ಬೆಂಗಳೂರು: "ರಾಜಧಾನಿ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ (ನ್ಯಾಷನಲ್ ಲಾ ಸ್ಕೂಲ್) ರಾಜ್ಯದ ವಿದ್ಯಾರ್ಥಿಗಳಿಗೆ ಕಾನೂನಿನನ್ವಯ ಮೀಸಲಾತಿ ಕಲ್ಪಿಸುವ ಕುರಿತು ರಾಜ್ಯದ ನಿಲುವು ಸ್ಪಷ್ಟವಾಗಿದೆ. ನಮ್ಮ ವಿದ್ಯಾರ್ಥಿಗಳಿಗೆ ಮೀಸಲಾತಿ ಕಲ್ಪಿಸಲು ಸರ್ಕಾರ ಬದ್ಧ" ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ವಿಧಾನಸಭೆಯಲ್ಲಿ ತಿಳಿಸಿದರು. ಇಂದು ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಶಾಸಕ ಎಸ್.ಸುರೇಶ್ ಕುಮಾರ್ ಅವರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.
"ಈ ವಿಷಯ ಫೆ.24 ರಂದು ಸುಪ್ರೀಂ ಕೋರ್ಟ್ ಮುಂದೆ ಬರಲಿದೆ. ದೇಶದ ಮುಖ್ಯ ನ್ಯಾಯಮೂರ್ತಿಗಳು ಸಹ ನಮ್ಮ ಬೇಡಿಕೆಗೆ ಪೂರಕ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಈ ವಿಚಾರ ನ್ಯಾಯಾಲಯದ ಮುಂದೆ ಬಂದಾಗ ವಾದಿಸಲು ಖ್ಯಾತ ನ್ಯಾಯವಾದಿ ತುಷಾರ್ ಮೆಹ್ತಾ ಅವರನ್ನು ಕರ್ನಾಟಕ ನೇಮಿಸಿದೆ" ಎಂದರು.
"ಕನ್ನಡದ ವಿದ್ಯಾರ್ಥಿಗಳಿಗೆ ಶೇ.25ರಷ್ಟು ಮೀಸಲಾತಿ ನೀಡುವ ಕುರಿತು ನ್ಯಾಯಾಲಯದ ಅಭಿಪ್ರಾಯ ಗಮನಿಸೋಣ. ನಂತರ ನಮ್ಮ ಮಕ್ಕಳ ಹಿತಕ್ಕಾಗಿ ಏನು ಮಾಡಬೇಕು ಎಂಬುದನ್ನು ಯೋಚಿಸೋಣ. ಕನ್ನಡದ ಮಕ್ಕಳ ಹಿತ ಕಾಪಾಡುವುದಕ್ಕೆ ಸರ್ಕಾರ ಬದ್ಧವಾಗಿದೆ" ಎಂದು ಸಚಿವರು ತಿಳಿಸಿದರು.
ಇದಕ್ಕೂ ಮುನ್ನ ಮಾಜಿ ಸಚಿವ ಸುರೇಶ್ ಕುಮಾರ್ ಮಾತನಾಡಿ, "ನ್ಯಾಷನಲ್ ಲಾ ಸ್ಕೂಲ್‌ನಲ್ಲಿ ಕರ್ನಾಟಕದ ವಿದ್ಯಾರ್ಥಿಗಳಿಗೆ ಕಾನೂನಿನ ಅನ್ವಯ ಮೀಸಲಾತಿ ನೀಡುತ್ತಿಲ್ಲ ಎಂದು ಹೇಳಿದರು. ನ್ಯಾಷನಲ್ ಲಾ ಸ್ಕೂಲ್‌ನಲ್ಲಿ ಕನ್ನಡದ ಮಕ್ಕಳಿಗೆ ಶೇ 25ರಷ್ಟು ಮೀಸಲಾತಿ ನೀಡಬೇಕು ಎಂಬ ಕಾನೂನನ್ನು ಸದನ ಮಾಡಿದೆ. ಆದರೆ ಕಾಲೇಜಿನ ಆಡಳಿತ ಮಂಡಳಿ ಇದನ್ನು ಕಳೆದೆರಡು ವರ್ಷಗಳಿಂದ ಪಾಲಿಸುತ್ತಿಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದರು.
