ಬೆಂಗಳೂರು: ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಗದ ಕಾರಣ ಜೆಡಿಎಸ್ ಕಿಂಗ್ ಮೇಕರ್ ಆಗಿದೆ. ಇದೀಗ ಕಾಂಗ್ರೆಸ್-ಬಿಜೆಪಿ ನಾಯಕರ ಚಿತ್ತ ಜೆಡಿಎಸ್ ಕಡೆ ಹರಿದಿದೆ.
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರ ಒಲವು ಕಾಂಗ್ರೆಸ್ ಕಡೆ ಇದ್ದರೆ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಬಿಜೆಪಿ ಮೇಲೆ ಪ್ರೀತಿ ಇದ್ದಂತೆ ಕಂಡು ಬರುತ್ತಿದೆ. ಹಾಗಾಗಿ, ಕಲಬುರಗಿ ಮಹಾನಗರ ಪಾಲಿಕೆ ಗದ್ದುಗೆ ಯಾರಿಗೆ? ಎಂಬುದು ತಂದೆ-ಮಗನ ನಿರ್ಧಾರದ ಮೇಲೆ ನಿಂತಿದೆ.
ಕಲಬುರಗಿ ಪಾಲಿಕೆ ಚುನಾವಣೆಯಲ್ಲಿ ಕಿಂಗ್ ಮೇಕರ್ ಆದ ಜೆಡಿಎಸ್ ಕಲಬುರಗಿಯಲ್ಲಿ ಮೈತ್ರಿ ಮಾಡಿಕೊಳ್ಳುವ ಸಂಬಂಧ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ದೇವೇಗೌಡರ ಜೊತೆ ಮಾತನಾಡಿ, ಕಾಂಗ್ರೆಸ್ ಬೆಂಬಲಿಸಲು ಮನವಿ ಮಾಡಿದ್ದಾರೆ. ಇನ್ನೊಂದೆಡೆ, ಸಿಎಂ ಬಸವರಾಜ ಬೊಮ್ಮಾಯಿ ಅವರು, ಕುಮಾರಸ್ವಾಮಿ ಅವರ ಜೊತೆ ಮಾತುಕತೆ ನಡೆಸಿ ಬಿಜೆಪಿಗೆ ಬೆಂಬಲಿಸಲು ಮನವಿ ಮಾಡಿದ್ದಾರೆ.
ಹೀಗಾಗಿ, ಚೆಂಡು ಪದ್ಮನಾಭನಗರದ ಅಂಗಳದಲ್ಲಿದೆ. ಅತಂತ್ರವಾಗಿರುವ ಕಲಬುರಗಿ ಮಹಾನಗರ ಪಾಲಿಕೆಯ ಗದ್ದುಗೆ ಹಿಡಿಯಲು ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಪಕ್ಷಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ದಳಪತಿಗಳ ನಿರ್ಧಾರದ ಮೇಲೆ ಯಾರಿಗೆ ಮೇಯರ್ ಸ್ಥಾನ ಲಭಿಸಲಿದೆ ಎಂಬುದು ಅವಲಂಬಿತವಾಗಿದೆ.
ಗಂಭೀರ ಚರ್ಚೆಯಲ್ಲಿ ತಂದೆ-ಮಗ :ಹೆಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಹ ಈ ನಿಟ್ಟಿನಲ್ಲಿ ಗಂಭೀರವಾಗಿ ಚರ್ಚೆ ನಡೆಸಿದ್ದಾರೆ. ಪದ್ಮನಾಭನಗರದ ಗೌಡರ ನಿವಾಸದಲ್ಲಿ ದೇವೇಗೌಡರು ಹಾಗೂ ಕುಮಾರಸ್ವಾಮಿ ಸಮಾಲೋಚನೆ ನಡೆಸಿದ್ದಾರೆ.
ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಬಂದ ಬೇಡಿಕೆಯ ಕುರಿತು ಚರ್ಚೆ ನಡೆಸಲಾಗಿದೆ. ಕಲಬುರಗಿ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಾಲ್ವರ ಅಭಿಪ್ರಾಯ ಪಡೆದು, ಸ್ಥಳೀಯ ಪರಿಸ್ಥಿತಿಗೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆ ಇದೆ. ಯಾರಿಗೆ ಬೆಂಬಲ ನೀಡಬೇಕು ಎಂಬುದು ನಾಳೆ ಅಂತಿಮಗೊಳಿಸುವ ನಿರೀಕ್ಷೆ ಇದೆ.
ಗೆದ್ದ ನಾಲ್ವರು ಜೆಡಿಎಸ್ ಸದಸ್ಯರು ಬೆಂಗಳೂರಿಗೆ :ಈ ನಡುವೆ, ಪಾಲಿಕೆ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ನಾಲ್ವರು ಸದಸ್ಯರು ಕಲಬುರಗಿಯಿಂದ ಬೆಂಗಳೂರಿಗೆ ಆಗಮಿಸಿದ್ದಾರೆ.
ಬಿಡದಿಯಲ್ಲಿ ಭವಿಷ್ಯ ನಿರ್ಧಾರ :ನಾಳೆ ಬೆಳಗ್ಗೆ ಬಿಡದಿಯಲ್ಲಿರುವ ಕುಮಾರಸ್ವಾಮಿ ಅವರ ತೋಟದ ಮನೆಗೆ ಆಹ್ವಾನಿಸಿದ್ದು, ನಾಳೆ ಅಲ್ಲಿಗೆ ತೆರಳುವ ಗೆದ್ದ ಅಭ್ಯರ್ಥಿಗಳು, ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ. ಇದೇ ವೇಳೆ ಜೆಡಿಎಸ್ ಸ್ಥಳೀಯವಾಗಿ ಕಾಂಗ್ರೆಸ್-ಬಿಜೆಪಿ ನಡುವಿನ ಸಂಬಂಧದ ವಿವರವನ್ನು ಗೆದ್ದ ಅಭ್ಯರ್ಥಿಗಳಿಂದ ಕುಮಾರಸ್ವಾಮಿ ಪಡೆದುಕೊಳ್ಳಲಿದ್ದಾರೆ. ನಂತರ ಯಾರಿಗೆ ಬೆಂಬಲ ನೀಡಬೇಕು ಎಂಬುದರ ಬಗ್ಗೆ ನಿರ್ಧಾರ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.
ಕುಮಾರಸ್ವಾಮಿ ಅವರು ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜತೆ ಮೈತ್ರಿಯ ಕುರಿತು ಪ್ರಾಥಮಿಕ ಹಂತದ ಮಾತುಕತೆ ನಡೆಸಿದರೆ, ದೇವೇಗೌಡ ಅವರ ಜತೆ ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸಮಾಲೋಚನೆ ನಡೆಸಿದ್ದಾರೆ.