ಕರ್ನಾಟಕ

karnataka

ETV Bharat / state

ಯುವ ಮನಸ್ಸು ಗೆಲ್ಲಲು ಸಜ್ಜಾದ ಕಾಂಗ್ರೆಸ್ ; ಜವಾಹರ್ ಬಾಲ ಮಂಚ್ ವೇದಿಕೆ ರಚನೆ

ಈಗಾಗಲೇ ಕೇರಳ, ಮಹಾರಾಷ್ಟ್ರ, ಪಂಜಾಬ್​ನಲ್ಲಿ ಬಾಲ ಮಂಚ್ ಕಾರ್ಯಾಚರಣೆ ಆರಂಭವಾಗಿದೆ. ನಾಲ್ಕನೇ ರಾಜ್ಯವಾಗಿ ಕರ್ನಾಟಕದಲ್ಲಿಯೂ ಈ ಒಂದು ತಂಡವನ್ನು ಈಗ ರಚಿಸಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆ, ತಾಲೂಕು, ಕ್ಷೇತ್ರವ್ಯಾಪ್ತಿ ಸಂಘಟನೆ ಆರಂಭವಾಗಲಿದೆ. ಮಕ್ಕಳಿಗಾಗಿಯೇ ಹಲವು ಕಾರ್ಯಕ್ರಮಗಳನ್ನೂ ಸಂಘಟಿಸಲಿರುವ ಮಂಚ್ ಪ್ರಬುದ್ಧ ವಯಸ್ಸಿನಲ್ಲೇ ಮಕ್ಕಳನ್ನ ಕಾಂಗ್ರೆಸ್​ನತ್ತ ಸೆಳೆಯುವ ಗುರಿ ಹೊಂದಿದೆ..

congress
ಕಾಂಗ್ರೆಸ್

By

Published : Aug 30, 2020, 8:19 PM IST

ಬೆಂಗಳೂರು :ಬಿಜೆಪಿಯ ಪ್ರಚಾರ ತಂತ್ರಕ್ಕೆ ಸೆಡ್ಡು ಹೊಡೆದು ಯುವಜನತೆಯನ್ನು ತಮ್ಮತ್ತ ಸೆಳೆಯಲು ಕಾಂಗ್ರೆಸ್ ಹೊಸದೊಂದು ಯೋಜನೆ ರೂಪಿಸಿದೆ. ಬಿಜೆಪಿಯ ಸಂಘಟನೆಯ ತಂತ್ರಗಾರಿಕೆಯನ್ನು ಮೀರಿ ಮುಂದುವರಿಯಲು ಚಿಂತನೆ ನಡೆಸಿರುವ ಕಾಂಗ್ರೆಸ್, ಮತದಾನ ಮಾಡುವ ವಯಸ್ಸಿಗೆ ಕಾಲಿರಿಸುವ ಯುವಕ-ಯುವತಿಯರನ್ನು ಸೆಳೆಯಲು ಮುಂದಾಗಿದೆ. ಈ ಮೂಲಕ ಬಿಜೆಪಿಗೆ ಸೆಡ್ಡು ಹೊಡೆಯುವ ರೀತಿ ಕಾಂಗ್ರೆಸ್ ಕೂಡ ತನ್ನದೊಂದು ಹೊಸ ಸಮೂಹ ರೂಪಿಸುತ್ತಿದೆ.

ಜವಾಹರ ಬಾಲ ಮಂಚ್:ಜವಾಹರ್ ಬಾಲ ಮಂಚ್ ಎಂಬ ವೇದಿಕೆಯನ್ನು ಕಾಂಗ್ರೆಸ್ ಪಕ್ಷ ದೇಶಾದ್ಯಂತ ಸ್ಥಾಪಿಸಲು ಮುಂದಾಗಿದೆ. ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲು ಮುಂದಾಗಿರುವ ರಾಷ್ಟ್ರೀಯ ಕಾಂಗ್ರೆಸ್ ಪ್ರತಿ ರಾಜ್ಯದಲ್ಲಿ ಜವಾಹರ ಬಾಲ ಮಂಚ್ ವೇದಿಕೆ ಸ್ಥಾಪಿಸುತ್ತಿದೆ. ಈ ಮೂಲಕ ಪಕ್ಷಕ್ಕೆ ತಳಮಟ್ಟದ ಸಂಘಟನೆಗೆ ಅನುಕೂಲವಾಗುವ ಯುವ ಹಾಗೂ ಬಾಲ ಮನಸ್ಸುಗಳನ್ನು ಸೆಳೆಯುವ ಪ್ರಯತ್ನಕ್ಕೆ ಮುಂದಾಗಿದೆ.