"ನಾವು ಜಾಗ ನೀಡಿ ಈ ಕಾಲೇಜು ಸ್ಥಾಪಿಸಿದ್ದೇವೆ. ರಾಜ್ಯದ ಈ ಸೌಜನ್ಯಕ್ಕೆ ಪ್ರತಿಯಾಗಿ ನಮ್ಮ ಮಕ್ಕಳಿಗೆ ಸ್ಥಾನ ನೀಡುವಿಕೆಯಲ್ಲಿ ನಿಗದಿತ ಮೀಸಲಾತಿ ಅನುಸರಿಸದೇ ಇದ್ದರೆ ಹೇಗೆ? ಬೇರೆ ರಾಜ್ಯಗಳಲ್ಲಿನ ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳು ಹೀಗೆಯೇ ನಡೆದುಕೊಳ್ಳುತ್ತವೆಯೇ? ಕರ್ನಾಟಕದಲ್ಲಿ ಮಾತ್ರ ಏಕೆ ಹೀಗೆ ಎಂದು ಪ್ರಶ್ನಿಸಿದರು. ಈ ಸಂಸ್ಥೆಗೆ 23 ಎಕರೆ ಜಾಗ ಹಾಗೂ 22 ಕೋಟಿ ರೂ. ಅನುದಾನವನ್ನು ಕರ್ನಾಟಕ ಸರ್ಕಾರ ನೀಡಿದೆ. ಈಗ ನಮ್ಮ ಮಕ್ಕಳಿಗೆ ಇಲ್ಲಿ ಸೀಟು ನೀಡುತ್ತಿಲ್ಲ" ಎಂದು ವಿವರಿಸಿದರು.
ಸುರೇಶ್ ಕುಮಾರ್ ಮಾತಿಗೆ ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ಧ್ವನಿಗೂಡಿಸಿ, "ಕರ್ನಾಟಕ ಸರ್ಕಾರದ ನಿಯಂತ್ರಣವೇ ನಮ್ಮ ಮೇಲಿಲ್ಲ ಎನ್ನುವಂತೆ ನ್ಯಾಷನಲ್ ಲಾ ಸ್ಕೂಲ್ ವರ್ತನೆಯಿದೆ" ಎಂದರು. ಇದೇ ವೇಳೆ ಕಾಂಗ್ರೆಸ್ ಸದಸ್ಯ ಕೃಷ್ಣ ಬೈರೇಗೌಡ ಕೂಡ ಸುರೇಶಕುಮಾರ್ ಮಾತನ್ನು ಬೆಂಬಲಿಸಿ, "ಕಾನೂನುಬದ್ಧವಾಗಿ ಸರ್ಕಾರ ಹೆಜ್ಜೆಯಿಟ್ಟು ಕನ್ನಡದ ಮಕ್ಕಳಿಗೆ ಸೀಟು ದೊರೆಯುವಂತೆ ನೋಡಿಕೊಳ್ಳಬೇಕು" ಎಂದು ಆಗ್ರಹಿಸಿದರು. ಇದೇ ವೇಳೆ, "ಈ ವಿಷಯ ಸೂಕ್ಷ್ಮವಾಗಿದೆ. ಶಾಲೆಯ ಆಡಳಿತ ಮಂಡಳಿಗೆ ಭಾರತದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳೇ ಅಧ್ಯಕ್ಷರಾಗಿರುವುದರಿಂದ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು" ಎಂದು ಸಲಹೆ ನೀಡಿದರು.
ಇದನ್ನೂ ಓದಿ:ಭೂಸ್ವಾಧೀನ ಪರಿಹಾರ ಅಕ್ರಮ ಆರೋಪ: ನಿರಾಣಿ-ಮರಿತಿಬ್ಬೇಗೌಡ ನಡುವೆ ಜಟಾಪಟಿ