ಕರ್ನಾಟಕ

karnataka

ನನ್ನನ್ನೂ ಸೇರಿ ಎಲ್ಲರೂ ಸರ್ಕಾರಿ‌ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ವ್ಯವಸ್ಥೆ ರೂಪಿಸಬೇಕಿದೆ: ಸಿಎಂ ಸಿದ್ದರಾಮಯ್ಯ

By

Published : Jun 12, 2023, 9:14 PM IST

ಜಯದೇವ ಆಸ್ಪತ್ರೆಯಲ್ಲಿ ಎಲ್ಲ ರಾಜಕಾರಣಿಗಳು ಚಿಕಿತ್ಸೆ ಪಡೆಯುತ್ತಾರೆ. ಆ ರೀತಿಯ ಗುಣಮಟ್ಟ, ಶುಚಿತ್ವ, ಶಿಸ್ತಿನ ವ್ಯವಸ್ಥೆಯನ್ನು ಇತರ ಸರ್ಕಾರಿ ಆಸ್ಪತ್ರೆಗಳಲ್ಲೂ ರೂಪಿಸಲು ಸಾಧ್ಯವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

CM Siddaramaiah
ಸಿಎಂ ಸಿದ್ದರಾಮಯ್ಯ

ಬೆಂಗಳೂರು:ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮತ್ತು ಸೇವಾ ಗುಣಮಟ್ಟವನ್ನು ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ಆರೋಗ್ಯ ಇಲಾಖೆ ಮತ್ತು ಇಂಡಿಯನ್ ಯುನಿಟಿ ಸೆಂಟರ್ ಸಹಯೋಗದಲ್ಲಿ ನಡೆದ ನೈಂಟಿಗೇಲ್ ಶುಶ್ರೂಷ ಅಧಿಕಾರಿಗಳ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ನನ್ನನ್ನೂ ಸೇರಿ ಎಲ್ಲರೂ ಸರ್ಕಾರಿ‌ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವಂತಹ ವ್ಯವಸ್ಥೆ ರೂಪಿಸಬೇಕಿದೆ. ಇದಕ್ಕೆ ಸರ್ಕಾರದ ಜೊತೆಗೆ ಆರೋಗ್ಯ ಸಿಬ್ಬಂದಿ ಇಚ್ಛಾಶಕ್ತಿಯಿಂದ ಒಟ್ಟಾಗಿ ಕೆಲಸ ಮಾಡುವ ಅಗತ್ಯ ಎಂದು ಹೇಳಿದರು.

ಜಯದೇವ ಆಸ್ಪತ್ರೆ ಒಂದು ಮಾದರಿ. ಈ ಆಸ್ಪತ್ರೆಯಲ್ಲಿ ಎಲ್ಲ ರಾಜಕಾರಣಿಗಳು ಚಿಕಿತ್ಸೆ ಪಡೆಯುತ್ತಾರೆ. ಆ ರೀತಿಯ ಗುಣಮಟ್ಟ, ಶುಚಿತ್ವ, ಶಿಸ್ತು ಜಯದೇವ ಆಸ್ಪತ್ರೆಯಲ್ಲಿದೆ. ಇಲ್ಲಿರುವ ವ್ಯವಸ್ಥೆಯನ್ನೇ ಇತರೆ ಸರ್ಕಾರಿ ಆಸ್ಪತ್ರೆಗಳಲ್ಲೂ ರೂಪಿಸಲು ಸಾಧ್ಯವಿದೆ. ಇದಕ್ಕೆ ಬೇಕಾಗಿರುವುದು ಪ್ರಾಮಾಣಿಕತೆ ಮತ್ತು ಸೇವಾ ಮನೋಭಾವ ಹಾಗೂ ಶ್ರದ್ಧೆ ಮಾತ್ರ ಎಂದು ಪ್ರತಿಪಾದಿಸಿದರು.

"ಲೇಡಿ ವಿತ್ ದಿ ಲ್ಯಾಂಪ್" ಹೆಸರಾಗಿದ್ದ ಶುಶ್ರೂಷಕಿ ಫ್ಲಾರೆನ್ಸ್ ನೈಟಿಂಗೇಲ್ ಅವರ ಹೆಸರಿನ 21ನೇ ಸಾಲಿನ ಪ್ರಶಸ್ತಿ ಪಡೆದ ಎಲ್ಲರಿಗೂ ಅಭಿನಂದಿಸಿದ ಅವರು, ನರ್ಸಿಂಗ್ ವೃತ್ತಿ ಅತ್ಯಂತ ಪವಿತ್ರವಾಗಿದೆ. ರೋಗಿಗಳ ಎಲ್ಲಾ ರೀತಿಯ ಚಿಕಿತ್ಸೆಯ ನಿಜವಾದ ವಾರಸುದಾರರು ಶುಶ್ರೂಷಕಿಯರು. ಕಾಲ ಕಾಲಕ್ಕೆ ಶುಶ್ರೂಷಿಕಿಯರು ನಗುತ್ತಾ ಕೆಲಸ ಮಾಡಿದರೆ ಅರ್ಧ ಕಾಯಿಲೆ ಗುಣವಾಗುತ್ತದೆ. ಆತ್ಮವಿಶ್ವಾಸ ಬಹಳಷ್ಟು ರೋಗಕ್ಕೆ ಮದ್ದು. ನರ್ಸ್​ಗಳ ಸೇವಾ ಮನೋಭಾವ ಮತ್ತು ನಗು ರೋಗಿಗಳ ಆತ್ಮವಿಶ್ವಾಸ ಹೆಚ್ಚಿಸಿ ಗುಣಮುಖರಾಗಲು ನೆರವಾಗುತ್ತದೆ ಎಂದು ಹೇಳಿದರು.