ಜವಾಹರ ಬಾಲ ಮಂಚ್ ವೇದಿಕೆಯ ಪದಾಧಿಕಾರಿಗಳ ಪಟ್ಟಿ

10 ರಿಂದ 17 ವರ್ಷ ವಯೋಮಾನದ ಮಕ್ಕಳೇ ಈ ವೇದಿಕೆಯ ಕಾರ್ಯ ಚಟುವಟಿಕೆಯ ಟಾರ್ಗೇಟ್‌. ಬಾಲ ಹಾಗೂ ಯುವ ಸಮುದಾಯ ಈ ದೇಶ ಕಟ್ಟಿ ಬೆಳೆಸಿದವರ ಮಾಹಿತಿಯನ್ನು ಸಮರ್ಪಕವಾಗಿ ಪಡೆಯುತ್ತಿಲ್ಲ. ಬಿಜೆಪಿ ಪಕ್ಷ ಬಿಂಬಿಸುತ್ತಿರುವ ಮಾಹಿತಿಯನ್ನು ಆಧರಿಸಿ ಮುನ್ನಡೆಯುತ್ತಿದೆ. ಇದೇ ಸ್ಥಿತಿ ಮುನ್ನಡೆದರೆ ದೇಶಕ್ಕೆ ಅದು ಮಾರಕವಾಗಲಿದೆ. ದೇಶದ ಐಕ್ಯತೆ, ರಾಷ್ಟ್ರಾಭಿಮಾನದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಅನಿವಾರ್ಯ ಇರುವ ಜೊತೆಗೆ ಇದಕ್ಕೆ ನಿಜವಾಗಿಯೂ ಹೋರಾಡಿದ ವ್ಯಕ್ತಿಗಳನ್ನು ಪರಿಚಯಿಸುವ ಅಗತ್ಯ ಕೂಡ ಇದೆ.

ಸ್ವಾತಂತ್ರ್ಯ ಹೋರಾಟದಲ್ಲಿ ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸಿದ್ದ ಮಹಾತ್ಮ ಗಾಂಧಿ, ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಸೇರಿ ಹಲವು ಹೋರಾಟಗಾರರ ಬಗ್ಗೆ ಮನವರಿಕೆ ಮಾಡಿಕೊಡುವ ಜೊತೆಗೆ, ಇಂದು ರಾಷ್ಟ್ರವನ್ನು ಆಳುತ್ತಿರುವ ಬಿಜೆಪಿ ಇಂಥವರನ್ನೇ ಮರೆಸುವ ತಂತ್ರಗಾರಿಕೆ ಮಾಡುತ್ತಿದೆ. ತಾವು ಹೇಳಿದ್ದನ್ನು ವಿರೋಧಿಸುವವರನ್ನು ದೇಶದ್ರೋಹಿಗಳು ಎಂಬ ಭಾವನೆ ಮೂಡುವ ಸ್ಥಿತಿ ಉಂಟು ಮಾಡುತ್ತಿದೆ. ಇದನ್ನು ತೊಡೆದು ಹಾಕುವ ಜೊತೆಗೆ ಯುವ ಪ್ರಜೆಗಳಲ್ಲಿ ಹಿಂದಿನ ನೈಜ ಸ್ವಾತಂತ್ರ್ಯ ಹೋರಾಟದ ಹಾಗೂ ಹೋರಾಟಗಾರರ ಕುರಿತು ಸತ್ಯಾಂಶವನ್ನು ವಿವರಿಸುವ ಕಾರ್ಯ ಮಾಡಲು ಕಾಂಗ್ರೆಸ್ ಪಕ್ಷ ಮುಂದಾಗಿದೆ.

