ಬೆಂಗಳೂರು: ಸಿಡಿ ಪ್ರಕರಣದ ಸುಳಿಯಲ್ಲಿ ಸಿಲುಕಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿಯನ್ನು ಹೊರತರಲು ಜಾರಕಿಹೊಳಿ ಕುಟುಂಬ ಖಾಸಗಿ ಗುಪ್ತಚರ ಸಂಸ್ಥೆಯ ಮೊರೆ ಹೋಗಿದೆ. ಪ್ರಕರಣ ಸಂಬಂಧ ಕೆಲ ಮಹತ್ವದ ಸಾಕ್ಷಿಗಳನ್ನು ಕಲೆಹಾಕುವಲ್ಲಿ ಪ್ರೈವೇಟ್ ಡಿಟೆಕ್ಟಿವ್ ಏಜೆನ್ಸಿ ಸಫಲವಾಗಿದ್ದು, ಜಾರಕಿಹೊಳಿ ಕುಟುಂಬದಲ್ಲಿ ಕೊಂಚ ನೆಮ್ಮದಿ ಮೂಡಿಸಿದೆ ಎನ್ನಲಾಗಿದೆ.
ಹೌದು, ಸಿಡಿ ಸುಳಿಯಿಂದ ಸಚಿವ ಸ್ಥಾನ ಕಳೆದುಕೊಂಡು ಅಜ್ಞಾತವಾಸಕ್ಕೆ ಒಳಗಾಗಿರುವ ರಮೇಶ್ ಜಾರಕಿಹೊಳಿ ರಕ್ಷಣೆಗೆ ಇಡೀ ಕುಟುಂಬ ಮುಂದಾಗಿದೆ. ವಿಶೇಷವಾಗಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸಹೋದರನನ್ನು ಸಿಡಿ ಸುಳಿಯಿಂದ ಪಾರು ಮಾಡಲು ಪೂರಕ ಸಾಕ್ಷಿಗಳಿಗಾಗಿ ಖಾಸಗಿ ಗುಪ್ತಚರ ಸಂಸ್ಥೆಯ ಮೊರೆ ಹೋಗಿದ್ದಾರೆ.
ಸಿಡಿ ಬಹಿರಂಗವಾಗುತ್ತಿದ್ದಂತೆ ತುರ್ತು ಸುದ್ದಿಗೋಷ್ಠಿ ನಡೆಸಿದ್ದ ಬಾಲಚಂದ್ರ ಜಾರಕಿಹೊಳಿ, ಇದು ನಮ್ಮ ಕುಟುಂಬದ ಗೌರವದ ವಿಷಯ, ರಾಜಕೀಯ ನಮಗೆ ಮುಖ್ಯವಲ್ಲ. ಕುಟುಂಬದ ಗೌರವವೇ ಮುಖ್ಯ. ಹಾಗಾಗಿ ಎಲ್ಲ ಕೆಲಸಗಳನ್ನು ಬದಿಗೊತ್ತಿ ಸಾಕ್ಷಿ ಕಲೆಹಾಕುವುದೇ ನಮ್ಮ ಮೊದಲ ಆದ್ಯತೆಯಾಗಿದೆ. ಅದಕ್ಕಾಗಿ ಖಾಸಗಿ ಡಿಟೆಕ್ಟಿವ್ ಏಜೆನ್ಸಿ ಸಹಕಾರ ಪಡೆದುಕೊಳ್ಳಲಾಗುತ್ತದೆ ಎಂದು ಪ್ರಕಟಿಸಿದ್ದರು.