ಜೆಮಿಮಲ್ ಕ್ರಿಸ್ಟೋಫರ್, ಆರ್.ಪ್ರಿಯದರ್ಶಿನಿ, ಶಶಿ ಕುಮಾರ್, ಜಾನ್ ಮಾರ್ಷಲ್, ಭುವನೇಶ್ವರಿ, ಪ್ರೆಸಿಲ್ಲಾ ರೋಡ್ರಿಗಸ್, ಭಾರತಿ ಪಾಟೀಲ್, ಎಂ.ಎಂ. ರತಿ, ಶೈಲಜ ಬಿ.ಎಂ, ಬಿ.ರೇಣುಕಾ, ಕವಿತಾ, ಡಾ.ಸಂಜಯ್ಎಂ ಪೀರಾಪುರ್ ಅವರಿಗೆ ಮುಖ್ಯಮಂತ್ರಿಗಳು ನೈಟಿಂಗೇಲ್ ಪ್ರಶಸ್ತಿಯನ್ನು ವಿತರಿಸಿ ಸನ್ಮಾನಿಸಿದರು.

250 ಇಂದಿರಾ ಕ್ಯಾಂಟೀನ್ ಪ್ರಾರಂಭಕ್ಕೆ ಸಿಎಂ ಸೂಚನೆ:ಮತ್ತೊಂದೆಡೆ, ಬೆಂಗಳೂರು ನಗರದ ಪ್ರತಿ ವಾರ್ಡ್​ಗೆ ಒಂದರಂತೆ ಕನಿಷ್ಠ 250 ಇಂದಿರಾ ಕ್ಯಾಂಟೀನ್ ಆರಂಭಿಸಲು ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಇಂದಿರಾ ಕ್ಯಾಂಟೀನ್​ಗಳ ಪುನಾರಂಭಕ್ಕೆ ಸಂಬಂಧಿಸಿದಂತೆ ಚರ್ಚಿಸಲಾಗಿದ್ದು, ಈವರೆಗೂ ಇಂದಿರಾ ಕ್ಯಾಂಟೀನ್​ಗೆ ಬಿಬಿಎಂಪಿ ವತಿಯಿಂದ ಶೇ.70 ಹಾಗೂ ಸರ್ಕಾರದಿಂದ ಶೇಕಡಾ 30ರಷ್ಟು ವೆಚ್ಚ ಭರಿಸಲಾಗುತ್ತಿತ್ತು. ಆದರೆ, ಈಗ ಬಿಬಿಎಂಪಿಯು ಶೇ.50ರಷ್ಟು ಮತ್ತು ಸರ್ಕಾರ ಶೇ.50ರಷ್ಟು ವೆಚ್ಚ ಭರಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಬೆಂಗಳೂರು ಹೊರತುಪಡಿಸಿ ರಾಜ್ಯದ ವಿವಿಧ ಕಡೆಗಳಲ್ಲಿ ಇಂದಿರಾ ಕ್ಯಾಂಟೀನ್ ವೆಚ್ಚದಲ್ಲಿ ಸರ್ಕಾರ ಶೇ.70ರಷ್ಟು ಮತ್ತು ಸ್ಥಳೀಯ ನಗರ ಸಭೆಗಳು ಶೇ.30ರಷ್ಟು ಭರಿಸಬೇಕೆಂಬ ನಿರ್ಧರಿಸಲಾಗಿದೆ. ರಾಜ್ಯದ ಯಾವೆಲ್ಲ ಸ್ಥಳಗಳಲ್ಲಿ ನೂತನವಾಗಿ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಬೇಕು ಎನ್ನುವ ಸ್ಥಳಗಳ ಪಟ್ಟಿಯನ್ನು ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ ಎ++ ನ್ಯಾಕ್ ಶ್ರೇಣಿಯ ಗರಿಮೆ: ಕುಲಪತಿ ಎಸ್ ಎಂ ಜಯಕರ್

ABOUT THE AUTHOR

...view details