ಬೆಂಗಳೂರು: ವಿಧಾನಸಭೆಯಿಂದ ರಾಜ್ಯಸಭೆಗೆ ನಾಳೆ ನಡೆಯಲಿರುವ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಜೆಡಿಎಸ್ ಕಾಂಗ್ರೆಸ್ ಹೈಕಮಾಂಡ್ ಮೊರೆ ಹೋಗಿದ್ದರೆ, ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಬೆಂಬಲ ನೀಡುವಂತೆ ಕಾಂಗ್ರೆಸ್ ಜೆಡಿಎಸ್ ಶಾಸಕರಿಗೆ ಬಹಿರಂಗ ಮನವಿ ಮಾಡಿದೆ. ಇದರಿಂದಾಗಿ ಚುನಾವಣೆಯ ಕಣ ಕುತೂಹಲಕಾರಿ ಘಟ್ಟಕ್ಕೆ ಬಂದು ನಿಂತಿದೆ.
ಕೋಮುವಾದಿ ಬಿಜೆಪಿಯನ್ನು ಸೋಲಿಸಲು ತಮ್ಮ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರನ್ನು ಬೆಂಬಲಿಸಬೇಕು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ. 32 ಮತಗಳನ್ನು ಹೊಂದಿರುವ ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಉದ್ಯಮಿಯಾಗಿದ್ದಾರೆ. ಅಪಾರ ಅನುಭವ ಹೊಂದಿರುವ ಅವರಿಗೆ ಬೆಂಬಲ ನೀಡುವ ಅನಿವಾರ್ಯತೆಯೇನು ಎಂಬುದನ್ನು ಸುರ್ಜೇವಾಲಾ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಭಾವಿಸಿರುವುದಾಗಿ ಹೆಚ್ಡಿಕೆ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ರಾಜ್ಯಸಭೆ ಚುನಾವಣೆಯಲ್ಲಿ ಕ್ರಾಸ್ ವೋಟಿಂಗ್ ಮಾಡಿಸಿದ್ರೂ ಕಾಂಗ್ರೆಸ್ ಗೆಲ್ಲಲ್ಲ: ಹೆಚ್ಡಿಕೆ
ಇತ್ತ, ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಜೆಡಿಎಸ್ ಬುಟ್ಟಿಗೆ ಕೈ ಹಾಕಿದ್ದಾರೆ. ಇವತ್ತು ಕೋಮುವಾದ ಮತ್ತು ಜಾತ್ಯಾತೀತತೆಯ ನಡುವೆ ಸಂಘರ್ಷ ನಡೆಯುತ್ತಿದ್ದು, ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಗೆಲುವಿಗೆ ಮತ ನೀಡುವಂತೆ ಬಹಿರಂಗ ಪತ್ರದ ಮೂಲಕ ಜೆಡಿಎಸ್ ಶಾಸಕರಿಗೆ ಮನವಿ ಮಾಡಿದ್ದಾರೆ.