ಇದನ್ನು ಓದಿ: 'ಪಿಐಎ' ಎಂದು ಬರೆದ ಮತ್ತೊಂದು ಬಲೂನ್ ಕನಾಚಕ್ನಲ್ಲಿ ಪತ್ತೆ
ಸದ್ಯ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ ನಡೆಸುತ್ತಿದ್ದು, ಆರೋಪಿಗಳು, ಯುವತಿಯ ಪೋಷಕರು ಮತ್ತು ರಮೇಶ್ ಜಾರಕಿಹೊಳಿ ಅವರ ಹೇಳಿಕೆ ದಾಖಲಿಸಿಕೊಂಡಿದೆ. ಯುವತಿ ಹಾಗೂ ಇತರು ಮೂವರನ್ನು ಪತ್ತೆ ಮಾಡಿಲ್ಲ. ಆದರೆ, ಇದರ ನಡುವೆಯೇ ಯುವತಿ ತನ್ನ ಕುಟುಂಬ ಸದಸ್ಯರ ಜೊತೆ ಮಾತನಾಡಿರುವ ಆಡಿಯೋ ಬಿಡುಗಡೆಯಾಗಿದೆ. ಆಡಿಯೋದಲ್ಲಿ ಡಿಕೆ ಶಿವಕುಮಾರ್ ಹೆಸರು ಪ್ರಸ್ತಾಪಗೊಂಡು ಹೊಸ ತಿರುವು ಪಡೆದುಕೊಂಡಿದೆ. ಇದರ ಹಿಂದೆ ಖಾಸಗಿ ಗುಪ್ತಚರ ಸಂಸ್ಥೆಯ ಸಹಕಾರ ಇದ್ದರೂ ಇರಬಹುದು ಎನ್ನಲಾಗುತ್ತಿದೆ. ಎಸ್ಐಟಿ ತನಿಖೆ ನಡೆಯುತ್ತಿದ್ದರೂ ಜಾರಕಿಹೊಳಿ ಕುಟುಂಬ ಪ್ರೈವೇಟ್ ಡಿಟೆಕ್ಟಿವ್ ಏಜೆನ್ಸಿ ನೆರವು ಪಡೆದುಕೊಂಡು ಇಡೀ ಘಟನಾವಳಿಯ ಬಗ್ಗೆ ಸಾಕ್ಷಿ ಕಲೆಹಾಕಲು ಮುಂದಾಗಿದೆ.
ಬೆಂಗಳೂರು, ಬೆಳಗಾವಿ, ನವದೆಹಲಿ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಖಾಸಗಿ ಗುಪ್ತಚರ ಸಂಸ್ಥೆ ತಡಕಾಟ ನಡೆಸಿದ್ದು, ಮಾಹಿತಿ ಸಂಗ್ರಹ ಕಾರ್ಯ ನಡೆಸಿದೆ. ಸಿಡಿ ಪ್ರಕರಣದ ಹಿಂದಿನ ಮಹಾನಾಯಕ ಯಾರು? ಮಹಾನಾಯಕನ ಜೊತೆ ಕೈ ಜೋಡಿಸಿದವರು ಯಾರು? ಷಡ್ಯಂತ್ರ ಯಾವ ರೀತಿ ನಡೆಸಿದೆ. ವಿಡಿಯೋ ಅಪ್ಲೋಡ್ ಮಾಡಿದ್ದು ಹೇಗೆ? ಈ ರೀತಿಯಾಗಿ ಇಡೀ ಪ್ರಕರಣ ಇಂಚಿಂಚೂ ಬಿಡದೇ ಗೌಪ್ಯವಾಗಿ ಮಾಹಿತಿ ಕಲೆಹಾಕಿ ಅಗತ್ಯ ಮಾಹಿತಿಯನ್ನು ಡಿಟೆಕ್ಟಿವ್ ಏಜೆನ್ಸಿ ಜಾರಕಿಹೊಳಿ ಕುಟುಂಬಕ್ಕೆ ನೀಡುತ್ತಿದೆ ಎನ್ನಲಾಗಿದೆ.