ಈಗಾಗಲೇ ಕೇರಳ, ಮಹಾರಾಷ್ಟ್ರ, ಪಂಜಾಬ್​ನಲ್ಲಿ ಬಾಲ ಮಂಚ್ ಕಾರ್ಯಾಚರಣೆ ಆರಂಭವಾಗಿದೆ. ನಾಲ್ಕನೇ ರಾಜ್ಯವಾಗಿ ಕರ್ನಾಟಕದಲ್ಲಿಯೂ ಈ ಒಂದು ತಂಡವನ್ನು ಈಗ ರಚಿಸಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆ, ತಾಲೂಕು, ಕ್ಷೇತ್ರವ್ಯಾಪ್ತಿ ಸಂಘಟನೆ ಆರಂಭವಾಗಲಿದೆ. ಮಕ್ಕಳಿಗಾಗಿಯೇ ಹಲವು ಕಾರ್ಯಕ್ರಮಗಳನ್ನೂ ಸಂಘಟಿಸಲಿರುವ ಮಂಚ್ ಪ್ರಬುದ್ಧ ವಯಸ್ಸಿನಲ್ಲೇ ಮಕ್ಕಳನ್ನ ಕಾಂಗ್ರೆಸ್​ನತ್ತ ಸೆಳೆಯುವ ಗುರಿ ಹೊಂದಿದೆ. ಈವರೆಗೂ ಮತದಾರರನ್ನು ಮಾತ್ರವೇ ಸೆಳೆಯುವ ಕಾರ್ಯದಲ್ಲಿ ನಿರತವಾಗಿದ್ದ ರಾಜಕೀಯ ಪಕ್ಷಗಳು ಇದೀಗ ಭಾವಿ ಮತದಾರರನ್ನು ಸೆಳೆಯಲು ಇಂಥದ್ದೊಂದು ತಂತ್ರಗಾರಿಕೆ ಆರಂಭಿಸುತ್ತಿರುವುದು ವಿಶೇಷ.

ವೇದಿಕೆ ವಿವರ :ಜವಾಹರ ಬಾಲ ಮಂಚ್ ವೇದಿಕೆ ರಾಜ್ಯ ಅಧ್ಯಕ್ಷರಾಗಿ ಸೈರಿಲ್ ಪ್ರಭು ಜೆ, ರಾಜ್ಯ ಉಪಾಧ್ಯಕ್ಷರಾಗಿ ತ್ರಿಭುವನ್ ಗೌಡ ಆಯ್ಕೆಯಾಗಿದ್ದಾರೆ. ರಾಜ್ಯ ಸಮನ್ವಯಕಾರರಾಗಿ ಏಳು ಮಂದಿಯನ್ನು ಆಯ್ಕೆ ಮಾಡಲಾಗಿದೆ. ಪ್ರದೀಪ್ ಟಿ ಎಸ್, ಸೈಯದ್ ಸಿದ್ದಿಕ್, ವಿದ್ಯಾ ಎಸ್ ಡಿ, ಎಂಎಸ್‌ಎನ್ ಮೆನನ್, ಜಸ್ವಿತಾ ಪಿ ಕ್ಯು, ಮೊಹಮ್ಮದ್ ರಫಿ ಜಿ ಕೆ ಹಾಗೂ ರಮ್ಯ ಶಂಕರ್ ಸಮನ್ವಯಕಾರರಾಗಿದ್ದಾರೆ. ಆದರೆ, ಮುಂದಿನ ದಿನಗಳಲ್ಲಿ ರಾಜ್ಯವೂ ಸೇರಿ ದೇಶಾದ್ಯಂತ ಹಾಗೂ ಯುವ ಮನಸ್ಸುಗಳನ್ನು ಗೆಲ್ಲಲು ಕಾಂಗ್ರೆಸ್ ಪಕ್ಷ ಮುಂದಾಗಿದೆ. ಈ ವೇದಿಕೆ ಮೂಲಕ ಯಾವ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ABOUT THE AUTHOR

...view details