ಬೆಂಗಳೂರು:ಯಶವಂತಪುರ ಕ್ಷೇತ್ರದಲ್ಲಿ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಮಧ್ಯೆಯೇ ಜಿದ್ದಾಜಿದ್ದಿ ಏರ್ಪಟ್ಟಿದೆ. ಬಿಜೆಪಿ, ಜೆಡಿಎಸ್ ಕ್ಷೇತ್ರಾದ್ಯಂತ ಭರ್ಜರಿ ಪ್ರಚಾರ ಕೈಗೊಂಡರೆ, ಇತ್ತ ಕಾಂಗ್ರೆಸ್ ಅಭ್ಯರ್ಥಿ ಪ್ರಚಾರದ ಭರಾಟೆಯಲ್ಲಿ ಹಿಂದೆ ಬಿದ್ದಿದೆ.
ಉಪಸಮರಕ್ಕೆ ಇನ್ನೇನು ಕೆಲವೇ ಕೆಲವು ದಿನಗಳು ಬಾಕಿ ಇದ್ದು, ಬಿಜೆಪಿ ಬಿರುಸಿನ ಪ್ರಚಾರ ನಡೆಸುತ್ತಿದೆ. ದಿನನಿತ್ಯ ತನ್ನ ಘಟಾನುಘಟಿ ನಾಯಕರು ಎಸ್.ಟಿ.ಸೋಮಶೇಖರ್ ಪರ ಮತ ಪ್ರಚಾರಕ್ಕೆ ಫೀಲ್ಡಿಗೆ ಇಳಿಸುತ್ತಿದೆ. ಸಿಎಂ ಯಡಿಯೂರಪ್ಪ, ಆರ್.ಅಶೋಕ್, ಶೋಭಾ ಕರಂದ್ಲಾಜೆ, ಡಿ.ವಿ.ಸದಾನಂದಗೌಡ, ಜಗದೀಶ್ ಶೆಟ್ಟರ್, ಸಿ.ಟಿ.ರವಿ, ನಳಿನ್ ಕುಮಾರ್ ಕಟೀಲ್ ಕಣಕ್ಕೆ ಇಳಿದಿದ್ದು, ಪ್ರತಿನಿತ್ಯ ಪ್ರಚಾರ ನಡೆಸುತ್ತಿದ್ದಾರೆ.
ಇತ್ತ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಪರ ಪ್ರಚಾರ ಕಾರ್ಯದಲ್ಲಿ ಹಿಂದೆ ಬಿದ್ದಿಲ್ಲ. ತಮ್ಮ ಅಗ್ರಗಣ್ಯ ನಾಯಕರನ್ನು ಕರೆಸಿ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಈಗಾಗಲೇ ಮಾಜಿ ಸಿಎಂ ಕುಮಾರಸ್ವಾಮಿ ಕ್ಷೇತ್ರದಲ್ಲಿ ಎರಡು ದಿನ ಭರ್ಜರಿ ರೋಡ್ ಶೋ ನಡೆಸಿ ಮತಯಾಚನೆ ನಡೆಸಿದ್ದು, ಉಳಿದಂತೆ ಪಕ್ಷದ ಶಾಸಕರೂ ಜವರಾಯಿಗೌಡರ ಪರ ಮತಬೇಟೆ ಮಾಡುತ್ತಿದ್ದಾರೆ. ಜೆಡಿಎಸ್ ವರಿಷ್ಠ ದೇವೇಗೌಡರೂ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ.