ಕರ್ನಾಟಕ

karnataka

ETV Bharat / state

ಶಂಕಿತರ ಖಾತೆಯಲ್ಲಿ ಲಕ್ಷ ಲಕ್ಷ ಹಣ ! ಜಾರಕಿಹೊಳಿ ಸಿ.ಡಿ ಪ್ರಕರಣ ದಿನಕ್ಕೊಂದು ತಿರುವು - ಬಿಜೆಪಿ -ಕಾಂಗ್ರೆಸ್ ಟ್ವೀಟ್ ವಾರ್​

ಸಿಡಿ ಪ್ರಕರಣದ ಶಂಕಿತನೊಬ್ಬ ತನ್ನ ಖಾತೆಗೆ ಹಣ ಜಮೆ ಮಾಡುವುದರ ಜತೆಗೆ ತನ್ನ ಅಣ್ಣನ ಖಾತೆಗೂ ಹಣ ಹಾಕಿದ್ದಾನೆ. ಒಟ್ಟಾರೆ ಅಣ್ಣನ ಖಾತೆಯಲ್ಲಿ ಬರೋಬರಿ 40 ಲಕ್ಷ ರೂ. ಇರುವುದು ಪತ್ತೆಯಾಗಿದೆ. ಇನ್ನೊಬ್ಬ ಶಂಕಿತ ಎರಡು ದಿನಕೊಮ್ಮೆ ಬ್ಯಾಂಕ್​ಗೆ ಹೋಗಿ 5 ಲಕ್ಷ ರೂ.ನಂತೆ ಜಮೆ ಮಾಡಿರುವುದು ಕಂಡು ಬಂದಿದ್ದು, ಮತ್ತೊಬ್ಬ ಶಂಕಿತನ ಖಾತೆಯಲ್ಲಿ 26 ಲಕ್ಷ ರೂ ಪತ್ತೆಯಾಗಿರುವುದಾಗಿ ಮೂಲಗಳು ತಿಳಿಸಿವೆ.

Jarkiholi CD case
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ

By

Published : Mar 18, 2021, 5:10 AM IST

ಬೆಂಗಳೂರು: ತಿಂಗಳ ಸಂಬಳ ಪಡೆಯುತ್ತಿರುವ ಶಂಕಿತರು ಮತ್ತವರ ಕುಟುಂಬಸ್ಥರ ಬ್ಯಾಂಕ್ ಖಾತೆಯಲ್ಲಿ ಲಕ್ಷಾಂತರ ರೂ. ಹಣ ಇರುವುದು ಪತ್ತೆಯಾಗಿದ್ದು, ಸಿಡಿ ಪ್ರಕರಣವು ಹೊಸ ತಿರುವು ಪಡೆದುಕೊಂಡಿದೆ.

ವಿಶೇಷ ತನಿಖಾ ತಂಡ (ಎಸ್‌ಐಟಿ) ಮಹತ್ವದ ವಿಷಯಗಳನ್ನು ಕಲೆ ಹಾಕಿ, ಶಂಕಿತರು ಹೊಂದಿದ್ದ ಬೆಂಗಳೂರು ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ 8 ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದ್ದು, ಒಂದು ತಿಂಗಳ ಒಳಗೆ ಲಕ್ಷಾಂತರ ರೂ. ಜಮೆಯಾಗಿರುವುದು ಕಂಡು ಬಂದಿದೆ. ಇದರ ಆಧಾರದ ಮೇಲೆ ಶಂಕಿತ ಅರುಣ್ಣ್​ಗೆ ಸೇರಿದ ಲಗ್ಗೆರೆಯಲ್ಲಿನ ನಿವಾಸ ಹಾಗೂ ಮಂಜುನಾಥ ನಗರದ ನರೇಶ್ ಮನೆ ಮೇಲೆ ಎಸ್ಐಟಿ ತಂಡ ದಾಳಿ ನಡೆಸಿದೆ.ಈ ವೇಳೆ ಕುಟುಂಬಸ್ಥರನ್ನು ವಿಚಾರಣೆ ನಡೆಸಿ, ಮಾಹಿತಿ ಪಡೆದುಕೊಂಡಿದ್ದು. ಬ್ಯಾಂಕ್ ಖಾತೆಯಲ್ಲಿರುವ ಹಣದ ಬಗ್ಗೆ ದಾಖಲೆ ಪರಿಶೀಲಿಸಿದ್ದಾರೆ.

ಅಣ್ಣನ ಖಾತೆಗೆ ಹಣ ರವಾನೆ

ಸಿಡಿ ಪ್ರಕರಣದ ಶಂಕಿತನೊಬ್ಬ ತನ್ನ ಖಾತೆಗೆ ಹಣ ಜಮೆ ಮಾಡುವುದರ ಜತೆಗೆ ತನ್ನ ಅಣ್ಣನ ಖಾತೆಗೂ ಹಣ ಹಾಕಿದ್ದಾನೆ. ಒಟ್ಟಾರೆ ಅಣ್ಣನ ಖಾತೆಯಲ್ಲಿ ಬರೋಬರಿ 40 ಲಕ್ಷ ರೂ. ಇರುವುದು ಪತ್ತೆಯಾಗಿದೆ. ಇನ್ನೊಬ್ಬ ಶಂಕಿತ ಎರಡು ದಿನಕೊಮ್ಮೆ ಬ್ಯಾಂಕ್​ಗೆ ಹೋಗಿ 5 ಲಕ್ಷ ರೂ.ನಂತೆ ಜಮೆ ಮಾಡಿರುವುದು ಕಂಡು ಬಂದಿದ್ದು, ಮತ್ತೊಬ್ಬ ಶಂಕಿತನ ಖಾತೆಯಲ್ಲಿ 26 ಲಕ್ಷ ರೂ ಪತ್ತೆಯಾಗಿರುವುದಾಗಿ ಮೂಲಗಳು ತಿಳಿಸಿವೆ.

ಮತ್ತೆ ಮೂವರು ಎಸ್ಐಟಿ ವಶ

ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತಂಡ ಮತ್ತೆ ಮೂವರನ್ನು ವಶಕ್ಕೆ ಪಡೆದಿದೆ. ಲಗ್ಗೆರೆ, ಶಂಕರಮಠ ಮತ್ತು ಕಾಮಾಕ್ಷಿಪಾಳ್ಯ ನಿವಾಸಿಗಳಾದ ಅರುಣ್, ಮಾರುತಿ, ಮಣಿಕಂಠ ಎಂಬುವವರನ್ನು ವಿಚಾರಣೆ ನಡೆಲಾಗಿದೆ. ಅರುಣ್ ಹಿಂದೆ ಟಿವಿ ಚಾನೆಲ್‌ಗಳಲ್ಲಿ ಸ್ಟಿಂಗ್ ಆಪರೇಷನ್ ಮಾಡುತ್ತಿದ್ದ ಎಂದು ತಿಳಿದು ಬಂದಿದ್ದು. ಮಾರುತಿ, ಮಣಿ ಸಹೋದರರು ಕಮಲಾನಗರದಲ್ಲಿ ಅಂಗಡಿಯನ್ನು ತೆರೆದಿದ್ದರು. ಶಂಕಿತರೊಂದಿಗೆ ಸಂಪರ್ಕದಲ್ಲಿದ್ದರಿಂದ ಇವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಇದನ್ನು ಓದಿ:ಸಿಡಿ‌ ಪ್ರಕರಣದಲ್ಲಿ ನಿರ್ಭಯಾ ಗೈಡ್​ಲೈನ್ಸ್ ಉಲ್ಲಂಘನೆ: ಪೊಲೀಸ್ ಆಯುಕ್ತರಿಗೆ ದೂರು ನೀಡಿದ ವಕೀಲ

ಇನ್ನೂ ಹಲವರು ಮೇಲೆ ಶಂಕೆ

ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದ್ದು, ರಮೇಶ್ ಜಾರಕಿಹೊಳಿ ಜಿಲ್ಲೆಯಲ್ಲಿಯೂ ಶಂಕಿತರು ಇರಬಹುದೆಂದು ತನಿಖಾಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಎಸ್‌ಐಟಿಯ ಒಂದು ತಂಡವು ಶಂಕಿತರ ಮೇಲೆ ನಿಗಾ ಇರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಬೆಳಗಾವಿ ಪೊಲೀಸರು ಬೆಂಗಳೂರಿಗೆ ಆಗಮನ

ಬೆಳಗಾವಿ ಎಪಿಎಂಸಿ ಪೊಲೀಸ್ ಇನ್‌ಸ್ಪೆಕ್ಟರ್ ನೇತೃತ್ವದಲ್ಲಿ ತಂಡವು ಬೆಂಗಳೂರಿಗೆ ಬಂದಿಳಿದಿದ್ದು, ಯುವತಿ ವಾಸವಿದ್ದ ಆರ್.ಟಿ ನಗರದ ಪಿಜಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಯುವತಿಗಾಗಿ ಹುಡುಕಾಟ ನಡೆಸಲಿದ್ದಾರೆ. ಯುವತಿ ಅಪಹರಣ ಆಗಿದ್ದಾಳೆ ಎಂದು ದೂರು ನೀಡಿದ ಪೋಷಕರು ಅಜ್ಞಾತ ಸ್ಥಳಕ್ಕೆ ಹೋಗಿದ್ದು, ಎಸ್‌ಐಟಿ ತಂಡ ವಿಚಾರಣೆಗಾಗಿ ನೋಟಿಸ್ ನೀಡುವ ಸಾಧ್ಯತೆ ಹೆಚ್ಚಿದೆ.

ಪಕ್ಷಗಳ ಫೋಟೋ ಟ್ವೀಟ್ ವಾರ್

ಸಿಡಿ ಪ್ರಕರಣ ಸಂಬಂಧ ಕಾಂಗ್ರೆಸ್ - ಬಿಜೆಪಿ ಟ್ವೀಟ್ ಮೂಲಕ ಲೇವಡಿ ಮಾಡಿಕೊಂಡಿವೆ. ಫೋಟೋ ಪ್ರಕಟಣೆಯ ಟ್ವೀಟ್ ವಾರ್ ನಡೆದಿದ್ದು ಭ್ರಷ್ಟಾಚಾರ, ಅವ್ಯವಹಾರ, ಅಕ್ರಮ, ಸಿಡಿ ಇತ್ಯಾದಿ ವಿಚಾರ ಮುಂದಿಟ್ಟುಕೊಂಡು ಪರಸ್ಪರ ಎರಡೂ ಪಕ್ಷಗಳ ನಾಯಕರು ಕೆಲ ಆರೋಪಿಗಳ ಜತೆ ಇರುವ ಫೋಟೊ ಪ್ರಕಟಿಸುವ ಮೂಲಕ ಒಬ್ಬರನ್ನೊಬ್ಬರು ಕಾಲೆಳೆದಿದ್ದಾರೆ. ಬಿಜೆಪಿ ಟ್ವೀಟ್‌ನಲ್ಲಿ ಫೋಟೋ ಪ್ರಕಟಿಸಿ, ಹೆಗಲು ಮುಟ್ಟಿ ನೋಡಿಕೊಂಡಿದ್ದಕ್ಕೂ ಈ ಚಿತ್ರಕ್ಕೂ ಸಂಭಂಧ ವಿರಬಹುದೇ ? ಮಾಸ್ಟರ್ ಮೈಂಡ್ ಮತ್ತು ರಿಂಗ್ ಮಾಸ್ಟರ್ ಒಂದೇ ಫ್ರೇಮ್​ನಲ್ಲಿ ಸಿಲುಕಿಕೊಂಡಿರುವುದಕ್ಕೂ ನನ್ನನ್ನು ಸಿಲುಕಿಸುವ ಕುತಂತ್ರ ಎನ್ನುವ ಸ್ವ-ರಕ್ಷಣಾ ಆಟ ಆಡಿರುವುದಕ್ಕೂ ಸಂಭಾನಧವಿರಬಹುದೇ ? ಎಂದು ಬರೆದುಕೊಂಡಿದೆ.

ಪ್ರತಿಯಾಗಿ ನಾಲ್ಕು ಫೋಟೋ ಬಳಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಹೆಣ್ಣು ಮಕ್ಕಳ ದುರ್ಬಳಕೆಯನ್ನು ಸಮರ್ಥಿಸುತ್ತಿರುವ ರಾಜ್ಯ ಬಿಜೆಪಿ ದೇಶದ್ರೋಹಿ ಹಾಗೂ ಅತ್ಯಾಚಾರಿಯೊಂದಿಗೆ ನರೇಂದ್ರ ಮೋದಿ ಅವರಿಗೆ ಏನು ನಂಟು?, ಸಂಸದ ತೇಜಸ್ವಿ ಸೂರ್ಯನಿಗೂ ಡ್ರಗ್ ಡೀಲರ್‌ಗೂ ಏನು ಸಂಬಂಧ ? ಸಂಸದ ಪ್ರತಾಪ್ ಸಿಂಹ ಹಾಗೂ ಈ ಆರೋಪಿಗೂ ಏನು ಲಿಂಕ್ ? ಡಿಸಿಎಂ ಲಕ್ಷ್ಮಣ್ ಸವದಿ ಹಾಗೂ ಯುವರಾಜನಿಗೂ ಏನು ಗೆಳೆತನ ? ಹೆಗಲು ಮುಟ್ಟಿಕೊಂಡು ತಡೆಯಾಜ್ಞೆ ತಂದಿದ್ಯಾರು? ಎಂದು ಪ್ರಶ್ನಿಸಿದೆ.

ಇದನ್ನು ಓದಿ:ಮೊದಲು ನೀವು ಮಾಡಿದ ಪಾಪವನ್ನು ಜ್ಞಾಪಕ ಮಾಡಿಕೊಳ್ಳಿ: ಹೆಚ್​.ವಿಶ್ವನಾಥ್​​ ಗುಡುಗು

ABOUT THE AUTHOR

...view details