ಬೆಂಗಳೂರು:ಬೆಳಗಾವಿ ಉಪ ಚುನಾವಣಾ ಪ್ರಚಾರ ಕಣದಲ್ಲಿ ಬಿಜೆಪಿ ಪರ ಜಾರಕಿಹೊಳಿ ಕುಟುಂಬ ನೇರವಾಗಿ ಪ್ರಚಾರದ ಕಣಕ್ಕಿಳಿಯುತ್ತಿಲ್ಲ, ಕೆ.ಎಂ.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮತ್ತು ಶಾಸಕ ರಮೇಶ್ ಜಾರಕಿಹೊಳಿ ತೆರೆ ಮರೆಯಲ್ಲೇ ಬೆಂಬಲಿಗರ ಮೂಲಕ ಚುನಾವಣಾ ಪ್ರಚಾರ ನಡೆಸಲಿದ್ದಾರೆ.
ಹೌದು, ಸಿಡಿ ಪ್ರಕರಣದಲ್ಲಿ ಸಿಲುಕಿ ಸಚಿವ ಸ್ಥಾನ ಕಳೆದುಕೊಂಡಿರುವ ಶಾಸಕ ರಮೇಶ್ ಜಾರಕಿಹೊಳಿ, ಬೆಳಗಾವಿ ಲೋಕಸಭಾ ಉಪ ಚುನಾವಣಾ ಪ್ರಚಾರ ಕಣದಿಂದ ಹೊರಗುಳಿದಿದ್ದಾರೆ. ಸದ್ಯ ಕೋವಿಡ್ ಪಾಸಿಟಿವ್ನಿಂದ ರಮೇಶ್ ಜಾರಕಿಹೊಳಿ ಗೋಕಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ನಿಂದ ಗುಣಮುಖರಾಗಿ ಹೊರಬಂದರೂ ಕ್ವಾರಂಟೈನ್ ನಿಯಮಾವಳಿ, ಎಸ್ಐಟಿ ವಿಚಾರಣೆ ಸಾಧ್ಯತೆಯಿಂದಾಗಿ ಉಪ ಸಮರದ ಪ್ರಚಾರ ಕಣದಿಂದ ಬಹುತೇಕ ಹೊರಗುಳಿದಿದ್ದಾರೆ.
ಇನ್ನು ರಮೇಶ್ ಜಾರಕಿಹೊಳಿ ಸಹೋದರ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕೂಡ ಬೆಳಗಾವಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುವ ಕುರಿತು ಉತ್ಸಾಹ ತೋರಿಲ್ಲ. ಸಹೋದರನನ್ನು ಸಿಡಿ ಸುಳಿಯಿಂದ ಹೊರತರಲು ಹಗಲಿರುಳಿ ಶ್ರಮಿಸುತ್ತಿದ್ದಾರೆ. ಖಾಸಗಿ ಗುಪ್ತಚರ ಸಂಸ್ಥೆಯ ಸಹಕಾರದೊಂದಿಗೆ ರಮೇಶ್ ಜಾರಕಿಹೊಳಿ ವಿರುದ್ಧ ನಡೆದ ಷಡ್ಯಂತ್ರದ ಸಾಕ್ಷಿಗಳ ಕಲೆಹಾಕುವಲ್ಲಿ ನಿರತರಾಗಿದ್ದಾರೆ. ರಾಜಕೀಯಕ್ಕಿಂತಲೂ ನಮಗೆ ಕುಟುಂಬದ ಮರ್ಯಾದೆ ಮುಖ್ಯ ಎಂದಿರುವ ಬಾಲಚಂದ್ರ ಜಾರಕಿಹೊಳಿ ಪಕ್ಷದ ಜೊತೆಯೂ ಅಷ್ಟಾಗಿ ಕಾಣಿಸಿಕೊಳ್ಳದೇ ಸಿಡಿ ಷಡ್ಯಂತ್ರದ ಸಾಕ್ಷಿಗಳ ಹುಡುಕಾಟದಲ್ಲಿ ತೊಡಗಿಕೊಂಡಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಾಲಚಂದ್ರ ಜಾರಕಿಹೊಳಿಗೆ ಚುನಾವಣಾ ಪ್ರಚಾರಕ್ಕೆ ಆಗಮಿಸುವಂತೆ ಸೂಚನೆ ನೀಡಿದ್ದಾರೆ. ಆದರೆ, ಅದನ್ನು ಅಷ್ಟು ಗಂಭೀರವಾಗಿ ಪರಿಗಣಿಸಿಲ್ಲ, ಒಂದು ವೇಳೆ ತೀವ್ರ ಒತ್ತಡ ಹೇರಿದಲ್ಲಿ ಮಾತ್ರ ಪ್ರಚಾರ ಕಾರ್ಯದಲ್ಲಿ ನೇರವಾಗಿ ಭಾಗಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ ಆದರೆ, ಆ ಸಾಧ್ಯತೆ ಕಂಡುಬರುತ್ತಿಲ್ಲ.