ಬೆಂಗಳೂರು: ಜಯದೇವ ಹೃದ್ರೋಗ ಸಂಸ್ಥೆಯಿಂದ 52 ಲಕ್ಷ ಹೃದಯ ರೋಗಿಗಳಿಗೆ ಚಿಕಿತ್ಸೆ ನೀಡಿ ದಾಖಲೆ ನಿರ್ಮಿಸಲಾಗಿದೆ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್.ಮಂಜುನಾಥ್ ತಿಳಿಸಿದರು. ಜಯನಗರದ ಚಂದ್ರಗುಪ್ತ ಮೌರ್ಯ ಆಟದ ಮೈದಾನದಲ್ಲಿ ಶನಿವಾರ ರಕ್ಷಾ ಫೌಂಡೇಷನ್ನಿಂದ 11ನೇ ವರ್ಷದ ಸಮಾಜ ಸೇವಾ ಕಾರ್ಯಕ್ರಮದಲ್ಲಿ 10 ಸಾವಿರ ಮಕ್ಕಳಿಗೆ 1.5 ಲಕ್ಷ ಉಚಿತ ನೋಟ್ ಪುಸ್ತಕಗಳು, ಕಲಿತಾ ಪರಿಕರಗಳ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಾ. ಸಿ.ಎನ್. ಮಂಜುನಾಥ್, "ಜಯದೇವ ಸಂಸ್ಥೆಯ ಸೇವಾ ಮನೋಭಾವನೆಯಿಂದಾಗಿ ದಾಖಲೆ ನಿರ್ಮಿಸಲು ಸಾಧ್ಯವಾಗಿದೆ. ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು. ಶಿಕ್ಷಣ ಮತ್ತು ಸಂಸ್ಕಾರ ಬದುಕಿನ ಸೂತ್ರಗಳು. ಇದು ಕಂಪ್ಯೂಟರ್ ಲ್ಯಾಪ್ ಟಾಪ್ ಯುಗವಾಗಿ ಪರಿವರ್ತನೆಯಾಗಿದ್ದು, ಮಕ್ಕಳು ಪೆನ್ನು ಬಳಸಿ ಬರೆದರೆ ಮೆದುಳಿಗೆ ಒಳ್ಳೆಯದು" ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, "ಮಕ್ಕಳಿಗೆ ಶಿಕ್ಷಣಕ್ಕೆ ಬೇಕಾದ ಪುಸ್ತಕ, ಪರಿಕರಗಳನ್ನು ಒದಗಿಸಿದರೆ ವಿದ್ಯಾದಾನ ಮಾಡಿದಂತಾಗುತ್ತದೆ. ಅವಶ್ಯಕತೆ ಇರುವ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಬೇಕು. ವಿದ್ಯಾರ್ಥಿಗಳು ಉತ್ತಮ ಅಂಕಗಳಿಸಿ ಸಮಾಜಕ್ಕೆ ಮಾದರಿಯಾಗಬೇಕು. ಜ್ಞಾನರ್ಜನೆಗೆ ಶಿಕ್ಷಣವೇ ಮಾರ್ಗ. ಶಿಕ್ಷಣ ಪಡೆದವರು ನಮ್ಮ ದೇಶ, ಭಾಷೆ, ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಮರೆಯಬಾರದು" ಎಂದು ಹೇಳಿದರು.
ಇದನ್ನೂ ಓದಿ:ವೀಕೆಂಡ್ ವಿತ್ ರಮೇಶ್.. ಸಾಧಕರ ಸೀಟ್ಗೆ ಮತ್ತಷ್ಟು ಮೆರುಗು ತಂದುಕೊಟ್ಟ ಡಾ. ಮಂಜುನಾಥ್