ಡಿಟೆಕ್ಟಿವ್ ಏಜೆನ್ಸಿ ದಾಖಲೆಗಳೇ ಸುದ್ದಿಗೋಷ್ಠಿಗೆ ಪುಷ್ಠಿ:ಸದ್ಯ ಒಂದಷ್ಟು ಮಹತ್ವದ ಮಾಹಿತಿಯನ್ನು ಖಾಸಗಿ ಗುಪ್ತಚರ ಸಂಸ್ಥೆ ಪತ್ತೆ ಮಾಡಿದ್ದು, ಸಾಕ್ಷಿಗಳೊಂದಿಗೆ ಜಾರಕಿಹೊಳಿ ಕುಟುಂಬಕ್ಕೆ ನೀಡಿದೆ. ಅದರ ಆಧಾರದಲ್ಲಿಯೇ ರಮೇಶ್ ಜಾರಕಿಹೊಳಿ, ಘಟನೆ ನಂತರ ಮೊದಲ ಸುದ್ದಿಗೋಷ್ಠಿ ನಡೆಸಿ ತಮ್ಮ ಬಳಿ 11 ಸಾಕ್ಷಿಗಳಿವೆ ಎಂದು ಹೇಳಿಕೆ ನೀಡಿದ್ದರು. ನಂತರ ಮತ್ತೆ ಸುದ್ದಿಗೋಷ್ಠಿ ನಡೆಸಿ ತಮ್ಮ ಜೇಬಿನಲ್ಲೇ ಮಹಾನಾಯಕ ಯಾರು ಎನ್ನುವುದಕ್ಕೆ ದಾಖಲೆಗಳಿವೆ. ಅದನ್ನೆಲ್ಲ ಬಹಿರಂಗಪಡಿಸಿದರೆ ಅಲ್ಲೋಲ ಕಲ್ಲೋಲವಾಗಲಿದೆ. ಘಟನೆ ಸಂಬಂಧ ಸಾಕಷ್ಟು ಸಾಕ್ಷಿಗಳಿವೆ. ಅದನ್ನು ಎಸ್ಐಟಿಗೆ ನೀಡುತ್ತೇನೆ ಎನ್ನುವ ಹೇಳಿಕೆ ನೀಡಿದ್ದರು ಎನ್ನಲಾಗುತ್ತಿದೆ.
ಎಸ್ಐಟಿ ನಂಬಿ ಕೂರುವಂತಿಲ್ಲ:ಸಿಡಿ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಆರೋಪಿಗಳ ಜಾಡು ಹಿಡಿದು ಹುಡುಕಾಟ ನಡೆಸಿದೆ. ಸದ್ಯ ಕೆಲ ಸಿಕ್ಕ ಆರೋಪಿಗಳ ಹೇಳಿಕೆ ದಾಖಲಿಸಿಕೊಂಡಿದೆ. ಆದರೆ, ಪ್ರಮುಖ ಆರೋಪಿಗಳು ಸಿಕ್ಕಿಲ್ಲ. ಅಲ್ಲದೇ ಬೇರೆ ಆಯಾಮದಲ್ಲಿ ಎಸ್ಐಟಿ ಸಾಕ್ಷಿಗಳ ಹುಡುಕಾಟವನ್ನು ಸಮರ್ಥವಾಗಿ ಮಾಡುತ್ತಿಲ್ಲ ಎನ್ನುವ ಅನುಮಾನದಿಂದಾಗಿ ಖಾಸಗಿ ಗುಪ್ತಚರ ಸಂಸ್ಥೆ ಮೂಲಕ ಸಾಕ್ಷಿಗಳ ಹುಡುಕಾಟಕ್ಕೆ ಜಾರಕಿಹೊಳಿ ಕುಟುಂಬ ಮುಂದಾಗಿದೆ.
ಕಾನೂನು ಹೋರಾಟದಲ್ಲಿ ಗೆಲುವಿಗೆ ಯತ್ನ:ಸದ್ಯ ಪ್ರಕರಣವನ್ನು ಎಸ್ಐಟಿ ತನಿಖೆಗೆ ವಹಿಸಲಾಗಿದೆ. ನ್ಯಾಯಾಂಗ ತನಿಖೆ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನಿಗಾದಲ್ಲಿ ತನಿಖೆ ನಡೆಯಬೇಕು ಎನ್ನುವ ಬೇಡಿಕೆ ಬರುತ್ತಿದೆ. ಒಂದು ವೇಳೆ ನ್ಯಾಯಾಲಯ ಇದರಲ್ಲಿ ಮಧ್ಯಪ್ರವೇಶ ಮಾಡಬಹುದು. ಆಗ ಕಾನೂನು ಹೋರಾಟದಲ್ಲಿ ಹಿನ್ನಡೆಯಾಗದಿರಲು ಸಾಕ್ಷಿಗಳು, ದಾಖಲೆಗಳು ಮುಖ್ಯವಾಗುತ್ತವೆ. ಹಾಗಾಗಿ ಕೊನೆ ಕ್ಷಣದಲ್ಲಿ ದಾಖಲೆಗಳ ಹುಡುಕಾಟದ ಬದಲು ಕೋರ್ಟ್ಗೆ ಬೇಕಾದ ದಾಖಲೆಗಳ ಸಂಗ್ರಹವನ್ನು ಖಾಸಗಿ ಗುಪ್ತಚರ ಸಂಸ್ಥೆ ಮೂಲಕ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.
