ಬೆಂಗಳೂರು: ಲಿಂಗಾಯತ ಪಂಚಮಸಾಲಿ ಸಮಯದಾಯವನ್ನ ಒಬಿಸಿಗೆ ಸೇರಿಸಬೇಕೆಂದು ಆಗ್ರಹಿಸಲಾಗಿತ್ತು. ಆದರೆ, ಜು. 26 ರಂದು ಸಿಎಂ ರಾಜೀನಾಮೆ ನೀಡಲಿದ್ದಾರೆ ಎಂದು ಮಾಹಿತಿ ಬರುತ್ತಿದೆ. ಒಂದು ವೇಳೆ ಹೊಸ ಮುಖ್ಯಮಂತ್ರಿ ಬಂದರೆ ಸೇರ್ಪಡೆಗೊಳಿಸುವ ಪ್ರಕ್ರಿಯೆ ಸುಮಾರು 6 ತಿಂಗಳು ತಡವಾಗುತ್ತದೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.
ಲಿಂಗಾಯತ ಪಂಚಮಸಾಲಿ ಸಮಯದಾಯವನ್ನ ಒಬಿಸಿಗೆ ಸೇರಿಸಿ, ಕೆಲ ತಿಂಗಳಲ್ಲಿ ಮೀಸಲಾತಿ ನೀಡುತ್ತೇವೆ ಎಂದು ಸಿಎಂ ಸದನದಲ್ಲಿ ಭರವಸೆ ಕೊಟ್ಟಿದ್ದರು. ಹೀಗಾಗಿ ಮಾರ್ಚ್ 15ರಂದು ಪ್ರತಿಭಟನೆಯನ್ನು ಅಂತ್ಯಗೊಳಿಸಿದೆವು. ಆದರೆ, ಈಗ ಸಿಎಂ ಬದಲಾವಣೆ ಮಾತು ಕೇಳಿ ಬರುತ್ತಿದೆ.
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆಗೆ ಪತ್ರ ಬರೆದು ಬಿಎಸ್ವೈ ತಮ್ಮ ಅವಧಿಯಲ್ಲೇ ನಮ್ಮ ಬೇಡಿಕೆ ಈಡೇರಿಸಿ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿ ಎಂದು ಒತ್ತಾಯಿಸಲಾಗಿದೆ. ಇನ್ನು ಈ ಪತ್ರಕ್ಕೆ ಅಧ್ಯಕ್ಷರಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎಂದು ಅವರು ಹೇಳಿದರು.
ಯಡಿಯೂರಪ್ಪ ಅವರು ಸದನದಲ್ಲಿ ನಮ್ಮ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಅದನ್ನ ಯಡಿಯೂರಪ್ಪಗೆ ನೆನಪು ಮಾಡುವ ಕೆಲಸ ಮಾಡಲಾಗುವುದು. ವಿಶೇಷ ಸಚಿವ ಸಂಪುಟ ಸಭೆ ಕರೆದು ಬೇಡಿಕೆಗಳ ಈಡೇರಿಕೆ ಬಗ್ಗೆ ತಿಳಿಸಲಿ. ಆದರೆ, ನಾನು ಸಿಎಂ ಬಳಿ ಹೋಗುವುದಿಲ್ಲ. ಬಹುತೇಕ ಸ್ವಾಮೀಜಿಗಳು ಈಗಾಗಲೇ ಬೇರೆ ಕಾರಣಕ್ಕೆ ಭೇಟಿ ಕೊಟ್ಟಿದ್ದಾರೆ. ಯಡಿಯೂರಪ್ಪ ವಿಚಾರದಲ್ಲಿ ನಮ್ಮದು ತಟಸ್ಥ ನಿಲುವು ಎಂದರು.