಜೆಡಿಎಸ್ ವಿಲೀನ ಸುದ್ದಿಯನ್ನು ತಳ್ಳಿಹಾಕಿದ್ದರು. ಜೆಡಿಎಸ್ ನಾಯಕ ಹೆಚ್.ಡಿ ಕುಮಾರಸ್ವಾಮಿ ಕೂಡ ಟ್ವೀಟ್ ಮಾಡಿ ವಿಲೀನ ಕೇವಲ ವದಂತಿ ಅಂತಹ ಯಾವುದೇ ಸಾಧ್ಯತೆ ಇಲ್ಲ ಎಂದು ಸ್ಪಷ್ಟೀಕರಣ ನೀಡಿದ್ದರು.
ಕೇವಲ ವದಂತಿಯಾಗಿದ್ದರೆ ತರಾತುರಿಯಲ್ಲಿ ಉಭಯ ಪಕ್ಷಗಳ ಅಗ್ರ ನಾಯಕರು ಈ ರೀತಿ ಸ್ಪಷ್ಟೀಕರಣ ಏಕೆ ನೀಡುತ್ತಿದ್ದರು ಎನ್ನುವ ಪ್ರಶ್ನೆ ಇದೀಗ ರಾಜಕೀಯ ಪಡಸಾಲೆಯಲ್ಲಿ ಎದ್ದಿದೆ.
ಮುಖ್ಯಮಂತ್ರಿ ಮತ್ತು ಮಾಜಿ ಮುಖ್ಯಮಂತ್ರಿ ಸ್ಪಷ್ಟೀಕರಣ ನೀಡಿದ ನಂತರವೂ ಬಿಜೆಪಿಯಲ್ಲಿ ಜೆಡಿಎಸ್ ವಿಲೀನವಾಗುತ್ತದೆ ಎನ್ನುವ ಸುದ್ದಿಗೆ ತೆರೆ ಬಿದ್ದಿಲ್ಲ, ಬಿಜೆಪಿ ನಾಯಕರು ವಿಲೀನ ಸಾಧ್ಯತೆ ಕುರಿತ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ.
ನಾಯಕರ ಹೇಳಿಕೆಗಳು:
’’ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ರಾಜಕೀಯ ಧ್ರುವೀಕರಣ ಆಗಲಿದೆ ಒಂದು ಪಕ್ಷವೇ ಬಿಜೆಪಿಯಲ್ಲಿ ವಿಲೀನವಾಗಬಹುದು‘‘ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಅರವಿಂದ ಲಿಂಬಾವಳಿ ಹೇಳಿಕೆ ನೀಡಿ ಜೆಡಿಎಸ್ ಪಕ್ಷ ಬಿಜೆಪಿ ವಿಲೀನವಾಗಲಿದೆ ಎಂದು ಪರೋಕ್ಷವಾಗಿ ಹೇಳಿಕೆ ನೀಡಿ ರಾಜ್ಯ ರಾಜಕೀಯದಲ್ಲಿ ಮಿಂಚಿನ ಸಂಚಲನ ಮೂಡಿಸಿದ್ದಾರೆ.
’’ದೇವೇಗೌಡರ ಆಲೋಚನೆಗಳು ಇಂದಿನ ರಾಜಕೀಯ ಸನ್ನಿವೇಶದಲ್ಲಿ ನಡೆಯುವುದಿಲ್ಲ, ಬಿಜೆಪಿಯೊಂದಿಗೆ ಹೋಗಬೇಕಾಗಲಿದೆ’’ ಎಂದು ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ ಮೈತ್ರಿ ಕುರಿತು ಸುಳಿವು ನೀಡಿದ್ದಾರೆ. ಇದು ಪರೋಕ್ಷವಾಗಿ ಪಕ್ಷ ವಿಲೀನದ ಮೊದಲ ಹಂತ ಎಂದು ವ್ಯಾಖ್ಯಾನ ಮಾಡಲಾಗುತ್ತಿದೆ.
’’ಶತ್ರುವಿನ ಶತ್ರು ಮಿತ್ರ ಎನ್ನುವ ರಾಜಕೀಯ ಪರಿಭಾಷೆಯಂತೆ ನಿದ್ದೆಗಣ್ಣಲ್ಲಿಯೂ ಕಾಂಗ್ರೆಸ್ ನಮ್ಮ ಶತ್ರು ಎಂದು ಹೇಳುತ್ತೇವೆ. ಜೆಡಿಎಸ್ ಆಗಾಗ ನಮಗೆ ಹತ್ತಿರ ಬರುತ್ತದೆ ದೂರ ಹೋಗುತ್ತದೆ’’ ಎನ್ನುವ ಮೂಲಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿಕೆ ನೀಡುವ ಮೂಲಕ ಮೈತ್ರಿ ಸಾಧ್ಯತೆ ಕುರಿತ ಸುಳಿವು ನೀಡಿದ್ದಾರೆ. ಇದು ಕೂಡ ಭವಿಷ್ಯದಲ್ಲಿ ಜೆಡಿಎಸ್ ಬಿಜೆಪಿಯೊಂದಿಗೆ ವಿಲೀನವಾಗುವ ಮುನ್ಸೂಚನೆ ಎಂದು ಹೇಳಲಾಗುತ್ತಿದೆ.