ಬಾಲಚಂದ್ರ ಜಾರಕಿಹೊಳಿ ವಿಶೇಷ ಆಸಕ್ತಿಯಿಂದ ಡಿಟೆಕ್ಟಿವ್ ಏಜೆನ್ಸಿ ಜೊತೆ, ಷಡ್ಯಂತ್ರ ರೂಪಿಸಲಾಗಿದೆ ಎನ್ನುವುದಕ್ಕೆ ಪೂರಕ ದಾಖಲೆಗಳು, ಸಾಕ್ಷಿ ಆಧಾರಗಳನ್ನು ಕಲೆಹಾಕುವಲ್ಲಿ ನಿರತರಾಗಿದ್ದಾರೆ. ಶತಾಯ - ಗತಾಯ ಸಹೋದರನನ್ನು ಸಿಡಿ ಕೇಸ್ನಿಂದ ಹೊರತಂದು ಕುಟುಂಬದ ಗೌರವವನ್ನು ಕಾಪಾಡಿಕೊಳ್ಳಬೇಕು ಎನ್ನುವ ಪ್ರಯತ್ನ ನಡೆಸುತ್ತಿದ್ದಾರೆ.
ಆರಂಭಿಕ ಯಶ: ಜಾರಕಿಹೊಳಿ ಕುಟುಂಬ ಸಿಡಿ ಪ್ರಕರಣ ದಾಖಲೆಗಳ ಸಂಗ್ರಹಕ್ಕೆ ಖಾಸಗಿ ಗುಪ್ತಚರ ಸಂಸ್ಥೆಯ ಸಹಕಾರ ಪಡೆದುಕೊಂಡಿರುವುದಕ್ಕೆ ಆರಂಭಿಕ ಯಶಸ್ಸು ಲಭ್ಯವಾಗಿದೆ ಎನ್ನಲಾಗುತ್ತಿದೆ. ಷಡ್ಯಂತ್ರದ ಹಿಂದಿರುವವರ ಕುರಿತು ಮಹತ್ವದ ಮಾಹಿತಿ ಲಭ್ಯವಾಗಿದೆ ಎನ್ನಲಾಗುತ್ತಿದೆ. ಯುವತಿ ತನ್ನ ಕುಟುಂಬ ಸದಸ್ಯರ ಜೊತೆ ಮಾತುಕತೆ ನಡೆಸಿದ್ದು, ಡಿಕೆ ಶಿವಕುಮಾರ್ ಹೆಸರನ್ನು ಹೇಳಿದ್ದಾರೆ ಎನ್ನಲಾದ ಆಡಿಯೋ ಬಹಿರಂಗವಾಗಿದೆ. ಇದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಹಲವು ಅನುಮಾನಗಳಿಗೆ ಪರೋಕ್ಷ ಉತ್ತರವನ್ನು ನೀಡಿದೆ. ಇದೊಂದು ಆಡಿಯೋ ಇಡೀ ಘಟನೆಯ ಹಿಂದೆ ಷಡ್ಯಂತ್ರ ನಡೆದಿದೆ ಎನ್ನುವ ಆರೋಪಕ್ಕೆ ಪುಷ್ಟಿ ನೀಡಿದೆ. ರಮೇಶ್ ಜಾರಕಿಹೊಳಿ ಅವರನ್ನು ಸಿಲುಕಿಸುವ ಯತ್ನ ನಡೆದಿದೆ ಎನ್ನುವ ವಾದಕ್ಕೆ ಪುಷ್ಟಿ ನೀಡಿದ್ದು, ಒಂದಷ್ಟು ದಾಖಲೆಗಳು ಜಾರಕಿಹೊಳಿ ಕುಟುಂಬದ ಕೈ ಸೇರಿದೆ. ಹೀಗಾಗಿ ಖಾಸಗಿ ಗುಪ್ತಚರ ಸಂಸ್ಥೆಯಿಂದಾಗಿ ಕಾನೂನು ಹೋರಾಟಕ್ಕೆ ಬಲ ಬಂದಂತಾಗಿದ್ದು, ಡಿಟೆಕ್ಟಿವ್ ಏಜೆನ್ಸಿ ಆರಂಭಿಕ ಯಶ ತಂದುಕೊಟ್ಟಿದೆ ಎನ್ನಲಾಗುತ್ತಿದೆ.