ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಬಂದರೆ ಒಳ್ಳೆಯದು. ಅತಂತ್ರ ಸ್ಥತಿ ನಿರ್ಮಾಣವಾಗಬಾರದು. ಅದರಿಂದ ರಾಜ್ಯಕ್ಕೆ ಒಳ್ಳೆಯದಾಗುವುದಿಲ್ಲ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ವಿಧಾನಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು. 15ನೇ ವಿಧಾನಸಭೆ ಹಾಗೂ ಬಜೆಟ್ ಅಧಿವೇಶನದ ಕೊನೆಯ ದಿನವಾದ ಇಂದು ವಿದಾಯ ಭಾಷಣ ಮಾಡಿದ ಅವರು, ದೇಶದ ರಾಜಕಾರಣದಲ್ಲಿ ಎನ್ಡಿಎ, ಯುಪಿಎ ಮೈತ್ರಿಕೂಟಗಳ ಸರ್ಕಾರ ರಚನೆಯಾದ ನಂತರ ಯಾವುದೇ ಒಂದು ಪಕ್ಷಕ್ಕೆ ಸ್ಪಷ್ಟ ಬಹುಮತ ನಿರೀಕ್ಷಿಸುವುದು ಕಷ್ಟವಾಗಿದೆ. ಆದರೆ, ಸಮ್ಮಿಶ್ರ ಸರ್ಕಾರವಿರಲಿ, ಏಕಪಕ್ಷದ ಸರ್ಕಾರವೇ ಇರಲಿ, ಮತದಾರರ ಹಿತ ಕಾಪಾಡುವುದು ಮುಖ್ಯವಾಗಬೇಕು ಎಂದು ಹೇಳಿದರು.
ಇತ್ತೀಚಿನ ವರ್ಷಗಳಲ್ಲಿ ಶ್ರೀಮಂತರು ಮತ್ತು ಬಡವರ ನಡುವಿನ ಕಂದಕ ಹೆಚ್ಚಾಗುತ್ತಿದೆ. ಅದನ್ನು ಕಡಿಮೆ ಮಾಡಲು ಜನಪ್ರತಿನಿಧಿಗಳು ಕೆಲಸ ಮಾಡಬೇಕು. ಇಂದು ಜಾತಿ, ಭೇದಕ್ಕಿಂತ ವರ್ಗಭೇದ ಹೆಚ್ಚಾಗಿದೆ. ಹಲವು ಸವಾಲುಗಳ ನಡುವೆಯೂ ಉತ್ತಮ ಮತ್ತು ಯಶಸ್ವಿ ಆಡಳಿತ ನೀಡಿದ್ದೇವೆ. ತಮಗೆ ದೊರೆತ ಅವಕಾಶದಲ್ಲಿ ನೆಲ, ಜಲ, ಜನರ ರಕ್ಷಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಪ್ರವಾಹ, ಕೋವಿಡ್ ಬಿಕ್ಕಟ್ಟಿನಂತಹ ಹಲವು ಸವಾಲುಗಳನ್ನು ಸಮರ್ಥವಾಗಿ ಎದುರಿಸಿದ್ದೇವೆ. ಹಣಕಾಸಿನ ಕೊರತೆ ಇದ್ದಾಗಲೂ ಆರ್ಥಿಕ ಶಿಸ್ತು ಕಾಪಾಡಿಕೊಂಡು ಬರಲಾಗಿದೆ. ಕೇಂದ್ರ ಸರ್ಕಾರ ಕಷ್ಟಕಾಲದಲ್ಲಿ ನಮ್ಮ ಸಹಾಯಕ್ಕೆ ಬಂದಿದೆ. ಡಬಲ್ ಎಂಜಿನ್ ಸರ್ಕಾರ ಇದ್ದರೆ ಒಳ್ಳೆಯದು ಎಂಬುದಕ್ಕೆ ಇದೊಂದು ನಿದರ್ಶನ ಎಂದರು.
15ನೇ ವಿಧಾನಸಭೆ ಅವಧಿಯಲ್ಲಿ 38-39 ಮಸೂದೆಗಳನ್ನು ಅಂಗೀಕರಿಸಲಾಗಿದೆ. ಅನಗತ್ಯ ಹಾಗೂ ನಿರುಪಯುಕ್ತ ಕಾಯ್ದೆಗಳನ್ನು ರದ್ದುಪಡಿಸಲಾಗಿದೆ, ಇಲ್ಲವೇ ತಿದ್ದುಪಡಿ ಮಾಡಲಾಗಿದೆ. ಜನರ ಸಂಕಷ್ಟಕ್ಕೆ ಸ್ಪಂದಿಸುವ ರೀತಿಯಲ್ಲಿ ನಮ್ಮ ಇತಿಮಿತಿಗಳೊಳಗೆ ಸ್ಪಂದಿಸಿದ್ದೇವೆ ಎಂದು ಹೇಳಿದರು.
ಪ್ರಜಾಪ್ರಭುತ್ವದ ದೇಗುಲವಾದ ಈ ಸದನಕ್ಕೆ ಜನರಿಂದ ಆಯ್ಕೆಯಾಗಿ ಬಂದವರು ಅತ್ಮಸಾಕ್ಷಿಯಂತೆ ಕೆಲಸ ಮಾಡಬೇಕು. ನಮ್ಮ ಗೆಲುವಿಗಾಗಿ ದುಡಿದವರನ್ನು ಮರೆಯಬಾರದು. ಜನಮೆಚ್ಚಿ ಹೌದು ಹೌದು ಎನ್ನುವಂತೆ ಕೆಲಸ ಮಾಡುವುದು ಅತ್ಯಗತ್ಯ. ಮುಂಬರುವ ಚುನಾವಣೆಯಲ್ಲಿ ನಾವು ನೀವು ಗೆದ್ದುಬಂದು ಜನತೆಗೆ ಒಳ್ಳೆಯದು ಮಾಡೋಣ. ನಮ್ಮನ್ನು ಆಯ್ಕೆ ಮಾಡಿದವರನ್ನು ಯಾವುದೇ ಕಾರಣಕ್ಕೂ ಮರೆಯಬಾರದು ಎಂದು ಕಿವಿಮಾತು ಹೇಳಿದರು.
ಸಭಾಧ್ಯಕ್ಷರಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ. ಸದನದ ಘನತೆ ಹೆಚ್ಚಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಡಳಿತಾತ್ಮಕವಾಗಿ ಹಲವು ಸುಧಾರಣೆ ತಂದಿದ್ದಾರೆ. ನೀರಾವರಿಗೆ ಹೆಚ್ಚು ಒತ್ತು ನೀಡಿದ್ದಾರೆ. ಅವರ ಶ್ರಮಕ್ಕೆ ಮಂತ್ರಿಮಂಡಲದ ಎಲ್ಲ ಸದಸ್ಯರು ಬೆಂಬಲವಾಗಿ ನಿಂತು ನಾಡಿನ ಒಳಿತಿಗೆ ಶ್ರಮಿಸಿದ್ದಾರೆ. ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಅವರು ಉತ್ತಮ ಆಡಳಿತ ನೀಡಿದ್ದಾರೆ. ಅವರು ನಮ್ಮೆಲ್ಲರಿಗೆ ಪ್ರೇರಣೆಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ವಿಧಾನಸಭೆ ಅವಧಿಯಲ್ಲಿ 8 ಮಂದಿ ಸದಸ್ಯರು ಅಕಾಲಿಕ ಮರಣ ಹೊಂದಿದ್ದಾರೆ. ಅವರನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ ಎಂದು ಹೇಳಿದರು.