’’ಮೈತ್ರಿ ಸರ್ಕಾರ ಎಂದರೆ ಲವ್ ಮ್ಯಾರೇಜ್ ಇದ್ದಂತೆ ರಾಜ್ಯದಲ್ಲಿ ಮತ್ತೆ ಮೈತ್ರಿ ಸರ್ಕಾರದ ಪರ್ವ ಶುರುವಾಗಿದೆ ಆದರೆ ಯಾರೊಂದಿಗೆ ಎನ್ನುವುದು ನಿಗೂಢವಾಗಿದೆ’’ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಜೆಡಿಎಸ್ ಶಾಸಕ ಕೋನರೆಡ್ಡಿ ಹೇಳಿಕೆ ನೀಡಿರುವುದು ಕೂಡ ಸಂಚಲನ ಮೂಡಿಸಿದೆ.
ಹಾಲಿ ಮಾಜಿ ಸಿಎಂಗಳಿಂದ ಎರಡನೇ ಸ್ಪಷ್ಟೀಕರಣ:
ಈ ಎಲ್ಲ ಹೇಳಿಕೆಗಳ ನಂತರ ಮತ್ತೆ ಹಾಲಿ ಮಾಜಿ ಸಿಎಂಗಳಿಂದ ಎರಡನೇ ಸ್ಪಷ್ಟೀಕರಣ ಹೊರಬಿದ್ದಿದೆ. ’’ಜೆಡಿಎಸ್ ಪಕ್ಷ ಬಿಜೆಪಿಯಲ್ಲಿ ವಿಲೀನ ಆಗುತ್ತದೆ ಎಂದು ಮಾತನಾಡುವುದು ದೇವೇಗೌಡರು ಹಾಗೂ ಕುಮಾರಸ್ವಾಮಿಗೆ ಅಪಮಾನ ಮಾಡಿದಂತೆ’’ ಎನ್ನುವ ಮೂಲಕ ವಿಲೀನ ಸುದ್ದಿಯನ್ನು ಕಡ್ಡಿ ಮುರಿದಂತೆ ಸಿಎಂ ಯಡಿಯೂರಪ್ಪ ತಿರಸ್ಕರಿಸಿದ್ದಾರೆ. ’’ಪರಿಷತ್ನಲ್ಲಿ ಸಭಾಪತಿ ಇಳಿಸುವ ವಿಚಾರದಲ್ಲಿ ಜೆಡಿಎಸ್ ನವರ ಸಹಕಾರ ಕೇಳಿದ್ದೆವು ಅವರು ನಮಗೆ ಸಹಕಾರ ಕೊಟ್ಟಿದ್ದಾರೆ. ಇನ್ನು ಮುಂದೆಯೂ ಅಗತ್ಯವಿದ್ದ ಸಮಯದಲ್ಲಿ ನಮಗೆ ಸಹಕಾರ ಕೊಡಬಹುದು’’ ಎನ್ನುವ ಮೂಲಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪರೋಕ್ಷವಾಗಿ ಜೆಡಿಎಸ್ ಬಿಜೆಪಿಯನ್ನು ಬೆಂಬಲಿಸಲಿದೆ ಎಂದು ಸುಳಿವು ಕೊಟ್ಟಿದ್ದಾರೆ.
ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಸುದ್ದಿಗೋಷ್ಠಿ ನಡೆಸಿ ಪಕ್ಷದ ವಿಲೀನ ಸುದ್ದಿಯನ್ನು ತಳ್ಳಿಹಾಕಿದ್ದಾರೆ. ’’ಜೆಡಿಎಸ್ ಪಕ್ಷವನ್ನು ಯಾವುದೇ ರೀತಿಯಲ್ಲಿ ವಿಲೀನ ಮಾಡುವ ಪ್ರಶ್ನೆಯೇ ಇಲ್ಲ. ನಾವು ಬದುಕಿರುವವರೆಗೂ ಯಾವುದೇ ಪಕ್ಷದ ಜೊತೆ ವಿಲೀನ ಇಲ್ಲ’’ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಜತೆ ಜೆಡಿಎಸ್ ವಿಲೀನ ಮಾಡುವ ಸುದ್ದಿ ಕೇವಲ ವದಂತಿಯಾಗಿದ್ದರೆ ಸಿಎಂ ಬಿಎಸ್ವೈ, ಮಾಜಿ ಸಿಎಂ ಹೆಚ್ಡಿಕೆ ಯಾಕಿಷ್ಟು ಮಹತ್ವ ಕೊಡುತ್ತಿದ್ದಾರೆ ಎನ್ನುವ ಪ್ರಶ್ನೆ ಎದ್ದಿದೆ. ಈ ಹಿಂದೆಯೂ ಹಲವು ವದಂತಿಗಳು ಬಂದಾಗ ಹೇಳಿಕೆ ನೀಡದೆ, ಸ್ಪಷ್ಟೀಕರಣ ನೀಡದೆ ಇದ್ದ ನಾಯಕರು ಈಗ ಎರಡೆರಡು ಬಾರಿ ಯಾಕೆ ಸ್ಪಷ್ಟೀಕರಣ ನೀಡುತ್ತಿದ್ದಾರೆ ಎನ್ನುವ ಚರ್ಚೆ ಆರಂಭಿಸಿದ್ದಾರೆ.
ವಿಲೀನವಾಗುತ್ತದೆಯೋ ಇಲ್ಲವೋ ಆದರೆ, ಮೈತ್ರಿಯಂತಹ ಸಾಧ್ಯತೆ ಇದೆ ಎನ್ನುವ ಮಾತುಗಳು ಬಿಜೆಪಿ ಪಾಳಯದಿಂದಲೇ ಕೇಳಿಬರುತ್ತಿವೆ. ಇತ್ತೀಚೆಗೆ ವಿಧಾನ ಪರಿಷತ್ನಲ್ಲಿ ನಡೆದ ವಿಶೇಷ ಅಧಿವೇಶನದಲ್ಲಿ ಬಿಜೆಪಿಯವರೇ ಎಲ್ಲ ಸೇರಿ ಉಪಸಭಾಪತಿ ಆಗಿರುವ ಜೆಡಿಎಸ್ನ ಧರ್ಮೇಗೌಡರನ್ನು ಸಭಾಪತಿ ಸ್ಥಾನದಲ್ಲಿ ಕೂರಿಸಿ ಗದ್ದಲ ಕೋಲಾಹಲವೆಬ್ಬಸಿದ್ದರು. ನಂತರ ಸಭಾಪತಿ ವಿರುದ್ಧ ಅವಿಶ್ವಾಸಕ್ಕೆ ಬೆಂಬಲ ನೀಡಿ ಜೆಡಿಎಸ್ ಪತ್ರ ಕೊಟ್ಟಿದ್ದು ಇಂಬು ನೀಡುತ್ತಿದೆ. ಪರಿಷತ್ನಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಖಚಿತವೂ ಆಗಿದ್ದು ಸಭಾಪತಿ ಸ್ಥಾನವನ್ನು ಜೆಡಿಎಸ್ಗೆ ಬಿಟ್ಟುಕೊಡುವ ಲೆಕ್ಕಾಚಾರದಲ್ಲಿ ಬಿಜೆಪಿ ಇದೆ ಎನ್ನಲಾಗುತ್ತಿದೆ. ಈ ಸಂಬಂಧ ಹೈಕಮಾಂಡ್ ಮಟ್ಟದಲ್ಲಿ ಮಾತುಕತೆಯೂ ನಡೆಯಲಿದೆ ಎನ್ನುವ ಮಾತುಗಳು ಕೇಳಿಬಂದಿದೆ.
ಒಟ್ಟಿನಲ್ಲಿ ಬಿಜೆಪಿ ಜತೆ ಜೆಡಿಎಸ್ ವಿಲೀನವಾಗಲಿದೆ ಎನ್ನುವ ವಿಷಯ ತೀವ್ರ ಚರ್ಚಿತವಾಗುತ್ತಿದೆ. ಉಭಯ ಪಕ್ಷಗಳ ಅಗ್ರ ನಾಯಕರು ವಿಲೀನ ಸುದ್ದಿ ತಳ್ಳಿಹಾಕುತ್ತಿದ್ದರೂ ಎರಡನೇ ಹಂತದ ನಾಯಕರು ಮಾತ್ರ ವಿಲೀನ, ಮೈತ್ರಿಯಂತಹ ಹೇಳಿಕೆ ನೀಡುತ್ತಿರುವುದು ಎರಡೂ ಪಕ್ಷಗಳ ನಡುವೆ ಏನೋ ನಡೆಯುತ್ತಿದೆ ಎನ್ನುವುದನ್ನು ಪುಷ್ಟೀಕರಿಸುತ್ತಿದೆ.